ಬೆಂಗಳೂರು ಕ್ಯಾಂಪಸ್ಗೆ ಜಾಗ ಕೊಟ್ಟು, ಪ್ಲಾನ್ಗೆ ಅನುಮೋದನೆ ನೀಡಿದ್ದು ಬಿಬಿಎಂಪಿ; ಒತ್ತುವರಿ ಆರೋಪದ ಬಗ್ಗೆ ವಿಪ್ರೋ ಪ್ರತಿಕ್ರಿಯೆ
ಅತಿಕ್ರಮಣ ಮಾಡಿರುವವರ ಪಟ್ಟಿಯಲ್ಲಿ ವಿಪ್ರೋ ಹೆಸರೂ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಂಪನಿಯು ಇದೀಗ ಸ್ಪಷ್ಟನೆ ನೀಡಿದೆ.
ಬೆಂಗಳೂರು: ಐಟಿ ಕ್ಷೇತ್ರದ ದೈತ್ಯ ಕಂಪನಿ ವಿಪ್ರೊ (Wipro) ಒತ್ತುವರಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ. ಬೆಂಗಳೂರಿನ ದೊಡ್ಡಕನ್ನಳ್ಳಿಯಲ್ಲಿ ಬಿಬಿಎಂಪಿ ಮಂಜೂರು ಮಾಡಿದ ಪ್ರದೇಶದಲ್ಲಿಯೇ ಕ್ಯಾಂಪಸ್ ನಿರ್ಮಿಸಲಾಗಿದೆ. ನಿರ್ಮಾಣ ಪ್ರಸ್ತಾವಕ್ಕೂ ಬಿಬಿಎಂಪಿ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ವಿಪ್ರೋ ಹೇಳಿದೆ. ಬೆಂಗಳೂರಿನ ರಸ್ತೆಗಳ ಮೇಲೆ ನೀರು ಹರಿದು, ಮನೆಗಳಿಗೆ ನೀರು ನುಗ್ಗಿದ ಸಮಸ್ಯೆಗಳಿಗೆ ರಾಜಕಾಲುವೆ ಅತಿಕ್ರಮಣವೇ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅತಿಕ್ರಮಣ ಮಾಡಿರುವವರ ಪಟ್ಟಿಯಲ್ಲಿ ವಿಪ್ರೋ ಹೆಸರೂ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಂಪನಿಯು ಇದೀಗ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ಕಲೆಹಾಕಿದ್ದ ಪಟ್ಟಿಯಲ್ಲಿ ಹಲವು ಹೈಪ್ರೊಫೈಲ್ ಡೆವಲಪರ್ಗಳು, ಬೃಹತ್ ಐಟಿ ಕಂಪನಿಗಳು ಮತ್ತು ಆಸ್ಪತ್ರೆಗಳ ಹೆಸರು ಕಾಣಿಸಿಕೊಂಡಿತ್ತು. ಇವರೆಲ್ಲರೂ ಸೇರಿ ಸುಮಾರು 700 ಸ್ಥಳಗಳಲ್ಲಿ ರಾಜಕಾಲುವೆ ಮುಚ್ಚಿಹಾಕುವುದು ಅಥವಾ ಒತ್ತುವರಿ ಮಾಡುವ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗಸ್ಟ್ 17ರ ಬಿಬಿಎಂಪಿ ಅಧಿಕಾರಿಗಳ ಟಿಪ್ಪಣಿಯಲ್ಲಿಯೂ ಐಟಿ ಕಂಪನಿಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ 15 ಕಡೆ ಅತಿಕ್ರಮಣ ನಡೆದಿದೆ ಎಂದು ಹೆಸರಿಸಲಾಗಿತ್ತು.
ಬಿಬಿಎಂಪಿ ಪಟ್ಟಿಯಲ್ಲಿ ಪ್ರೆಸ್ಟೀಜ್, ಬಾಗ್ಮನೆ ಟೆಕ್ ಪಾರ್ಕ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಇಕೋ ಸ್ಪೇಸ್, ಗೋಪಾಲನ್, ಸಲಾರ್ ಪುರಿಯಾ, ವಿಪ್ರೊ ಮತ್ತು ಕಾಂಗ್ರೆಸ್ ಮುಖಂಡ ಹ್ಯಾರಿಸ್ ನಲಪಾಡ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಹೆಸರು ಸೇರಿತ್ತು. ತಾನು ಅತಿಕ್ರಮಣ ಮಾಡಿಲ್ಲ ಎಂದು ವಿಪ್ರೋ ಇದೀಗ ಸ್ಪಷ್ಟಪಡಿಸಿದೆ. ಬಿಬಿಎಂಪಿ ಪಟ್ಟಿಯಲ್ಲಿ ಕಂಪನಿಯ ಹೆಸರು ಸೇರಿಸಲಾಗಿದೆ. ಆದರೆ ಬಿಬಿಎಂಪಿಯ ಅನುಮೋದನೆಯೊಂದಿಗೆ ಕ್ಯಾಂಪಸ್ ಕಟ್ಟಲಾಗಿದೆ ಎಂದು ವಿಪ್ರೋ ಹೇಳಿದೆ.
‘ನಾವು ಕಾನೂನಿಗೆ ಬದ್ಧವಾಗಿಯೇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದೇವೆ. ದೊಡ್ಡಕನ್ನಳ್ಳಿಯಲ್ಲಿರುವ ವಿಪ್ರೋ ಕ್ಯಾಂಪಸ್ ಸಹ ಬಿಬಿಎಂಪಿಯಿಂದ ಮಂಜೂರಾದ ನಕಾಶೆಗೆ ಮತ್ತು ಪ್ಲಾನ್ಗೆ ಅನುಗುಣವಾಗಿಯೇ ಇದೆ. ಬಿಬಿಎಂಪಿಯಿಂದ ನಮಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ಕಂಪನಿ ಹೇಳಿದೆ.
ಮಳೆ ನೀರಿನ ಸಹಜ ಹರಿವಿಗೆ ತಡೆಯೊಡ್ಡಿ ಪ್ರವಾಹಕ್ಕೆ ಕಾರಣವಾದ ಅತಿಕ್ರಮಣಗಳ ತೆರವಿಗೆ ಮುಂದಾಗಿರುವ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬೆಂಗಳೂರಿನ ವಿವಿಧೆಡೆ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಮಹದೇವಪುರ ವಲಯದ ಹಲವೆಡೆ ವರದಿಯಾದ ಭಾರೀ ಪ್ರವಾಹಕ್ಕೆ ಟೆಕ್ ಕಂಪನಿಗಳ ಅತಿಕ್ರಮಣವೇ ಮುಖ್ಯ ಕಾರಣ ಎಂದು ದೂರಲಾಗಿತ್ತು.
Published On - 9:55 am, Thu, 15 September 22