BBMP Election: ಬೆಂಗಳೂರಿನ ಮತದಾರರ ಸಂಖ್ಯೆ 5 ಲಕ್ಷ ಹೆಚ್ಚಳ, ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭ
ಬಿಬಿಎಂಪಿಯಲ್ಲಿ 243 ವಾರ್ಡ್ಗಳಿದ್ದು,, ಪ್ರತಿ ವಾರ್ಡ್ನಲ್ಲಿ ಸರಾಸರಿ 35ರಿಂದ 40 ಸಾವಿರ ಮತದಾರರಿದ್ದಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಚುನಾವಣಾ ಆಯೋಗವು ಸಿದ್ಧತೆ ಆರಂಭಿಸಿದ್ದು, ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸಿದೆ. 2015ರಲ್ಲಿ ಕಳೆದ ಬಾರಿ ಚುನಾವಣೆ ನಡೆದಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ 73,88,256 (73.88 ಲಕ್ಷ) ಮತದಾರರು ಇದ್ದರು. ಈ ಬಾರಿಯ ಅಂದರೆ 2022ರ ಚುನಾವಣೆಯಲ್ಲಿ 79,19,563 (79.19 ಲಕ್ಷ) ಮಂದಿ ಮತದಾನದ ಅರ್ಹತೆ ಪಡೆದಿದ್ದಾರೆ. ಮತದಾರರ ಸಂಖ್ಯೆಯು 5,31,307 (5.31 ಲಕ್ಷ) ಹೆಚ್ಚಾಗಿದೆ. ಬಿಬಿಎಂಪಿಯಲ್ಲಿ 243 ವಾರ್ಡ್ಗಳಿದ್ದು,, ಪ್ರತಿ ವಾರ್ಡ್ನಲ್ಲಿ ಸರಾಸರಿ 35ರಿಂದ 40 ಸಾವಿರ ಮತದಾರರಿದ್ದಾರೆ. ಹೈಕೋರ್ಟ್ ಸೂಚನೆಯ ನಂತರ ದಿನಾಂಕ ಘೋಷಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳ ನೇಮಕ, ಹೊಸ ಮತಗಟ್ಟೆಗಳ ಸೇರ್ಪಡೆ ಸೇರಿದಂತೆ ಹಲವು ಚಟುವಟಿಕೆಗಳು ಆರಂಭವಾಗಿವೆ.
ಸರ್ಕಾರದ ನಿಲುವು ಸ್ಪಷ್ಟಪಡಿಸಲು ಹೈಕೋರ್ಟ್ ಸೂಚನೆ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ನಿಗದಿ ಹಾಗೂ ಇತರ ವಿಚಾರಗಳ ಬಗ್ಗೆ ಹೈಕೋರ್ಟ್ನಲ್ಲಿ ನಿನ್ನೆ (ಸೆ 28) ವಿಚಾರಣೆ ನಡೆಯಿತು. ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಬಿಬಿಎಂಪಿ ಅಧಿಕಾರವಧಿ ಪೂರ್ಣಗೊಂಡು ಎರಡು ವರ್ಷಗಳಾಗಿವೆ. ಆಡಳಿತಾಧಿಕಾರಿಯೇ ಆಡಳಿತ ನಿರ್ವಹಿಸುತ್ತಿದ್ದಾರೆ. ಸಂವಿಧಾನದ ಆಶಯದಂತೆ ಶೀಘ್ರ ಚುನಾವಣೆ ನಡೆಯಬೇಕಿದೆ. ಮೀಸಲಾತಿ ಪ್ರಶ್ನೆಯ ಕಾರಣಕ್ಕೆ ಚುನಾವಣೆ ವಿಳಂಬ ಮಾಡುವಂತಿಲ್ಲ. ಶೀಘ್ರ ಚುನಾವಣೆ ನಡೆಸಬೇಕು ಎನ್ನುವುದು ಸುಪ್ರೀಂಕೋರ್ಟ್ನ ಅಭಿಪ್ರಾಯವೂ ಆಗಿದೆ’ ಎಂದು ಹೇಳಿದರು.
ಮೀಸಲಾತಿ ಮರುನಿಗದಿ ಕೋರಿರುವ ಅರ್ಜಿದಾರರ ಪರ ವಕೀಲರು, ‘ಒಬಿಸಿಗೆ ಸೂಕ್ತ ರೀತಿಯಲ್ಲಿ ಮೀಸಲು ಕಲ್ಪಿಸಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ‘ಸುಪ್ರೀಂಕೋರ್ಟ್ ಆದೇಶದಂತೆ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಬೇಕು. ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ ಎಂಬ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಹೈಕೋರ್ಟ್ ಸೂಚಿಸಿತು.
ವಿಚಾರಣೆಯನ್ನು ಶುಕ್ರವಾರಕ್ಕೆ (ಸೆ 30) ಮುಂದೂಡಿದ ಹೈಕೋರ್ಟ್, ‘ಮುಂದಿನ ವಿಚಾರಣೆವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಬಾರದು’ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ಸರ್ಕಾರವು ಒಬಿಸಿಗೆ ಸೂಕ್ತ ಮೀಸಲಾತಿ ಕಲ್ಪಿಸಲು ಸಿದ್ಧವಿದೆ’ ಎಂದರು.
Published On - 1:43 pm, Thu, 29 September 22