AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!

ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಬೆಂಗಳೂರಿಗೆ ಭೇಟಿ ನೀಡಿ, ಸಂಸದ ತೇಜಸ್ವಿ ಸೂರ್ಯರೊಂದಿಗೆ ಮಾತುಕತೆ ನಡೆಸಿ, ಭಾರತ-ಅಮೆರಿಕ ಸಂಬಂಧ, ವ್ಯಾಪಾರ, ತಂತ್ರಜ್ಞಾನ ಸಹಭಾಗಿತ್ವದ ಕುರಿತು ಚರ್ಚಿಸಿದರು. ಬೆಂಗಳೂರು ತನ್ನ ಸಾಫ್ಟ್‌ವೇರ್ ರಫ್ತು, ಜಿಸಿಸಿಗಳ ಮೂಲಕ ಎರಡೂ ರಾಷ್ಟ್ರಗಳ ಆರ್ಥಿಕ ಬಾಂಧವ್ಯ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಭೇಟಿ ಉಭಯ ದೇಶಗಳ ಸ್ನೇಹಕ್ಕೆ ಹೊಸ ಆಯಾಮ ನೀಡಿದೆ ಎಂದು ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!
ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!
ಭಾವನಾ ಹೆಗಡೆ
|

Updated on: Feb 17, 2026 | 10:12 AM

Share

ಬೆಂಗಳೂರು, ಫೆಬ್ರವರಿ 17: ಇತ್ತೀಚೆಗೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ (Sergio Gor) ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿಗೂ ಭೇಟಿ ನೀಡಿ ನಗರವು ಚೈತನ್ಯಮಯವಾಗಿದೆ ಎಂದು ಶ್ಲಾಘಿಸಿದ್ದಾರೆ. ಈ ವೇಳೆ ಅವರ ಜೊತೆ ಒಡನಾಡಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಯುಎಸ್​ ರಾಯಭಾರಿಯ ಎಕ್ಸ್ ಪೋಸ್ಟ್

ಬೆಂಗಳೂರಿನ ಭೇಟಿ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅಮೇರಿಕದ ರಾಯಭಾರಿ ಸರ್ಜಿಯೋ, ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಬೀದಿಬದಿಯ ತಿಂಡಿ ತಿನಿಸುಗಳವರೆಗೆ ಬೆಂಗಳೂರಿಗೆ ಸರಿಸಾಟಿಯೇ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ತೇಜಸ್ವಿ ಸೂರ್ಯರೊಂದಿಗೆ ಸ್ಥಳೀಯ ಆಹಾರವನ್ನು ಸವಿಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಆತಿಥ್ಯಕ್ಕಾಗಿ ಸೂರ್ಯಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ.

ಎರಡು ರಾಷ್ಷ್ಟ್ರಗಳ ಬಾಂಧವ್ಯಕ್ಕೆ ಬೆಂಗಳೂರು ಸಾಕ್ಷಿ

ಈ ಬಗ್ಗೆ ತೇಜಸ್ವಿ ಸೂರ್ಯ ಸಹ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂಡಿರಾನಗರದ ಫಿಲ್ಟರ್ ಕಾಫಿ, ಮಸಾಲ ದೋಸೆ ಜೊತೆಗೆ ಅಮೆರಿಕ ರಾಯಭಾರಿಯೊಂದಿಗೆ ಭಾರತ–ಅಮೆರಿಕ ಸಂಬಂಧಗಳ ಕುರಿತು ಸಾರ್ಥಕ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ ವಾಣಿಜ್ಯ, ತಂತ್ರಜ್ಞಾನ ಹಾಗೂ ನವೀನತಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ವೃದ್ಧಿಯಾಗುತ್ತಿರುವ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸಿದೆವು ಎಂದು ಅವರು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ರಾಯಭಾರಿಗೆ “ನಮ್ಮ ಆಟೋ” ಪರಿಚಯಿಸಿ ಆಟೋದಲ್ಲಿ ಸಂಚರಿಸಿದ ಅನುಭವವೂ ಸ್ಮರಣೀಯವಾಗಿತ್ತು ಎಂದು ಸಂಸದರು ಉಲ್ಲೇಖಿಸಿದ್ದಾರೆ. ಮಸಾಲ ದೋಸೆಯಿಂದ ಮೆಷಿನ್ ಲರ್ನಿಂಗ್‌ವರೆಗೆ ಸಾಗಿದ ಬೆಂಗಳೂರಿನ ಪಯಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸುಂದರ ಸಂಯೋಜನೆಯನ್ನು ತೋರಿಸುತ್ತದೆ. ನಮ್ಮ ನಗರವು ಎರಡು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಡುವೆ ಬಾಂಧವ್ಯ ಹಾಗೂ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಾಫ್ಟ್‌ವೇರ್ ರಫ್ತುಗಳಲ್ಲಿ ಶೇ43ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಜಿಸಿಸಿಗಳ (Global Capability Centres) ಶೇ40ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಭಾರತ–ಅಮೆರಿಕಾ ನೂತನ ಸಹಭಾಗಿತ್ವದ ಮುಂದಾಳತ್ವವನ್ನು ನಮ್ಮ ಬೆಂಗಳೂರು ವಹಿಸಿಕೊಂಡಿದೆ ಎಂದು ಅವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.