
ಬೆಂಗಳೂರು, ನವೆಂಬರ್ 06: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ವಿಚಾರವಾಗಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ವಿಚಾರಣೆ ವೇಳೆ ಬಯಲಾಗಿವೆ. ಎಲ್ಲರ ಜೊತೆಗೂ ಮದ್ಯ ಪಾರ್ಟಿ ಮಾಡಿಯೇ ಆರೋಪಿ ಇಂದುಶೇಖರ್ ಅವರನ್ನು ಕೊಲೆ ಮಾಡಿದ್ದ. ಮೊದಲು ಹೆಂಡತಿ ಜೊತೆಗೆ ಮದ್ಯ ಸೇವಿಸಿದ್ದ ಈತ ಬಳಿಕ ಗಲಾಟೆ ಆರಂಭಿಸಿದ್ದ. ಇದು ವಿಕೋಪಕ್ಕೆ ಹೋಗಿ ಆಕೆಯನ್ನ ಕೊಂದಿದ್ದ. ಬಳಿಕ ಮಗಳನ್ನು ನೋಡಲೆಂದು ಮನೆಗೆ ಬಂದಿದ್ದ ಅತ್ತೆಯ ಕತೆಯನ್ನೂ ಮುಗಿಸಿ ಎರಡೂ ಮೃತದೇಹಗಳನ್ನ ಹೊರಗಡೆ ಕೊಂಡೊಯ್ದು ಬಿಸಾಡಿ ಬಂದಿದ್ದ. ನಂತರ ಶ್ರೀರಾಂಪುರ ಪೊಲೀಸ್ ಠಾಣೆಗೆ ಆಗಮಿಸಿ ಆತನೇ ಮಿಸ್ಸಿಂಗ್ ಕೇಸ್ ಕೊಟ್ಟಿದ್ದ ಎಂಬುದು ಗೊತ್ತಾಗಿದೆ.
ನಂತರ ಇಂದುಶೇಖರ್ ಬಾವಂದಿರು ತಾಯಿ ಮತ್ತು ಸಹೋದರಿಯನ್ನು ಹುಡುಕಿಕೊಂಡು ಬಂದಾಗ ಅವರ ಜೊತೆಗೂ ಮದ್ಯದ ಪಾರ್ಟಿ ಮಾಡಿ ಬಳಿಕ ಅವರನ್ನು ಕೊಂದಿದ್ದಾನೆ. ವಿಚಾರಣೆ ವೇಳೆ ಆತನೇ ನೀಡಿರುವ ಮಾಹಿತಿಯ ಪ್ರಕಾರ ಅ.16ರಿಂದಲೇ ಸಾಮೂಹಿಕ ಹತ್ಯಾಕಾಂಡ ಆರಂಭವಾಗಿತ್ತು. ಕೊಲೆ ಬಳಿಕ ಶವಗಳನ್ನು ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿಘಾಟ್ ಹಾಗೂ ತಮಿಳುನಾಡಿಗೆ ಕೊಂಡೊಯ್ದು ಎಸೆದಿದ್ದ. ಕೊಲೆ ಬಳಿಕ ಎಲ್ಲರ ಮೊಬೈಲ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಆರೋಪಿ, ನಾವೆಲ್ಲಾ ಪ್ರವಾಸ ಹೋಗಿರೋದಾಗಿ ಸಂಬಂಧಿಕರಿಗೆ ತಿಳಿಸಿದ್ದ. ಟ್ರಿಪ್ ಹೋಗಿದ್ದೀವಿ ನೆಟ್ವರ್ಕ್ ಸಿಕ್ತಿಲ್ಲ ಎಂದು ಮೆಸೇಜ್ ಹಾಕಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಏಳು ಜನರ ಭೀಕರ ಹತ್ಯೆ ಪ್ರಕರಣ: ತಂದೆಯ ಕೃತ್ಯಕ್ಕೆ ಮಗಳೂ ಸಾಥ್ ನೀಡಿರುವ ಶಂಕೆ
ಇನ್ನು ಮನೆಯ ಸದಸ್ಯರು ಕಾಣೆ ಆಗುತ್ತಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಮೊಬೈಲ್ ಟ್ರೇಸ್ ಮಾಡಿದ್ದರು. ಈ ವೇಳೆ ಎಲ್ಲ ಮೊಬೈಲ್ ಒಂದೇ ಲೊಕೇಷನ್ನಲ್ಲಿರೋದು ಪತ್ತೆಯಾಗಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಜನರನ್ನು ಕೊಂದಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಹಾಗೂ ಕೆಲಕಾಲ ಪತ್ರಕರ್ತನಾಗಿ ಕೆಲಸ ಮಾಡಿದ್ದ ಎಂಬ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.