ತಾಯಿ ಆಸ್ತಿ ಬೇಕು, ಆಕೆ ಬೇಡ ಎಂದ ಮಗಳಿಗೆ ಹೈಕೋರ್ಟ್​​ ತಪರಾಕಿ: ಮಹತ್ವದ ಆದೇಶ ನೀಡಿದ ಕೋರ್ಟ್​

ತಾಯಿ ಬೇಡ, ಆಕೆಯ ಆಸ್ತಿ ಮಾತ್ರ ಬೇಕು ಎಂಬ ಮಗಳಿಗೆ ಕರ್ನಾಟಕ ಹೈಕೋರ್ಟ್​​ ಬಿಗ್​​ ಶಾಕ್​​ ಕೊಟ್ಟಿದೆ. ತಾಯಿ ನೀಡಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಹಿರಿಯ ನಾಗರಿಕ ನಿರ್ವಹಣಾ ನ್ಯಾಮಂಡಳಿ ಮತ್ತು ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ಉಚ್ಚನ್ಯಾಯಾಲಯ, ಮಗಳು ಸ್ವಂತ ಮನೆ ಹೊಂದಿದ್ದರೂ ತಮ್ಮ ವಯೋವೃದ್ಧ ತಾಯಿಯನ್ನು ಬಾಡಿಗೆ ಮನೆಯಲ್ಲಿ ವಾಸಿಸಲು ಬಿಟ್ಟಿರುವುದು ನೈತಿಕ ಮತ್ತು ಕಾನೂನುಬದ್ಧ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ತಾಯಿ ಆಸ್ತಿ ಬೇಕು, ಆಕೆ ಬೇಡ ಎಂದ ಮಗಳಿಗೆ ಹೈಕೋರ್ಟ್​​ ತಪರಾಕಿ: ಮಹತ್ವದ ಆದೇಶ ನೀಡಿದ ಕೋರ್ಟ್​
ಕರ್ನಾಟಕ ಹೈಕೋರ್ಟ್​​
Image Credit source: dinamalar.com

Updated on: May 15, 2026 | 11:44 AM

ಬೆಂಗಳೂರು, ಮೇ 15: ಕಾನೂನುಬದ್ಧ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ (High Court of Karnataka)​​, ತಾಯಿಯಿಂದ ಉಡುಗೊರೆಯಾಗಿ ಪಡೆದಿದ್ದ ಆಸ್ತಿಯನ್ನು ಹಿಂತಿರುಗಿಸುವಂತೆ 44 ವರ್ಷದ ಮಹಿಳೆಗೆ ಆದೇಶಿಸಿದ್ದ ತೀರ್ಪನ್ನು ಎತ್ತಿಹಿಡಿದಿದೆ. ತಾಯಿ ನೀಡಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದ್ದ ಹಿರಿಯ ನಾಗರಿಕ ನಿರ್ವಹಣಾ ನ್ಯಾಮಂಡಳಿ ಮತ್ತು ಉಪವಿಭಾಗಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಪವಿತ್ರಾ ಎಂಬ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಮೂರ್ತಿ ಸಚಿನ್ ಎಸ್. ಮಗದುಮ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಸ್ವಂತ ಆಸ್ತಿ ಹೊಂದಿದ್ದರೂ, ಅದನ್ನು ಮಕ್ಕಳಿಗೆ ವರ್ಗಾಯಿಸಿದ ಬಳಿಕ ಬಾಡಿಗೆ ಮನೆಯಲ್ಲಿ ವಾಸಿಸಲು ಒತ್ತಾಯಿತಳಾದ ಹಿರಿಯ ನಾಗರಿಕರ ಅಸಹಾಯಕ ಸ್ಥಿತಿಯನ್ನು ಈ ಪ್ರಕರಣ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಆದೇಶದಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಪತಿ ಜೊತೆಗಿನ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಹೇಮಾ ಸುಮಾರು ಮೂರುವರೆ ವರ್ಷಗಳ ಕಾಲ ತಮ್ಮ ಮಗಳು ಪವಿತ್ರಾ ಜೊತೆ ತಮ್ಮದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ, ಬಾಡಿಗೆ ಆದಾಯವನ್ನು ಅವರ ಹಿತಕ್ಕಾಗಿ ಬಳಸಲಾಗುತ್ತದೆ ಎಂಬ ಭರವಸೆಯೊಂದಿಗೆ ಆಸ್ತಿಯನ್ನು ಗಿಫ್ಟ್ ಡೀಡ್ ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಲು ಮಕ್ಕಳು ಸಲಹೆ ನೀಡಿದ್ದರು.

ಇದನ್ನೂ ಓದಿ: ಮೋದಿ ಮನವಿಗೆ ಸ್ಪಂದನೆ; ಪೆಟ್ರೋಲ್ ಉಳಿಸಲು ಸೈಕಲ್​ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ

ಹೇಮಾ ಇದಕ್ಕೆ ಒಪ್ಪಿಕೊಂಡು ಗಿಫ್ಟ್ ಡೀಡ್ ಮಾಡಿಕೊಟ್ಟ ಬಳಿಕ, ಮಗಳು ಪವಿತ್ರಾ ಮತ್ತು ಮಗ ಆರ್. ವೇಣುಗೋಪಾಲ್ ಆಸ್ತಿಯ ವಿವಿಧ ಭಾಗಗಳಿಂದ ಬಾಡಿಗೆ ಹಣ ಸಂಗ್ರಹಿಸಲು ಆರಂಭಿಸಿದ್ದರು. ಆದರೆ, ನಂತರ ಮಕ್ಕಳು ಮಾನಸಿಕ ಕಿರುಕುಳ ನೀಡಿದರು ಹಾಗೂ ಮೂಲಭೂತ ಅಗತ್ಯಗಳನ್ನು ಪೂರೈಸಲಿಲ್ಲ ಎಂದು ಹೇಮಾ ಆರೋಪಿಸಿದ್ದರು. ಅಲ್ಲದೆ ಇದರಿಂದ ತಾವು ಬಾಡಿಗೆ ಮನೆಯಲ್ಲಿ ವಾಸಿಸಬೇಕಾದ ಸ್ಥಿತಿ ಎದುರಾದರೂ, ಮಕ್ಕಳೇ ಆಸ್ತಿಯ ಬಾಡಿಗೆ ಹಣ ಪಡೆದುಕೊಳ್ಳುತ್ತಿದ್ದರು ಎಂದು ಅವರು ದೂರಿದ್ದರು. ಈ ಸಂಬಂಧ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ-2007ರ ಸೆಕ್ಷನ್ 23(1) ಅಡಿಯಲ್ಲಿ ಗಿಫ್ಟ್ ಡೀಡ್ ರದ್ದುಪಡಿಸಲು ಮೆಂಟಿನನ್ಸ್ ಟ್ರಿಬ್ಯೂನಲ್‌ಗೆ ಹೇಮಾ ಅರ್ಜಿ ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಟ್ರಿಬ್ಯೂನಲ್, ಗಿಫ್ಟ್ ಡೀಡ್ ರದ್ದುಪಡಿಸಿ ಆಸ್ತಿಯನ್ನು ಹೇಮಾಗೆ ಮರು ಹಸ್ತಾಂತರಿಸಲು ಆದೇಶಿಸಿತ್ತು. ಈ ಆದೇಶವನ್ನು ಉಪಆಯುಕ್ತರೂ ಮಾನ್ಯಗೊಳಿಸಿದ ಬಳಿಕ, ಮಗಳು ಪವಿತ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗಿಫ್ಟ್ ಡೀಡ್‌ನಲ್ಲಿ ತಾಯಿಯನ್ನು ನೋಡಿಕೊಳ್ಳಬೇಕೆಂಬ ಸ್ಪಷ್ಟ ಷರತ್ತು ಇಲ್ಲ ಎಂದು ವಾದಿಸಿದ್ದ ಪವಿತ್ರಾ ಪರ ವಕೀಲರು, ಆಸ್ತಿ ಪ್ರೀತಿ ಮತ್ತು ಸ್ನೇಹದಿಂದ ನೀಡಲಾಗಿದೆ. ಹೀಗಾಗಿ ಸೆಕ್ಷನ್ 23(1) ಅನ್ವಯಿಸುವುದಿಲ್ಲ ಎಂಬ ವಾದ ಮುಂದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ, ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಷರತ್ತು ಗಿಫ್ಟ್ ಡೀಡ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರಬೇಕೆಂಬ ಅವಶ್ಯಕತೆ ಇಲ್ಲ. ಪರಿಸ್ಥಿತಿ, ನಡೆನುಡಿ ಮತ್ತು ಪ್ರಕರಣದ ಸನ್ನಿವೇಶಗಳಿಂದ ಅದನ್ನು ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಹೇಮಾ ಪರ ವಕೀಲರು ನ್ಯಾಯಾಲದ ಗಮನಕ್ಕೆ ತಂದಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ ಒಂದು ಕಲ್ಯಾಣಮುಖಿ ಕಾನೂನು ಎಂದು ಹೇಳಿ, ಪ್ರತಿ ಪ್ರಕರಣದಲ್ಲೂ ಕಡ್ಡಾಯವಾಗಿ ಲಿಖಿತ ಷರತ್ತು ಬೇಕೆಂದು ಒತ್ತಾಯಿಸಿದರೆ ಕಾನೂನಿನ ಉದ್ದೇಶವೇ ವಿಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಹೇಮಾ ಅವರು ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು, ತಮ್ಮ ಸ್ವಂತ ಆಸ್ತಿಯನ್ನು ಮಗ ಮತ್ತು ಮಗಳ ಹೆಸರಿಗೆ ವರ್ಗಾಯಿಸುವ ಮೂಲಕ ಮಕ್ಕಳ ಮೇಲಿನ ನಂಬಿಕೆ ಮತ್ತು ಭದ್ರತೆಯ ನಿರೀಕ್ಷೆ ಇಟ್ಟಿದ್ದರು. ಈಗ ಅವರು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ತಮ್ಮ ಸ್ವಂತ ಆಸ್ತಿಯ ಆಶ್ರಯವನ್ನೂ, ಅದರಿಂದ ದೊರೆಯುವ ಆದಾಯವನ್ನೂ ಕಳೆದುಕೊಂಡಿದ್ದಾರೆ. ಈ ಎಲ್ಲ ಸನ್ನಿವೇಶಗಳನ್ನು ಪರಿಶೀಲಿಸಿದಾಗ, ಆಸ್ತಿ ವರ್ಗಾವಣೆ ಕಾಳಜಿ ಮತ್ತು ಪಾಲನೆ ಎಂಬ ಅಪ್ರತ್ಯಕ್ಷ ಭರವಸೆಯ ಮೇಲೆ ನಡೆದಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪವಿತ್ರಾ ಸ್ವಂತ ಮನೆ ಹೊಂದಿದ್ದರೂ, ತಮ್ಮ ವಯೋವೃದ್ಧ ತಾಯಿಯನ್ನು ಬಾಡಿಗೆ ಮನೆಯಲ್ಲಿ ವಾಸಿಸಲು ಬಿಟ್ಟಿರುವುದು ನೈತಿಕ ಮತ್ತು ಕಾನೂನುಬದ್ಧ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:43 am, Fri, 15 May 26

Follow Us