
ಬೆಂಗಳೂರು, ಮೇ 23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin nabin) ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಅವರ ಅದ್ಧೂರಿ ಸ್ವಾಗತಕ್ಕೆ ಬ್ರೇಕ್ ಹಾಕಲಾಗಿದೆ. ದೇಶಾದ್ಯಂತ ಇಂಧನ ದರಗಳ ಸತತ ಏರಿಕೆಯ ಬಿಸಿ ಹೆಚ್ಚಾಗಿದ್ದು, ಇಂದು ಸತತ ಮೂರನೇ ಬಾರಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಇಂದು ‘ರೋಜ್‌ಗಾರ್ ಮೇಳ’ದ ಮೂಲಕ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ. ಈ ಹೊತ್ತಿನ ಟಾಪ್ ಮೂರು ಸುದ್ದಿಗಳು ಇಲ್ಲಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ನಿತಿನ್ ನಬಿನ್ ಅವರ ಅದ್ಧೂರಿ ಸ್ವಾಗತ ಮತ್ತು ರೋಡ್ ಶೋಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಪ್ರಧಾನಿ ಮೋದಿ ಅವರ ಪೆಟ್ರೋಲ್, ಡೀಸೆಲ್ ಮಿತಬಳಕೆಯ ಕರೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಏರ್ಪೋರ್ಟ್‌ನಿಂದ ಕೇವಲ 4 ಎಲೆಕ್ಟ್ರಿಕ್ ಕಾರುಗಳಲ್ಲಿ ಅವರು ಸಂಚರಿಸಲಿದ್ದಾರೆ. ನಾಳೆ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಮುಗಿಸಿ, ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಅವರು, ಪಕ್ಷದ ಕಚೇರಿಗೆ ಯಾವುದೇ ಹಾರ-ತುರಾಯಿ, ಮೆರವಣಿಗೆಗಳಿಲ್ಲದೆ ಅತ್ಯಂತ ಸರಳವಾಗಿ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ Nitin Nabin: ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ; ನಾಳೆಯೇ ಅಧಿಕಾರ ಸ್ವೀಕಾರ
ತೈಲ ಮಾರುಕಟ್ಟೆ ಕಂಪನಿಗಳು ಸತತವಾಗಿ ಇಂಧನ ದರ ಹೆಚ್ಚಿಸುತ್ತಿದ್ದು, ಗ್ರಾಹಕರ ಮೇಲೆ ಭಾರಿ ಹೊರೆ ಬೀಳುತ್ತಿದೆ. ಇತ್ತೀಚಿನ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ 87 ಪೈಸೆ ಏರಿಕೆಯಾಗಿ 99.51 ರೂ. ಹಾಗೂ ಡೀಸೆಲ್ 91 ಪೈಸೆ ಹೆಚ್ಚಿ 92.49 ರೂ. ತಲುಪಿದೆ. ಇನ್ನು ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ., ಮುಂಬೈನಲ್ಲಿ 107.56 ರೂ. ಮತ್ತು ಚೆನ್ನೈನಲ್ಲಿ 104.54 ರೂ. ಗಳಾಗಿದೆ. ಒಮ್ಮೆಗೆ ಲೀಟರ್‌ಗೆ ಸುಮಾರು 3 ರೂ.ವರೆಗೂ ದರ ಹೆಚ್ಚಿಸುವ ಮೂಲಕ ಕಂಪನಿಗಳು ದೀರ್ಘಾವಧಿಯ ಬೆಲೆ ಸ್ಥಿರತೆಗೆ ಸಂಪೂರ್ಣ ಬ್ರೇಕ್ ಹಾಕಿವೆ.
ಇದನ್ನೂ ಓದಿ ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿಎಷ್ಟಿದೆ?
ದೇಶದ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರೋಜ್‌ಗಾರ್ ಮೇಳ’ದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೊಸದಾಗಿ ಆಯ್ಕೆಯಾದ 51,000 ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದುವರೆಗೆ ದೇಶಾದ್ಯಂತ ಆಯೋಜಿಸಲಾದ ಒಟ್ಟು 18 ರೋಜ್‌ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ನೇಮಕಾತಿ ಪತ್ರಗಳನ್ನು ವಿತರಿಸಿ ಸಬಲೀಕರಣಗೊಳಿಸಲಾಗಿದೆ.
ಇದನ್ನೂ ಓದಿ ರೋಜ್‌ಗಾರ್ ಮೇಳದಡಿ ನಾಳೆ ಪ್ರಧಾನಿ ಮೋದಿಯಿಂದ 51,000ಕ್ಕೂ ಅಧಿಕ ಯುವಕರಿಗೆ ನೇಮಕಾತಿ ದಾಖಲೆ ಹಸ್ತಾಂತರ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.