ಬೆಂಗಳೂರು, ಮಾರ್ಚ್ 1: ಬೆಳಗ್ಗಿನ ಉಪಾಹಾರಕ್ಕೆ ಬಹುತೇಕರ ಆಯ್ಕೆಯಾಗಿರುವ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ, ಬೆಂಗಳೂರಿನ ಹಲವೆಡೆ ಇನ್ನೂ ಕೂಡ ಇಡ್ಲಿ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಮೆಜೆಸ್ಟಿಕ್ ಸುತ್ತಮುತ್ತ ಸೇರಿದಂತೆ ಹಲವೆಡೆ ಇನ್ನೂ ಕೂಡ ಕೆಲವರು ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆ ಬಳಕೆ ಮಾಡುತ್ತಿರುವುದು ‘ಟಿವಿ9’ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ. ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಕೇಳಿದರೆ, ವ್ಯಾಪಾರಿಗಳು ಕಿರಿಕ್ ಮಾಡಿದ ಘಟನೆಯೂ ಕೆಲವೆಡೆ ನಡೆದಿದೆ.
ಇಡ್ಲಿ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದ್ದರೂ ಇನ್ನೂ ಕೆಲವು ಬೀದಿ ಬದಿ ವ್ಯಾಪಾರಸ್ಥರು ಎಚ್ಚೆತ್ತುಕೊಂಡಿಲ್ಲ.
ಇನ್ನು ‘ಟಿವಿ9’ ವರದಿಯಿಂದ ಎಚ್ಚೆತ್ತಿರುವ ಕೆಲ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕಿದ್ದಾರೆ. ಬಾಳೆ ಎಲೆ, ಪೇಪರ್ ಪ್ಲೇಟ್, ಸ್ಟೀಲ್ ಪ್ಲೇಟ್ ಬಳಕೆ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಆದೇಶಕ್ಕೆ ಜನರು ಪ್ರತಿಕ್ರಿಯೆ ನೀಡಿದ್ದು, ಪ್ಲಾಸ್ಟಿಕ್ ನಿಷೇಧಿಸಿರುವುದು ಉತ್ತಮ ನಿರ್ಧಾರ. ಮೊದಲು ಪ್ಲಾಸ್ಟಿಕ್ ಕಂಪನಿಗಳನ್ನು ಬ್ಯಾನ್ ಮಾಡಲಿ ಎಂದು ಆಗ್ರಹಿಸಿದ್ದಾರೆ.
ರಾಜಾಜಿನಗರದ ಇಎಸ್ಐ ಆಸ್ಪತ್ರೆ ಬಳಿಯೂ ಇಡ್ಲಿ ತಯಾರಿಕೆಗೆ ಬಟ್ಟೆ ಬಳಸಲಾಗುತ್ತಿದೆ. ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿರೋದು ಸ್ವಾಗತಾರ್ಹ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ಪ್ಲಾಸ್ಟಿಕ್ ಬ್ಯಾನ್ ಮಾಡಲಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಟ್ಯಾಟೂನಿಂದ ಬರುತ್ತೆ ಹೆಚ್ಐವಿ, ಕ್ಯಾನ್ಸರ್: ಆರೋಗ್ಯ ಇಲಾಖೆ ಅಲರ್ಟ್
ಇನ್ನು ಬೆಂಗಳೂರಿನ ಹಲವು ಹೋಟೆಲ್ಗಳಲ್ಲಿ ಬಟ್ಟೆಯನ್ನೇ ಬಳಸಿ ಇಡ್ಲಿ ತಯಾರಿಸಲಾಗುತ್ತಿದ್ದು, ಸರ್ಕಾರದ ಆದೇಶವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ರೀತಿಯ ವಿಚಾರ ಚರ್ಚೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಹಲವು ಹೋಟೆಲ್ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಇನ್ನೂ ಕೆಲವಡೆಗೆ ಪ್ಲಾಸ್ಟಿಕ್ ಹಾಳೆ ಬಳಸಿಯೇ ಇಡ್ಲಿ ತಯಾರಿಸುತ್ತಿದ್ದು, ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
Published On - 5:25 pm, Sat, 1 March 25