Namma Metro: ನಮ್ಮ ಮೆಟ್ರೋಗೂ ಕಾಲಿಟ್ಟ ಭಿಕ್ಷಾಟನೆ, ಮೊದಲ ಪ್ರಕರಣದಲ್ಲೇ 500 ರೂ. ದಂಡ

| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2023 | 12:34 PM

Begging In Namma Metro: ಬೆಂಗಳೂರಿನ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಇದೀಗ ನಮ್ಮ ಮೆಟ್ರೋಗೂ ಭಿಕ್ಷಾಟನೆ ಕಾಲಿಟ್ಟಿದೆ. ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ಘಟನೆ ಬೆಳಕಿಗೆ ಬಂದಿದೆ.

Namma Metro: ನಮ್ಮ ಮೆಟ್ರೋಗೂ ಕಾಲಿಟ್ಟ ಭಿಕ್ಷಾಟನೆ, ಮೊದಲ ಪ್ರಕರಣದಲ್ಲೇ 500 ರೂ. ದಂಡ
ನಮ್ಮ ಮೆಟ್ರೋ
Follow us on

ಬೆಂಗಳೂರು, (ನವೆಂಬರ್ 24): ಭಿಕ್ಷಾಟನೆ (Begging) ಒಂದು ರೀತಿಯಲ್ಲಿ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕೈಕಾಲು ಗಟ್ಟಿಮುಟ್ಟಾಗಿದ್ದರೂ ಸಹ ಮೈ ಬಗ್ಗಿಸಿ ದುಡಿಯಲಾಗದೇ ಈ ಭಿಕ್ಷಾಟನೆಗಿಳಿದಿದ್ದಾರೆ. ಬೆಂಗಳೂರಿನ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ, ರೈಲ್ವೇ ನಿಲ್ದಾಣ, ಟ್ರಾಫಿಕ್ ಸಿಗ್ನಲ್, ಮಾರ್ಕೆಟ್​ಗಳಲ್ಲಿ ಭಿಕ್ಷಾಟನೆ ನಡೆಯುತ್ತಿದೆ. ಇದೀಗ ನಮ್ಮ ಭಿಕ್ಷಾಟನೆ ನಮ್ಮ ಮೆಟ್ರೋಗೆ (Namma Metro) ಕಾಲಿಟ್ಟಿದೆ. ತಾನೊಬ್ಬ ಮೂಕ ಮತ್ತು ಕಿವುಡ ಎಂದು ಹೇಳಿಕೊಂಡ ಯುವಕನೊರ್ವ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ಬರುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಆತನ ಮೇಲೆ ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸಿದ್ದಾರೆ. ಕೊಪ್ಪಳ ಮೂಲದ ಮಲ್ಲಿಕಾರ್ಜುನ್‌ (20) ಎಂಬಾತನೇ ಮೆಟ್ರೋ ರೈಲಿನ ಒಳಗಡೆ ಭಿಕ್ಷೆ ಬೇಡುತ್ತಿದ್ದ ಯುವಕ.

20 ವರ್ಷದ ಕೊಪ್ಪಳ ಮೂಲದ ಮಲ್ಲಿಕಾರ್ಜುನ್‌ ಹಸಿರು ಮಾರ್ಗದಲ್ಲಿ ಬರುವ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ 150 ಕೊಟ್ಟು ಒಂದು ದಿನದ ಕಾರ್ಡ್‌ ತೆಗೆದುಕೊಂಡಿದ್ದ. ಯಶವಂತಪುರ ನಿಲ್ದಾಣದಿಂದ ನಾಗಸಂದ್ರ ಕಡೆಗೆ ಹೊರಟಿದ್ದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ರೈಲಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷೆ ಬೇಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತೆ ಸಿಬ್ಬಂದಿ ಎಲ್ಲಾ ನಿಲ್ದಾಣಗಳಿಗೂ ಈ ಬಗ್ಗೆ ಅಲರ್ಟ್‌ ಮಾಡಿದ್ದರು.

ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಸಿನಿ ತಾರೆಯರ ಕಲರವ: ಸಿನಿಮಾ ಶೋಟಿಂಗ್​ಗೆ ಬಿಎಂಆರ್​ಸಿಎಲ್ ಗ್ರೀನ್ ಸಿಗ್ನಲ್

ಸುಮಾರು ಒಂದು ಗಂಟೆ ಬಳಿಕ ಯಶವಂತಪುರಕ್ಕೆ ಹೊರಗೆ ಬರುವಾಗ ಆತನನ್ನು ತಡೆಯಲಾಯಿತು. ಬಳಿಕ ಬಿಎಂಆರ್‌ಸಿಎಲ್‌ ಸಿಬ್ಬಂದಿ ಮಲ್ಲಿಕಾರ್ಜುನ್‌ನನ್ನು ತಾವೇ ಮಲ್ಲೇಶ್ವರ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಆತ ಕಿವುಡ, ಮೂಗನಾಗಿರುವುದು ದೃಢಪಟ್ಟಿದೆ. ಏನೇ ಆಗಿದ್ದರೂ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುವುದಕ್ಕೆ ಅವಕಾಶವಿಲ್ಲ. ಹಾಗೇ ಪ್ರಯಾಣಿಕರಿಗೆ ತೊಂದರೆ ಮಾಡಿದ್ದಕ್ಕೆ 500 ರೂ. ದಂಡ ವಿಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Fri, 24 November 23