
ಬೀದರ್, ಏಪ್ರಿಲ್ 01: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸದ್ಯ ಕರಬೂಜ ಹಣ್ಣು (muskmelon) ಬೆಳೆಗಾರರಿಗೂ ತಟ್ಟಿದೆ. ಹೀಗಾಗಿ ಏಕಾಏಕಿ ಕರಬೂಜ ಹಣ್ಣಿನ ದರ ಕುಸಿತವಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಉತ್ತಮ ಗುಣಮಟ್ಟದ ಕರಬೂಜ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ಬೀದರ್ ಜಿಲ್ಲೆಯ ಕರಬೂಜ ಹಣ್ಣು ಬೆಳೆಗಾರರಿಗೆ ತಟ್ಟಿದೆ. ಯುದ್ಧದ ಪರಿಣಾಮವಾಗಿ ರಫ್ತು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಒಮ್ಮೆ ಉತ್ತಮ ಬೇಡಿಕೆ ಹೊಂದಿದ್ದ ಕರಬೂಜ ಹಣ್ಣು, ಇದೀಗ ಬೆಲೆ ಕುಸಿತದಿಂದ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕರಬೂಜ ಕೆಜಿಗೆ ಕೇವಲ 4ರಿಂದ 5 ರೂಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಇರಾನ್ ಯುದ್ಧದ ಪರಿಣಾಮ ಬೀದರ್ ಕಲ್ಲಂಗಡಿಗೂ ಇಲ್ಲ ಬೆಲೆ!
ಈ ದರದಲ್ಲಿ ಕಟಾವು ಮತ್ತು ಸಾಗಾಟ ವೆಚ್ಚ ಸಹ ಮರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಆತಂಕಕಾರಿ ಸಂಗತಿ ಅಂದರೆ ಉತ್ತಮ ಗುಣಮಟ್ಟದ ಕರಬೂಜ ಇದ್ದರೂ ಖರೀದಿದಾರರ ಕೊರತೆಯಿಂದ ಹೊಲದಲ್ಲೇ ಕೊಳೆಯುವಂತಾಗಿದೆ. ಇದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಜಿಲ್ಲೆಯ ಬಹುತೇಕ ಕರಬೂಜ ಬೆಳೆಗಾರರು ಈ ಸಂಕಷ್ಟವನ್ನು ಎದುರಿಸುತ್ತಿದ್ದು, ಸರ್ಕಾರದ ನೆರವಿಗೆ ಕಾದಿದ್ದಾರೆ.
ಜಿಲ್ಲೆಯೊಂದರಲ್ಲಿಯೇ ಸುಮಾರು 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕರಬೂಜ ಬೆಳೆಯನ್ನ ಬೆಳೆಯುತ್ತಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಗುಣಮಟ್ಟದ ಕರಬೂಜ, ಗಲ್ಫ್ ರಾಷ್ಟ್ರಕ್ಕೆ ಹೆಚ್ಚಾಗಿ ರಫ್ತು ಆಗುತ್ತಿತ್ತು. ಈ ಕರಬೂಜ ಹಣ್ಣಿಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆ ಇದೆ.
ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಬರುತ್ತದೆ. ಒಂದು ಎಕರೆ ಪ್ರದೇಶಕ್ಕೆ 40 ರಿಂದ 50 ಸಾವಿರ ರೂ ವೆಚ್ಚ ಬರಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದರೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ಬೆಳೆ ಇದಾಗಿದ್ದು ಹೀಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕರಬೂಜ ಬೆಳೆದಿದ್ದರು. ಆದರೆ ಯುದ್ಧದಿಂದ ದರದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಕಟಾವು ಮಾಡದೆ ಹಾಗೆಯೇ ಹೊಲದಲ್ಲಿ ಬಿಟ್ಟಿದ್ದಾರೆ. ಲಾಭದ ನಿರಿಕ್ಷೇಯಲ್ಲಿದ್ದ ರೈತರಿಗೆ ಕರಬೂಜ ಬೆಳೆ ಕೈಕೊಟ್ಟಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ ಎಂದು ರೈತ ಅವಿನಾಶ ಅಳಲು ತೋಡಿಕೊಂಡದ್ದಾರೆ.
ಇದನ್ನೂ ಓದಿ: ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್ ರೈತರು ಕಂಗಾಲು
ಜಿಲ್ಲೆಯ ಬಹುತೇಕ ರೈತರು ಕಲ್ಲಂಗಡಿ ಹಾಗೂ ಕರಬೂಜ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯುವ ಬೆಳೆ ಇದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು, ರೈತರನ್ನ ಕಂಗಾಲು ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.