ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್​ಗಳು; ಗ್ಯಾರಂಟಿ ಗಮನದಲ್ಲಿ ಸಿಎಂ ಕನಸಿನ ಯೋಜನೆಗೇ ಇಲ್ಲ ಗ್ಯಾರಂಟಿ

ಬೆಂಗಳೂರಿನಲ್ಲಿ ಲಕ್ಷಾಂತರ ಬಡವರ ಹೊಟ್ಟೆ ತುಂಬಿಸ್ತಿದ್ದ ಇಂದಿರಾ ಕ್ಯಾಂಟೀನ್​ಗಳು, ಅಧಿಕಾರಿಗಳ ಅಸಡ್ಡೆಯಿಂದ ಸೊರಗಿ‌ ಹೋಗಿವೆ. ಸ್ಥಿರ ಕ್ಯಾಂಟೀನ್​ಗಳ ಸ್ಥಿತಿ ಚಿಂತಾಜನಕವಾಗಿದ್ರೆ ಮೊಬೈಲ್ ಕ್ಯಾಂಟೀನ್​ಗಳು ಸಂಚಾರವನ್ನೇ ನಿಲ್ಲಿಸಿವೆ. ಮುರಿದ ಡೋರ್​​, ಕಾಣೆಯಾದ ಟಯರ್​​, ತುಕ್ಕು ಹಿಡಿದ ವಾಹನ. ಒಂದೊಂದು ಮೊಬೈಲ್ ಕ್ಯಾಂಟೀನ್ ಒಂದೊಂದು ಕಥೆ ಹೇಳ್ತಿವೆ.

ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್​ಗಳು; ಗ್ಯಾರಂಟಿ ಗಮನದಲ್ಲಿ ಸಿಎಂ ಕನಸಿನ ಯೋಜನೆಗೇ ಇಲ್ಲ ಗ್ಯಾರಂಟಿ
ಇಂದಿರಾ ಮೊಬೈಲ್ ಕ್ಯಾಂಟೀನ್
Follow us
Kiran Surya
| Updated By: ಆಯೇಷಾ ಬಾನು

Updated on:Jun 11, 2024 | 9:33 AM

ಬೆಂಗಳೂರು, ಜೂನ್.11: ಬಡವರಿಗೆ ಅತಿ ಕಡಿಮೆ ದರದಲ್ಲಿ ಊಟ ನೀಡಲು 2017ರಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇಂದಿರಾ ಕ್ಯಾಂಟೀನ್ (Indira Canteen) ಆರಂಭಿಸಿದರು.‌ ಬೆಂಗಳೂರಿನಲ್ಲಿ 198 ವಾರ್ಡ್‌ಗಳ ಪೈಕಿ 175 ವಾರ್ಡ್‌ಗಳಲ್ಲಿ ಸ್ಥಿರ ಕ್ಯಾಂಟೀನ್‌, ಉಳಿದ ವಾರ್ಡ್‌ಗಳಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಯಿತು. ಆರಂಭದಲ್ಲಿ ಲಕ್ಷಾಂತರ ಬಡವರ ಹೊಟ್ಟೆ ತುಂಬಿಸಿದ್ದ ಕ್ಯಾಂಟೀನ್​ಗಳು ಬಿಬಿಎಂಪಿ (BBMP) ನಿರ್ಲಕ್ಷ್ಯದಿಂದ ಸೊರಗಿವೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಇರುವಾಗಲೇ ಸಿಎಂ ಕನಸಿನ ಯೋಜನೆಯಾಗಿರುವ ಇಂದಿರಾ ಮೊಬೈಲ್ ಕ್ಯಾಂಟೀನ್​ಗಳ ಸೇವೆ ಮರೆಯಾಗುತ್ತಿದೆ. ಮೊಬೈಲ್ ಕ್ಯಾಂಟೀನ್​ಗಳ ಸದ್ಯದ ಸ್ಥಿತಿಯ ಬಗ್ಗೆ ಟಿವಿ9 ವರದಿ ಬಿಚ್ಚಿಟ್ಟಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್​ಗಳು

ಜಯನಗರದ 9ನೇ ಬ್ಲಾಕ್‌ನಲ್ಲಿರುವ ಸಂಚಾರಿ‌ ಇಂದಿರಾ ಮೊಬೈಲ್ ಕ್ಯಾಂಟೀನ್​ನ ಡೋರ್ ಮುರಿದು ಹೋಗಿದೆ. ಟಯರ್ ಕಾಣೆಯಾಗಿದೆ. ವಸ್ತುಗಳು ಎಲ್ಲಂದರಲ್ಲಿ ಬಿದ್ದಿದ್ದಾವೇ, ಸ್ವಚ್ಛತೆಯೇ ಮರಿಚಿಕೆಯಾಗಿದೆ. ಇಲ್ಲಿನ ಇಂದಿರಾ ಮೊಬೈಲ್ ಕ್ಯಾಂಟೀನ್ ದುಸ್ಥಿತಿಗೆ ತಲುಪಿದ್ದು ಹಿಗೆಯೇ ಜನರಿಗೆ ಊಟ-ತಿಂಡಿ ಪೂರೈಕೆ ಮಾಡಲಾಗ್ತಿದೆ.

ಇದನ್ನೂ ಓದಿ: ಇಂಜಿನಿಯರಿಂಗ್‌ ಸೀಟು ಬಲು ದುಬಾರಿ; 10-15 % ಶುಲ್ಕ ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ನಿರ್ಧಾರ

ಚಾಮರಾಜಪೇಟೆಯ ಹನುಮಂತನಗರದಲ್ಲಿ ಎರಡು ವರ್ಷದಿಂದ ಇಂದಿರಾ ಮೊಬೈಲ್​​ ಕ್ಯಾಂಟೀನ್​​ ನಿಂತಲ್ಲೇ ನಿಂತಿದೆ. ಗಾಡಿ ತುಕ್ಕು ಹಿಡಿದಿದ್ದು ಗುಜರಿಗೆ ಸೇರುವಂತಾಗಿದೆ.‌ ಶ್ರೀನಗರ ಬಸ್​ ನಿಲ್ದಾಣದಲ್ಲಿ ಸಾವಿರಾರು ಜನರಿಗೆ ಈ ಕ್ಯಾಂಟೀನ್ ಉಪಯೋಗವಾಗ್ತಿತ್ತು. ಕಳೆದ ಎರಡು ವರ್ಷದ ಹಿಂದೆ ಸ್ಥಗಿತಗೊಂಡಿದ್ದು ಬಡವರು ಊಟಕ್ಕೆ ಪರದಾಡುವಂತಾಗಿದೆ. ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯೇ ಇದ್ದಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಸುಮಾರು 16 ಇಂದಿರಾ ಮೊಬೈಲ್ ಕ್ಯಾಂಟೀನ್​ಗಳು ನಿರ್ವಾಹಣೆ ಕೊರತೆಯಿಂದ ಕೆಟ್ಟು ಹೋಗಿದ್ವು. ಕಳೆದ ವರ್ಷ ಆಗಸ್ಟ್ ನಲ್ಲಿ ದುರಸ್ತಿ ಮಾಡಿ ಮರು ಆರಂಭಕ್ಕೆ ಸರ್ಕಾರ ಸೂಚಿಸಿತ್ತು.‌ ಅದರಂತೆ ಬಿಬಿಎಂಪಿ 1.22 ಕೋಟಿ ರೂಪಾಯಿ ಖರ್ಚು ಮಾಡ್ತೀವಿ ಅಂದಿತ್ತು. ಆದರೆ ಅವುಗಳ ಸ್ಥಿತಿ ಮಾತ್ರ ಇನ್ನೂ ಸರಿಯಾಗಿಲ್ಲ. ಜನರ ಉಪಯೋಗಕ್ಕೆ ಬಾರದೇ ಮೂಲೆ ಸೇರಿದ್ರೆ, ಓಪನ್ ಇರುವ ಕಡೆ ಸ್ವಚ್ಚತೆಯೇ ಮಾಯವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:56 am, Tue, 11 June 24