ರೌಡಿಶೀಟರ್ ಜೊತೆ ಸೇರಿ ಕೊಲೆ ಕೇಸ್ ಮುಚ್ಚಿಹಾಕಲು ಇನ್​ಸ್ಪೆಕ್ಟರ್ ಪ್ಲಾನ್! ಗಂಭೀರ ಆರೋಪ

ವರ್ತೂರು ಇನ್ಸ್‌ಪೆಕ್ಟರ್ ಯೋಗಾನಂದ್ ರೌಡಿಗಳೊಂದಿಗೆ ಕೈಜೋಡಿಸಿ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಕೊಲೆ ಪ್ರಕರಣವನ್ನು ಹಳ್ಳ ಹಿಡಿಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಚಾರ್ಜ್‌ಶೀಟ್ ಸಲ್ಲಿಸದೆ, ರೌಡಿಶೀಟರ್‌ಗಳಿಗೆ ಜಾಮೀನು ಸಿಗಲು ಕಾರಣರಾದ ಇನ್ಸ್‌ಪೆಕ್ಟರ್, ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ ಆರೋಪಿಗೆ ನೆರವಾಗಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನಿರಾಕರಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗಿದೆ.

ರೌಡಿಶೀಟರ್ ಜೊತೆ ಸೇರಿ ಕೊಲೆ ಕೇಸ್  ಮುಚ್ಚಿಹಾಕಲು ಇನ್​ಸ್ಪೆಕ್ಟರ್ ಪ್ಲಾನ್! ಗಂಭೀರ ಆರೋಪ
, ವರ್ತೂರು ಪೊಲೀಸ್ ಇನ್ಸ್‌ಪೆಕ್ಟರ್
Edited By:

Updated on: Feb 21, 2026 | 2:46 PM

ಬೆಂಗಳೂರು, ಫೆ.21: ನಗರದ ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (Varthur Police corruption) ಯೋಗಾನಂದ್ ಅವರು ರೌಡಿಶೀಟರ್‌ಗಳೊಂದಿಗೆ ಕೈಜೋಡಿಸಿ, ಕೊಲೆ ಪ್ರಕರಣವೊಂದನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂಬ ಆತಂಕಕಾರಿ ಆರೋಪ ಕೇಳಿಬಂದಿದೆ. ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಕೊಲೆ ಪ್ರಕರಣದ ತನಿಖೆಯಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಂತ್ರಸ್ತ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್‌ನನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿತ್ತು.

ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಲು ಸಹಕರಿಸಿದ್ದ. ಈ ಕೇಸ್ ವಾಪಸ್ ಪಡೆಯುವಂತೆ ರೇವಾ ಗ್ಯಾಂಗ್ ರೇವಂತ್ ಮೇಲೆ ಒತ್ತಡ ಹೇರಿತ್ತು. ರಾಜಿ ಮಾಡಿಕೊಳ್ಳೋಣ ಎಂದು ನಂಬಿಸಿ ಕರೆಸಿಕೊಂಡ ದುಷ್ಕರ್ಮಿಗಳು, ರೇವಂತ್‌ನ ಚಿಕ್ಕಪ್ಪನ ಕಣ್ಣೆದುರೇ ಆತನನ್ನು ಕೊಚ್ಚಿ ಕೊಂದಿದ್ದರು.

ತಮಿಳುನಾಡು ಪೊಲೀಸರಿಂದ ವರ್ಗಾವಣೆಯಾದ ಈ ಪ್ರಕರಣದ ತನಿಖೆ ನಡೆಸಿದ ವರ್ತೂರು ಪೊಲೀಸರು, ನಿಯಮದಂತೆ 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಜೈಲಿನಲ್ಲಿದ್ದ ರೌಡಿಶೀಟರ್ ರೇವಾ ಸೇರಿದಂತೆ ಏಳು ಮಂದಿ ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರಬಂದ ರೌಡಿಶೀಟರ್ ರೇವಾಗೆ ಪ್ರತಿದಿನ ಠಾಣೆಗೆ ಬಂದು ಸಹಿ ಹಾಕುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಇನ್ಸ್‌ಪೆಕ್ಟರ್ ಯೋಗಾನಂದ್ ಪ್ರಭಾವದಿಂದ ರೇವಾ ಠಾಣೆಗೆ ಬರುತ್ತಿಲ್ಲ. ಬದಲಾಗಿ, ಪೊಲೀಸರೇ ರೇವಾನ ಅಪಾರ್ಟ್‌ಮೆಂಟ್‌ಗೆ ಹೋಗಿ ಸಹಿ ಮಾಡಿಸಿಕೊಂಡು ಬರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಕಾಡಿಸುತ್ತಿದ್ದ ಕಾನ್ಸ್‌ಟೇಬಲ್‌; ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ!

ಕೊಲೆಯಾದ ರೇವಂತ್ ಕುಟುಂಬದವರಿಗೆ ಮತ್ತು ಸಾಕ್ಷಿಗಳಿಗೆ ರೌಡಿಗಳಿಂದ ಜೀವ ಬೆದರಿಕೆ ಇತ್ತು. ಈ ಬಗ್ಗೆ ರಕ್ಷಣೆ ಕೋರಿದರೂ ಇನ್ಸ್‌ಪೆಕ್ಟರ್ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ನ್ಯಾಯ ಸಿಗಬೇಕಿದ್ದ ಠಾಣೆಯೇ ಆರೋಪಿಗಳ ಪರವಾಗಿ ನಿಂತಿರುವುದು ಕುಟುಂಬದವರನ್ನು ಕಂಗಾಲಾಗಿಸಿದೆ. ರೌಡಿಶೀಟರ್ ಜೊತೆ ಸಖ್ಯ ಬೆಳೆಸಿರುವ ಇನ್ಸ್‌ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ನ್ಯಾಯ ಒದಗಿಸಬೇಕೆಂದು ರೇವಂತ್ ಪೋಷಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Sat, 21 February 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us