Bengaluru: ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು: 20 ಎಕರೆ ಭಸ್ಮ, ಜಿಂಕೆಗಳು ಬೆಂಕಿಗೆ ಆಹುತಿ
ಬೇಸಿಗೆಯ ದಿನಗಳು ಆಗಮಿಸುತ್ತಿದ್ದಂತೆ ಅಗ್ನಿ ಅನಾಹುತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಈಗಾಗಲೇ ಕರ್ನಾಟಕದ ಹಲವು ಕಡೆಗಳಲ್ಲಿ ಕಾಡ್ಗಿಚ್ಚಿನಿಂದ ಅರಣ್ಯಗಳು ಹೊತ್ತಿ ಉರಿಯುತ್ತಿವೆ. ಇದೀಗ ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಗಿಡ, ಮರಗಳು ಬೆಂಕಿಗಾಹುತಿಯಾಗಿವೆ.
ಬೆಂಗಳೂರು: ಬೇಸಿಗೆಯ ದಿನಗಳು ಆಗಮಿಸುತ್ತಿದ್ದಂತೆ ಅಗ್ನಿ ಅನಾಹುತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಕೆಲವೆಡೆ ಕಾಡ್ಗಿಚ್ಚಿನಿಂದ ಅರಣ್ಯಗಳು ಹೊತ್ತಿ ಉರಿಯುತ್ತಿವೆ. ಅದರಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು,ಗಿಡ, ಮರಗಳು ಆಹುತಿಯಾಗಿವೆ. ಬುಧವಾರ ಸಂಜೆ 6ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು ಆರಂಭದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಗ್ನಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಸುತ್ತಲು ದಟ್ಟವಾಗಿ ಹೊಗೆ ಆವರಿಸಿತು. ಅರಣ್ಯ ಇಲಾಖೆ ಕಚೇರಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕಗ್ಗಲಿಪುರ ಅರಣ್ಯ ವಲಯ, ಕೃಷ್ಣರಾಜಪುರ ಸೇರಿ ಸುತ್ತಮುತ್ತಲ ವಲಯಗಳ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ನಿನ್ನೆ(ಮಾರ್ಚ್ 15) ಸಂಜೆ 6ರಿಂದ ರಾತ್ರಿ 9ರವರೆಗೆ ತುರಹಳ್ಳಿಯ ಅರಣ್ಯ ಪ್ರದೇಶ ಹೊತ್ತಿ ಉರಿದಿದ್ದು, ಸುಮಾರು 25 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಗಿಡ, ಮರಗಳು ಬೆಂಕಿಗಾಹುತಿಯಾಗಿವೆ. ಇನ್ನು ಬೆಂಕಿಗೆ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಆಹುತಿಯಾಗಿವೆ ಎಂದು ತಿಳಿದುಬಂದಿವೆ. ಇನ್ನು ಮೂರು ಗಂಟೆಗೂ ಹೆಚ್ಚಿನ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಗಿದೆ.
ಕಾಡ್ಗಿಚ್ಚಿಗೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾಡ್ಗಿಚ್ಚು ಹೊತ್ತಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಸಹ ಇದೇ ರೀತಿ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ವರ್ಷ ಫೆಬ್ರವರಿ 15 ರಿಂದ ಮಾರ್ಚ್ 5ರ ನಡುವೆ ಕರ್ನಾಟಕದಲ್ಲಿ ಸುಮಾರು 2,000ಕ್ಕೂ ಹೆಚ್ಚು ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:18 am, Thu, 16 March 23