ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ವರದಿ ಮೇಲೆ ಸೂಕ್ತ ಕ್ರಮ – ಬಸವರಾಜ ಬೊಮ್ಮಾಯಿಂದ ಭರವಸೆ: ಜಗದ್ಗುರು ವಚನಾನಂದ ಸ್ವಾಮೀಜಿ
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2A ಗೆ ಸೇರ್ಪಡೆಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಈ ಪ್ರಕ್ರಿಯೆ ನಿಧಾನವಾಗುತ್ತಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ವರದಿಯ ಮೇಲೆ ಶೀಘ್ರವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಭರವಸೆ ನೀಡಿದ್ದಾರೆ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿ (Vachanananda Swamiji) ತಿಳಿಸಿದರು. ಬೆಂಗಳೂರಿನಲ್ಲಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ನಂತರ ಮಾತನಾಡಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2A ಗೆ ಸೇರ್ಪಡೆಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಈ ಪ್ರಕ್ರಿಯೆ ನಿಧಾನವಾಗುತ್ತಿದೆ. ನಮ್ಮ ಸಮುದಾಯದ ಜನರು ಸಾಮಾಜಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಹಿಂದುಳಿದ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ಸುದೀರ್ಘವಾಗಿ ನಡೆಸಿದರು.
ಈ ವೇಳೆ ಮುಖ್ಯಮಂತ್ರಿಗಳು ಆಯೋಗ ಹಾಗೂ ಸಮಿತಿಯನ್ನು ರಚಿಸಿರುವುದು ಹಾಗೂ ಅದರಿಂದ ಬರುವಂತಹ ವರದಿಗಳ ಮೇಲೆ ಕಾನೂನಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿರುವ ಅನಿವಾರ್ಯತೆಯನ್ನು ನಮ್ಮೊಂದಿಗೆ ಹಂಚಿಕೊಂಡರು. ಕಾನೂನು ರೀತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ನಂತರವಷ್ಟೇ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ಆಯೋಗ ಮತ್ತು ಸಮಿತಿ ನೀಡುವ ವರದಿಯನ್ನ ನಿರೀಕ್ಷಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಈಗ ಅಮೆರಿಕದ ಅತ್ಯುತ್ತಮ ರೆಸ್ಟೋರೆಂಟ್
ಈ ಸಂದರ್ಭದಲ್ಲಿ ಸಚಿವ ಸಿ ಸಿ ಪಾಟೀಲ್, ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ಬಸವರಾಜ್ ದಿಂಡೂರು ,ಶ್ರೀ ಪೀಠದ ಪ್ರಧಾನ ಧರ್ಮದರ್ಶಿಗಳಾದ ಶ್ರೀ ಬಿಸಿ ಉಮಾಪತಿ, ಧರ್ಮದರ್ಶಿಗಳಾದ ಶ್ರೀ ಚಂದ್ರಶೇಖರ ಪೂಜಾರ, ವಕೀಲರಾದ ಬಿ.ಎಸ್ ಪಾಟೀಲರು ಉಪಸ್ಥಿತರಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Wed, 15 June 22