ರಾಜ್ಯ ಬಿಜೆಪಿ ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ: ಧರಣಿನಿರತ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸ್​​​

| Updated By: ಗಂಗಾಧರ​ ಬ. ಸಾಬೋಜಿ

Updated on: Feb 07, 2024 | 4:37 PM

ಕೇಂದ್ರ ಸರ್ಕಾರ ವಿರುದ್ಧ ಅನುದಾತ ತಾರತಮ್ಯ ಆರೋಪ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಇಂದು ದೆಹಲಿ ಚಲೋ ನಡೆಸಿದ್ದಾರೆ. ಜಂತರ್ ಮಂತರ್​​ನಲ್ಲಿ ಇಡೀ ಸರ್ಕಾರವೇ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ. ಇತ್ತ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಧರಣಿನಿರತ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ: ಧರಣಿನಿರತ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸ್​​​
ಯುವ ಕಾಂಗ್ರೆಸ್ ಪ್ರತಿಭಟನೆ
Follow us on

ಬೆಂಗಳೂರು, ಫೆಬ್ರವರಿ 7: ಅನುದಾನ ತಾರತಮ್ಯ, ಬರ ಪರಿಹಾರ ಹೀಗೆ ಹಲವು ವಿಚಾರಗಳಲ್ಲಿ ನಮಗೆ ಅನ್ಯಾಯ ಆಗುತ್ತಿದೆ ಎಂದು ಇಂದು ಕಾಂಗ್ರೆಸ್ (Congress)​ ಸರ್ಕಾರ ದೆಹಲಿಯಲ್ಲಿ ಬೃಹತ್​ ಹೋರಾಟವನ್ನೇ ನಡೆಸಿದೆ. ಜಂತರ್​ಮಂತರ್​ನಲ್ಲಿ ರಣಕಹಳೆ ಮೊಳಗಿಸಿದ ಕಾಂಗ್ರೆಸ್​ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ. ಇತ್ತ ನಗರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಪ್ರತಿಭಟನೆ ಮಾಡಿದರೆ, ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಬ್ಯಾರಿಕೇಡ್ ಅಳವಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಬಳಿ ಪ್ರವೇಶಿಸದಂತೆ ತಡೆಯಲಾಗಿದ್ದು, ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ವೇಳೆ ಬಿಜೆಪಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ವಿರೋಧ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರತ್ತ ನುಗ್ಗಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದು ಈ ವೇಳೆ ಪೊಲೀಸರು ತಡೆದರು. ಕಾಂಗ್ರೆಸ್​ಗೆ ಧಿಕ್ಕಾರ ಕೂಗಿ ಹನುಮ ಧ್ವಜ ಹಿಡಿದು ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಇದನ್ನೂ ಓದಿ: BJP Protest: ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ಬೆಂಬಲಿಸಲು ದೆಹಲಿಗೆ ಹೋಗಿದ್ದಾರೆ: ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ

ಕೆಪಿಸಿಸಿ ಎಸ್‌ಸಿ ಘಟಕದ ಅಧ್ಯಕ್ಷ ಧರ್ಮಸೇನಾ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ಮಲತಾಯಿ ಧೋರಣೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಪ್ರತಿಭಟಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಕಚೇರಿಯೊಳಗೆ ನುಗ್ಗಲು ಯತ್ನ

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟಿಸಿದ್ದು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದರು. ಈ ವೇಳೆ ವಿಧಾನಸೌಧದ ದಕ್ಷಿಣ ದ್ವಾರದ ಮೂಲಕ ಬಿಜೆಪಿ ನಾಯಕರು ಮುಖ್ಯಮಂತ್ರಿಗಳ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ತಡೆದಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್​ ಕಚೇರಿಯೊಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು

ಪೊಲೀಸರನ್ನು ತಳ್ಳಿ ವಿಜಯೇಂದ್ರ‌, ಅಶೋಕ್ ಮತ್ತು ಬಿಜೆಪಿ ಶಾಸಕರು ಮುಂದೆ ಹೋಗಿದ್ದು ಈ ವೇಳೆ ಪೊಲೀಸರ ಜೊತೆ ಬಿಜೆಪಿ ನಾಯಕರ ನೂಕಾಟ ತಳ್ಳಾಟ ನಡೆದಿದ್ದು ವಿಧಾನಸೌಧದ ದಕ್ಷಿಣ ದ್ವಾರದ ಬಳಿ ಹೈಡ್ರಾಮಾವೇ ನಡೆದಿದೆ. ದ್ವಾರದ ಮೆಟ್ಟಿಲು ಮೇಲೆ ಕುಳಿತು ಅಶೋಕ್, ವಿಜಯೇಂದ್ರ‌ ಮತ್ತು ಬೊಮ್ಮಾಯಿ‌ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ನಾಯಕರನ್ನು ಪೊಲೀಸರು ಬಲವಂತವಾಗಿ ಬಸ್​ಗೆ ಹತ್ತಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಧರಣಿ ಮಾಡಿರೋದು ಇದೇ ಮೊದಲು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಡಾ.ಜಿ.ಪರಮೇಶ್ವರ್​​​, ದಿನೇಶ್ ಗುಂಡೂರಾವ್​, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್​, ಹೆಚ್.ಕೆ.ಪಾಟೀಲ್​, ಮುನಿಯಪ್ಪ, ಜಮೀರ್​, ರಾಜಣ್ಣ, ಮಧು ಬಂಗಾರಪ್ಪ, ಕೃಷ್ಣ ಭೈರೇಗೌಡ, ಭೈರತಿ ಸುರೇಶ್​, ಕೆ.ಜೆ.ಜಾರ್ಜ್ ಸೇರಿದಂತೆ ಎಲ್ಲ ನಾಯಕರು ಭಾಗಿಯಾಗಿದ್ರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.