Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನಿ ಗೌಜುಗನ ಹಕ್ಕಿ ಸಾಕಣೆ ಮಾಡಿ ಲಾಭ ಗಳಿಸುತ್ತಿರುವ ಬೀದರ್ ರೈತ

ಬಹಳ ಅಪರೂಪದ ಆರೋಗ್ಯಕರ ಗುಣಗಳುಳ್ಳ ಜಪಾನಿ ಗೌಜುಗನ ಹಕ್ಕಿಗಳನ್ನು ಜಿಲ್ಲೆಯ ಔರಾದ್ ತಾಲೂಕಿನ ಜಾಕೀರ್ ಹುಸೇನ್ ಎಂಬುವವರು ಪಕ್ಕದ ತೆಲಂಗಾಣ ರಾಜ್ಯದಿಂದ ಸುಮಾರು 500 ಹಕ್ಕಿಗಳನ್ನ ತಂದು ಸಾಕುತ್ತಿದ್ದಾರೆ. ತಮ್ಮ ಹೊಲದಲ್ಲಿನ ಚಿಕ್ಕ ಜಾಗದಲ್ಲಿ ಗೌಜುಗನ ಹಕ್ಕಿ ಸಾಕುತ್ತಿದ್ದಾರೆ.

ಜಪಾನಿ ಗೌಜುಗನ ಹಕ್ಕಿ ಸಾಕಣೆ ಮಾಡಿ ಲಾಭ ಗಳಿಸುತ್ತಿರುವ ಬೀದರ್ ರೈತ
ಜಪಾನೀಸ್ ಗೌಜುಗನ ಹಕ್ಕಿ ಗಳು
Follow us
sandhya thejappa
|

Updated on:Mar 23, 2021 | 4:34 PM

ಬೀದರ್: ಅತಿವೃಷ್ಟಿ-ಅನಾವೃಷ್ಟಿಯಿಂದ ಕೃಷಿ ನಂಬಿಕೊಂಡು ಬದುಕುವುದು ರೈತರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಉಪಕಸಬು ಮಾಡಬೇಕೆಂದುಕೊಂಡು ರೈತರು ಆಡು ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ ಮಾಡಿಕೊಂಡು ಒಂದಿಷ್ಟು ಹಣ ಗಳಿಸುತ್ತಿದ್ದಾರೆ. ಆದರೆ ಔರಾದ್ ತಾಲೂಕಿನ ರೈತರೊಬ್ಬರು ಜಪಾನಿ ಗೌಜುಗನ ಹಕ್ಕಿ ಸಾಕಾಣಿಕೆ ಮಾಡುವುದರ ಮೂಲಕ ಲಾಭ ಗಳಿಸುತ್ತಿದ್ದಾರೆ.

ಬಹಳ ಅಪರೂಪದ ಆರೋಗ್ಯಕರ ಗುಣಗಳುಳ್ಳ ಜಪಾನಿ ಗೌಜುಗನ ಹಕ್ಕಿಗಳನ್ನು ಜಿಲ್ಲೆಯ ಔರಾದ್ ತಾಲೂಕಿನ ಜಾಕೀರ್ ಹುಸೇನ್ ಎಂಬುವವರು ಪಕ್ಕದ ತೆಲಂಗಾಣ ರಾಜ್ಯದಿಂದ ಸುಮಾರು 500 ಹಕ್ಕಿಗಳನ್ನ ತಂದು ಸಾಕುತ್ತಿದ್ದಾರೆ. ತಮ್ಮ ಹೊಲದಲ್ಲಿನ ಚಿಕ್ಕ ಜಾಗದಲ್ಲಿ ಗೌಜುಗನ ಹಕ್ಕಿ ಸಾಕುತ್ತಿದ್ದಾರೆ. ಆರಂಭದಲ್ಲಿ 500 ಗೌಜುಗನ ಹಕ್ಕಿಯಿಂದ ಆರಂಭ ಮಾಡಿ ಈಗ 1,800 ಗೌಜುಗನ ಹಕ್ಕಿಗಳು ಇವರ ಬಳಿಯಿವೆ. 300 ರೂ. ಗೆ ಎರಡು ಹಕ್ಕಿಯನ್ನ ಮಾರಾಟ ಮಾಡುತ್ತಾರೆ. ಒಂದು ಮೊಟ್ಟೆಗೆ 2 ರೂಪಾಯಿಯಂತೆ ಮಾರಾಟ ಮಾಡಿಕೊಂಡು ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ರೈತ ಜಾಕೀರ್ ಹುಸೇನ್ ಒಂದು ಹಕ್ಕಿಗೆ 11 ರೂಪಾಯಿಯಂತೆ 500 ಚಿಕ್ಕ ಚಿಕ್ಕ ಮರಿಗಳನ್ನ ತಂದು ಸಾಕಾಣಿಕೆ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಇವರೊಬ್ಬರೆ ಜಪಾನಿ ಗೌಜುಗನ ಹಕ್ಕಿಯನ್ನ ಸಾಕಾಣಿಕೆ ಮಾಡುತ್ತಿರುವುದರಿಂದ ಇವರ ಹಕ್ಕಿಗೆ ಬಾರೀ ಬೇಡಿಕೆಯಿದೆ. ಸುತ್ತಮುತ್ತಲಿನ ದೊಡ್ಡ ದೊಡ್ಡ ಹೋಟೆಲ್ ದಾಬಾಗಳಿಗೆ ಮತ್ತು ಮಾರಾಟಗಾರರಿಗೆ ಇವರು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಈ ಹಕ್ಕಿಯ ಮೊಟ್ಟೆಗೂ ಕೂಡಾ ಬಾರೀ ಬೇಡಿಕೆಯಿದ್ದು, ಈ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೊಟ್ಟೆ-ಮಾಂಸದಲ್ಲಿದೆ ಔಷಧಿ ಗುಣ ಜಪಾನಿ ಗೌಜುಗನ ಹಕ್ಕಿಯ ಮಾಂಸ ಹಾಗೂ ಮೊಟ್ಟೆಯಲ್ಲಿ ಔಷಧಿ ಗುಣಗಳಿವೆ. ಅಸ್ತಮಾ, ಅಲರ್ಜಿ, ಬೊಜ್ಜು, ಮಾಸಿಕ ಒತ್ತಡ, ಮಧುಮೇಹ, ರಕ್ತ ಹೀನತೆ, ಶಸ್ತ್ರ ಚಿಕಿತ್ಸೆಯ ನಂತರ ಗಾಯ ಒಣಗುವಿಕೆಗೆ ಮುಂತಾದ ತೊಂದರೆಗಳಿಗೆ ಇದರ ಮಾಂಸ ಹಾಗೂ ಮೊಟ್ಟೆಯನ್ನ ಸೇವಿಸಬಹುದು. ಇದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಾರ್ಢ್ಯ ಸೌಂದರ್ಯ ವರ್ಧಕ ಎಂಬುವುದು ದೇಶ ವಿದೇಶದಲ್ಲಿ ಮಾಡಿದ ಸಂಶೋಧನೆಯಿಂದ ತಿಳಿಯಬಹುದು. ಇಷ್ಟೊಂದು ಪೌಷ್ಟಿಕ ಹಾಗೂ ಔಷಧಿಯ ಗುಣ ಈ ಗೌಜುಗನ ಹಕ್ಕಿಯ ಮಾಂಸ ಹಾಗೂ ಮೊಟ್ಟಿಗಿದೆಯಂತೆ.

ಜಪಾನಿ ಗೌಜುಗನ ಹಕ್ಕಿಯ ಮೊಟ್ಟೆಗಳನ್ನು ಜೋಡಿಸಿ ಇಡಲಾಗಿದೆ

ಜಪಾನಿ ಗೌಜುಗನ ಹಕ್ಕಿಗಳು ನೀರು ಕುಡಿಯುತ್ತಿವೆ

ಗೌಜುಗನ ಹಕ್ಕಿ ಸಾಕಾಣೆ ಸರಳ ಉಪ ಕಸುಬು ನಾಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳಿಗಿಲ್ಲ. ಆದರೆ ಈ ಜಪಾನಿ ಗೌಜುಗನ ಹಕ್ಕಿಯ ಮಾಂಸಕ್ಕಿರುವ ಬೇಡಿಕೆ ನಾಟಿ ಕೋಳಿಗೂ ಇಲ್ಲ. ಇದರ ಮಾಂಸವನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಈ ಗೌಜುಗನ ಹಕ್ಕಿ ಸಾಕಾಣಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಗೌಜುಗನ ಹಕ್ಕಿ ನಾಟಿ ಕೋಳಿಯ ಹಾಗೇ ಯಾವುದೇ ವಾತಾವರಣದಲ್ಲಿಯೂ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ ಸಣ್ಣ ಗಾತ್ರದ ಪಕ್ಷಿ ಅತೀ ಶೀಘ್ರವಾಗಿ ಬೆಳವಣಿಗೆ ಹೊಂದುತ್ತದೆ.

ಸ್ಥಳೀಯವಾಗಿ ಕಾಡು ಗೌಜುಗನ ಹಕ್ಕಿ ಎಂಬ ಪ್ರಭೇಧ ಇದೆ. ಇದನ್ನು ಲಾವಕ್ಕಿ, ಪುರಲಿ ಹಕ್ಕಿ, ಕಾಡು ಪುರಲಿ ಎಂದು ಕರೆಯುತ್ತಾರೆ. ಇದು ಕಾಡಿನಲ್ಲಿ ವಾಸವಾಗಿರುತ್ತದೆ. ಇದನ್ನು ಮಾರಟಕ್ಕೆ ಸಾಕುವುದು ವನ್ಯ ಜೀವಿ ಕಾಯ್ದೆಯ ಪ್ರಕಾರ ನಿಷೇಧಿತ. ಅದಕ್ಕಾಗಿ ಅದೇ ಪ್ರಭೇದಕ್ಕೆ ಸೇರಿದ ಜಪಾನೀಸ್ ಗೌಜುಗನ ಹಕ್ಕಿ ಸಾಕಾಣೆಗೆ ಒತ್ತು ಕೊಡಲಾಗಿದೆ. ಇದು ಕಾಡುಗಳಲ್ಲಿರುವ ಗೌಜುಗನ ಹಕ್ಕಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಶೀಘ್ರ ಬೆಳವಣಿಗೆ ಮತ್ತು ಹೆಚ್ಚು ಮೊಟ್ಟೆ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಹಕ್ಕಿಯನ್ನು ಮಾಂಸ ಮೊಟ್ಟೆ ಉದ್ದೇಶಕ್ಕಾಗಿ ಪ್ರಪಂಚದಾದ್ಯಂತ ವಾಣಿಜ್ಯವಾಗಿ ಸಾಕಾಣೆ ಮಾಡಲಾಗುತ್ತದೆ. ಇದರ ಮೂಲ ಯುರೋಪ್ ಹಾಗೂ ಏಷ್ಯಾ ಖಂಡ.

ಜಪಾನಿ ಗೌಜುಗನ ಹಕ್ಕಿಗಳಿಗೆ ಮೆವು ಹಾಕುತ್ತಿರುವ ರೈತ ಜಾಕೀರ್ ಹುಸೇನ್

ಹಕ್ಕಿಯ ವಿಶೇಷತೆಗಳು ಬೇರೆ ಬೇರೆ ಜಿಲ್ಲೆಗೆ ಹೋಲಿಸಿದರೆ ಬೀದರ್ ಜಿಲ್ಲೆಯ ಹವಾಮಾನ ತಂಪಾಗಿಯೇ ಇದೆ. ಅಷ್ಟೊಂದು ಹೇಳಿಕೊಳ್ಳುವಂತಹ ತಾಪಮಾನ ಜಿಲ್ಲೆಯಲ್ಲಿಲ್ಲ. ಹೀಗಾಗಿ ಹವಾಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಸಾಕಾಣಿಕೆಗೆ ಕಡಿಮೆ ಬಂಡವಾಳ ಸಾಕಾಗುತ್ತದೆ. 1 ಚದರ ಅಡಿಗೆ 5 ರಿಂದ 6 ಹಕ್ಕಿ ಸಾಕಬಹುದು. ಕಡಿಮೆ ಆಹಾರ ಸಾಕು. ಹುಟ್ಟಿದ 7 ವಾರದಲ್ಲಿ ಮೊಟ್ಟೆ ಇಡುವಷ್ಟು ಬೆಳೆಯುತ್ತದೆ. ಒಟ್ಟು 500 ರಿಂದ 600 ಗ್ರಾಂ ತೂಕ ಬರುತ್ತದೆ. ವರ್ಷಕ್ಕೆ ಮೂರು ನಾಲ್ಕು ಸಂತತಿ ಆಗುತ್ತದೆ. ವರ್ಷಕ್ಕೆ ಹೆಣ್ಣು ಹಕ್ಕಿ 250 ರಿಂದ 280 ಮೊಟ್ಪೆ ಇಡುತ್ತದೆ. ಈ ಹಕ್ಕಿಯ ಮಾಂಸವು ಸಾಮಾನ್ಯ ನಾಟಿ ಕೋಳಿಯ ಮಾಂಸದ ರುಚಿಗೆ ಸಮನಾಗಿದೆ. ಗೌಜುಗನ ಹಕ್ಕಿಯ ಸಾಕಾಣೆ ನೆರೆಯ ರಾಜ್ಯಗಳಲ್ಲಿ ಇರುವಷ್ಟು ಕರ್ನಾಟಕದಲ್ಲಿ ಇಲ್ಲ. ಇದನ್ನು ರಾಜ್ಯದ ಎಲ್ಲಾ ಕಡೆ ಸಾಕಾಣೆ ಮಾಡಬಹುದು. ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಹಕ್ಕಿಯ ಸಾಕಾಣೆಗೆ ಬೇಕಾದ ಮಾಹಿತಿಯನ್ನು ಕೊಡುತ್ತಿವೆ.

ಇದನ್ನೂ ಓದೆ

Thalaivi Trailer: ಯಾರಿಗೂ ಹೆದರದ ಕಂಗನಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿಸಿದ ‘ತಲೈವಿ’ ನಿರ್ದೇಶಕ ವಿಜಯ್​! ವಿಡಿಯೋ ವೈರಲ್​

ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು; ಸಿಡಿ ಯುವತಿಗೆ ರಕ್ಷಣೆ ಕೊಡಬೇಕು -ಸಿದ್ದರಾಮಯ್ಯ

Published On - 4:23 pm, Tue, 23 March 21