One 8 Commune Pub: ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಪಬ್​​ಗೆ ಬಿಬಿಎಂಪಿ ನೋಟಿಸ್

ವಿರಾಟ್ ಕೊಹ್ಲಿ ಅವರ ಸಹ ಮಾಲೀಕತ್ವದ ಬೆಂಗಳೂರಿನ ಒನ್ 8 ಕಮ್ಯೂನ್ ಬಾರ್ ಆ್ಯಂಡ್​ ರೆಸ್ಟೋರೆಂಟ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆಗಾಗಿ ನೋಟಿಸ್ ಜಾರಿಗೊಳಿಸಿದೆ. ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುನರಾವರ್ತಿತ ಉಲ್ಲಂಘನೆಗೆ ಏಳು ದಿನಗಳೊಳಗೆ ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮ ಎಂದು ಬಿಬಿಎಂಪಿ ಎಚ್ಚರಿಸಿದೆ.

One 8 Commune Pub: ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಪಬ್​​ಗೆ ಬಿಬಿಎಂಪಿ ನೋಟಿಸ್
ಒನ್ 8 ಕಮ್ಯೂನ್ ಪಬ್​, ವಿರಾಟ್​ ಕೋಹ್ಲಿ
Follow us
ಶಾಂತಮೂರ್ತಿ
| Updated By: ವಿವೇಕ ಬಿರಾದಾರ

Updated on:Dec 21, 2024 | 10:12 AM

ಬೆಂಗಳೂರು, ಡಿಸೆಂಬರ್​ 21: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇರುವ ಸ್ಟಾರ್​​ ಕ್ರಿಕೆಟರ್​ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಒನ್ 8 ಕಮ್ಯೂನ್​ ಬಾರ್ ಆ್ಯಂಡ್​ ರೆಸ್ಟೋರೆಂಟ್​ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಬಿಸಿ ಮುಟ್ಟಿಸಿದೆ. ಒನ್ 8 ಕಮ್ಯೂನ್​ ಬಾರ್ ಆ್ಯಂಡ್​ ರೆಸ್ಟೋರೆಂಟ್ (One 8 Commune Pub) ​ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್​ ನೀಡಿದೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಹಿಂದೆ ಕೂಡ ಒಂದು ಬಾರಿ ನೋಟಿಸ್​ ನೀಡಿದ್ದರೂ ಕೊಹ್ಲಿ ಮಾಲೀಕತ್ವದ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಉತ್ತರಿಸದೇ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಏಳು ದಿನದೊಳಗೆ ಸಮಜಾಯಿಸಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಪಡೆಯಲು ಮುಂದಿನ ಶೈಕ್ಷಣಿಕ ವರ್ಷದವರೆಗೆ ಅವಕಾಶ ನೀಡಿ: ಹೈಕೋರ್ಟ್​

ಈ ಸಂಬಂಧ ದೂರುದಾರ, ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಮಾತನಾಡಿ, ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್​ಗಳು ಅಗ್ನಿ ಶಾಮಕದಳದ ಯಾವುದೇ ಸುರಕ್ಷಿತೆಗಳು ಇಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ. ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂತಹ ಅವಘಡಗಳು ಮರುಕಳಿಸಬಾರದು ಅಂತ ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಹೇಳಿದರು.

ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷಿತೆ ಕ್ರಮಗಳು ಇಲ್ಲದಿರುವುದರಿಂದ ಅಂತಹ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಗ್ನಿ ಸುರಕ್ಷತೆ ಇರದ ಕಟ್ಟಡಗಳಲ್ಲಿ ಕಾರ್ಯಚಟುವಟಿಕೆ ಮಾಡದಂತೆ ನಿಯಮ ತರಲಾಗಿದೆ. ಆದರೆ, ನಿಯಮಗಳನ್ನು ಮೀರಿ ಪಬ್​ಗಳನ್ನು ನಡೆಸಲಾಗುತ್ತಿದೆ ಎಂದರು.

ಇದೇ ರೀತಿಯಾಗಿ ಎಂಜಿ ರಸ್ತೆಯ ರತ್ನ ಕಂಪ್ಲೇಕ್ಸ್​ನಲ್ಲಿ ಇರುವ ಹೈ ರೈಸ್ ಬಿಲ್ಡಿಂಗ್​ನಲ್ಲಿರುವ ರೆಸ್ಟೋರೆಂಟ್​​ನಲ್ಲಿ ಅಗ್ನಿಶಾಮಕ ದಳದ ಸುರಕ್ಷಿತ ಕ್ರಮ ತಗೆದುಕೊಂಡಿಲ್ಲ. ಈ ವಿಚಾರವಾಗಿ ನಾವು ಹೋರಾಟ ನಡೆಸಿದ್ದೇವೆ. ಬಿಬಿಎಂಪಿ ಗಮನಕ್ಕೆ ತಂದಿದ್ದೇವೆ. ಇದೀಗ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಸುರಕ್ಷಿತೆ ಕಾಪಾಡುವಲ್ಲಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ ಎಷ್ಟಮಟ್ಟಿಗೆ ಮುಂದಾಗುತ್ತಾರೆ ಕಾದು ನೋಡಬೇಕಿದೆ ಎಂದು ಹೇಳಿದರು.

ಒನ್ 8 ಕಮ್ಯೂನ್ ಮೇಲೆ ಎಫ್​ಐಆರ್

ಸರ್ಕಾರ ನಿಯಮವನ್ನು ಗಾಳಿಗೆ ತೂರಿ ತಡರಾತ್ರಿವರೆಗೂ ಪಬ್ ತೆರೆದು ಪಾರ್ಟಿಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಡರಾತ್ರಿ 1.20ರವರೆಗೂ ಪಬ್ ಓಪನ್ ಮಾಡಿದ್ದ ಆರೋಪದಡಿ ಎಫ್​ಐಆರ್​ ದಾಖಲಾಗಿತ್ತು.

ಪಬ್ ಓಪನ್ ಆಗಿದ್ದ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪಬ್​​ನಲ್ಲಿ ಗ್ರಾಹಕರು ಇದ್ದರು. ನಿಯಮ ಉಲ್ಲಂಘಿಸಿ ರಾತ್ರಿ ಅವಧಿಗೂ ಮೀರಿ ಪಬ್ ಓಪನ್​​​ ಮಾಡಿದ ಹಿನ್ನೆಲೆ ಎಫ್​ಐಆರ್ ದಾಖಲಿಸಲಾಗಿತ್ತು.

ಈ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ‌ ಶೇಖರ್ ಹೆಚ್.ಟಿ. ಪ್ರತಿಕ್ರಿಯಿಸಿ, ಸರ್ಕಾರ ನಿಗದಿ ಪಡಿಸಿದ ಅವಧಿ ಉಲ್ಲಂಘಿಸಿ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:47 am, Sat, 21 December 24