
ಬೆಂಗಳೂರು, ಏಪ್ರಿಲ್ 28: ಆಂಧ್ರ ಪ್ರದೇಶ (Andhra Pradesh) ಕಾಣಿಪಾಕಂ ಸಮೀಪದ ತೋತಾಪಲ್ಲಿಯಲ್ಲಿ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲ ಬೆಂಗಳೂರು (Bengaluru) ಮೂಲದವರು ಎಂದು ತಿಳಿದುಬಂದಿದೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು, ಓರ್ವ ಮಗು ಮೃತಪಟ್ಟಿದೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಿಟಿಕಾ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ತಿರುಪತಿಯಿಂದ (Tirupati) ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ತುಮಕೂರು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಗರದ ಅಂತರಸನಹಳ್ಳಿ ಮಾರ್ಕೆಟ್ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ತಿಪ್ಪೇಸ್ವಾಮಿ (28) ಮತ್ತು ಪಾವಗಡ ತಾಲೂಕಿನ ನಾಗಲಮಡಿಕೆಯ ಪ್ರದೀಪ್ (23) ಮೃತ ದುರ್ದೈವಿಗಳು. ಯುವಕರು ಪವನ್ ಹುಂಡೈ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಯಲ್ಲಾಪುರದಿಂದ ಶಿರಾ ಗೇಟ್ ಕಡೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತುಮಕೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು, ಮದ್ವೆ ಮನೆಯಲ್ಲಿ ಸೂತಕ
ಮತ್ತೊಂದು ಪ್ರಕರಣದಲ್ಲಿ ತುಮಕೂರು ಹೊರವಲಯದ ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಭರತ್ (29) ಮೃತ ದುರ್ದೈವಿ. ಮೃತ ಭರತ್ ತುಮಕೂರು ನಗರದ ಉಪ್ಪಾರಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.