ಬೆಂಗಳೂರಿನದ್ದು ಅತ್ಯಂತ ಕೆಟ್ಟ ಟ್ರಾಫಿಕ್, ನಿಷ್ಪ್ರಯೋಜಕ ಸಂಚಾರ ಪೊಲೀಸರು: ಉತ್ತರ ಪ್ರದೇಶದ ಎಸ್​ಪಿ ಸಂಸದ ಆಕ್ರೋಶ

ಉತ್ತರ ಪ್ರದೇಶದ ಎಸ್​​ಪಿ ಸಂಸದ ರಾಜೀವ್ ರೈ ಬೆಂಗಳೂರಿನ ಹದಗೆಟ್ಟ ಸಂಚಾರ ದಟ್ಟಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟ್ರಾಫಿಕ್ ಪೊಲೀಸರ ಅಸಮರ್ಥತೆ ಮತ್ತು ಅದಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ಎಕ್ಸ್​​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಗಳ ಚರ್ಚೆ ಬೆನ್ನಲ್ಲೇ ಈ ವಿದ್ಯಮಾನ ರಾಜ್ಯದಲ್ಲಿ ಮತ್ತಷ್ಟು ಸದ್ದು ಮಾಡಿದೆ.

ಬೆಂಗಳೂರಿನದ್ದು ಅತ್ಯಂತ ಕೆಟ್ಟ ಟ್ರಾಫಿಕ್, ನಿಷ್ಪ್ರಯೋಜಕ ಸಂಚಾರ ಪೊಲೀಸರು: ಉತ್ತರ ಪ್ರದೇಶದ ಎಸ್​ಪಿ ಸಂಸದ ಆಕ್ರೋಶ
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ) ಹಾಗೂ ಎಸ್​ಪಿ ಸಂಸದ ರಾಜೀವ್ ರೈ

Updated on: Dec 01, 2025 | 1:03 PM

ಬೆಂಗಳೂರು, ಡಿಸೆಂಬರ್ 1: ಬೆಂಗಳೂರಿನ (Bengaluru) ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆನಂತರ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಉದ್ಯಮಿಗಳ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಇದೀಗ ಬೆಂಗಳೂರಿನ ಹದಗೆಟ್ಟ ಟ್ರಾಫಿಕ್ ಬಗ್ಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಬಿಸಿ ಅವರಿಗೂ ಭಾನುವಾರ ತಟ್ಟಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ಎಸ್‌ಪಿ ಸಂಸದ ರಾಜೀವ್ ರೈ ಎಕ್ಸ್ ಸಂದೇಶದಲ್ಲಿ ಏನಿದೆ?

‘ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ ಕ್ಷಮಿಸಿ, ಬೆಂಗಳೂರಿನದ್ದು ಅತ್ಯಂತ ಕೆಟ್ಟ ಸಂಚಾರ ವ್ಯವಸ್ಥೆ. ಜವಾಬ್ದಾರಿ ಇಲ್ಲದ, ಪ್ರಯೋಜನಕ್ಕೆ ಬಾರದ ಸಂಚಾರ ಪೊಲೀಸರು. ಅವರು ಕನಿಷ್ಠಪಕ್ಷ ದೂರವಾಣಿ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ. ನಾನು ಎಷ್ಟು ಬಾರಿ ಫೋನ್ ಮಾಡಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಯನ್ನು ಕೂಡ ಇಲ್ಲಿ ಲಗತ್ತಿಸಿದ್ದೇನೆ. ಸುಮಾರು ಒಂದು ಗಂಟೆಯಿಂದ ನಾವು ರಾಜಕುಮಾರ್ ಸಮಾಧಿ ಬಳಿ ರಸ್ತೆಯಲ್ಲಿ ಸಂಚಾರದಟ್ಟಣೆಯಲ್ಲಿ ಸಿಲುಕಿದ್ದೇವೆ. ಇದರಿಂದಾಗಿ ನಮಗೆ ವಿಮಾನ ತಪ್ಪಲಿದೆ. ಸಂಸತ್ ಅಧಿವೇಶನಕ್ಕೆ ಹಾಜರಾಗುವುದಕ್ಕೆ ಕೂಡ ಅಡ್ಡಿಯಾಗಲಿದೆ. ಇಷ್ಟೊಂದು ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ ಇದ್ದರೂ ಸುತ್ತಲೂ ಒಬ್ಬ ಪೊಲೀಸ್ ಕೂಡ ಕಾಡುತ್ತಿಲ್ಲ. ಈ ಸುಂದರ ನಗರದ ಹೆಸರು ಮತ್ತು ಮೋಡಿಯನ್ನು ಹಾಳು ಮಾಡಲು ಈ ಅಸಮರ್ಥ ಸಂಚಾರ ಪೊಲೀಸ್ ಅಧಿಕಾರಿಗಳು ಸಾಕು. ಈ ಬೆಂಗಳೂರು ಸಂಚಾರ ದಟ್ಟಣೆ ಅತ್ಯಂತ ಕುಖ್ಯಾತಿ ಗಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ’ ಎಂದು ರಾಜೀವ್ ರೈ ಎಕ್ಸ್ ಸಂದೇಶದಲ್ಲಿ ಭಾನುವಾರ ಸಂಜೆ ಉಲ್ಲೇಖಿಸಿದ್ದರು.

ಎಸ್‌ಪಿ ಸಂಸದ ರಾಜೀವ್ ರೈ ಎಕ್ಸ್ ಸಂದೇಶ


ಇಷ್ಟೇ ಅಲ್ಲದೆ, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸಂಬಂಧಿಸಿದ ಯಾವೆಲ್ಲ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದ್ದರೂ ಅವುಗಳ ಸ್ಕ್ರೀನ್‌ಶಾಟ್ ಲಗತ್ತಿಸಿದ್ದಾರೆ. ಯಾವ ಕರೆಗೂ ಟ್ರಾಫಿಕ್ ಪೊಲೀಸರು ಸ್ಪಂದಿಸಿಲ್ಲ ಎಂದಿದ್ದಾರೆ.

ಈ ಎಕ್ಸ್​ ಸಂದೇಶದ ಬಗ್ಗೆ ಈಗ ವ್ಯಾಪಕ ಚರ್ಚಯಾಗುತ್ತಿದೆ. ನೆಟ್ಟಿಗರು ಅನೇಕ ರೀತಿಯ ಕಮೆಂಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: 5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ

ಈಮಧ್ಯೆ, ಸಂಸದ ರಾಜೀವ್​ ರೈ ಅಸಮಾಧಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ರಾಜೀವ್​ ರೈ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಬೆಂಗಳೂರು ಏನು, ಅದರ ಮಹತ್ವ ಏನು ಎಂಬ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Mon, 1 December 25

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us