ಬೀದರ್ ಜಿಲ್ಲೆಯಲ್ಲಿ ಪಶು ವೈದ್ಯ, ಸಿಬ್ಬಂದಿ ಕೊರತೆ; 196 ಪ್ರಮುಖ ಹುದ್ದೆಗಳು ಖಾಲಿ, ಜಾನುವಾರ ಸಾಕಣೆದಾರರ ಆಕ್ರೋಶ
ಮೂಕ ಪ್ರಾಣಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡುವ ಉದ್ದೇಶದಿಂದ ಸರ್ಕಾರ ಪಶು ಚಿಕಿತ್ಸಾಲಯಗಳನ್ನ ತೆರೆದಿದೆ. ಜೊತೆಗೆ ಆ ಆಸ್ಪತ್ರೆಗಳಿಗೆ ವೈದ್ಯರನ್ನ, ಸಿಬ್ಬಂದಿಗಳನ್ನ ನೇಮಕ ಕೂಡಾ ಮಾಡಿದೆ. ಆದರೆ ಗಡಿ ಜಿಲ್ಲೆ ಬೀದರ್ನಲ್ಲಿ ಮಾತ್ರ ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆಯಿದ್ದು ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಬೀದರ್, ಆಗಸ್ಟ್.19: ಗಡಿ ಜಿಲ್ಲೆ ಬೀದರ್ನಲ್ಲಿ ಪಶು ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಕೊರತೆ ಇದೆ. ಬೀದರ್ (Bidar) ಜಿಲ್ಲೆಯಲ್ಲಿ 114 ಪಶು ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳಿವೆ. ಆದರೆ, ಇಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇದೆ. ಹೀಗಾಗಿ ಜಾನುವಾರ ಸಾಕಣೆದಾರರು ನಾನಾ ಸಮಸ್ಯೆ ಎದುರಿಸಬೇಕಾಗಿದೆ. ಇನ್ನೂ ಜಿಲ್ಲೆಯಲ್ಲಿ ಉಪನಿರ್ದೇಶಕರು, ಮುಖ್ಯಪಶು ವೈದ್ಯಾಧಿಕಾರಿಗಳು, ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿ, ಜಾನುವಾರು ಅಭಿವೃದ್ಧಿ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರಿಕ್ಷಕರು, ಲ್ಯಾಬ್ ಟೆಕ್ನಿಶಿಯನ್, ಪಶು ವೈದ್ಯಕೀಯ ಸಹಾಯಕರು ಸೇರಿದಂತೆ ಜಿಲ್ಲೆಯಲ್ಲಿ 196 ಪ್ರಮುಖವಾದ ಹುದ್ದೆಗಳೇ ಖಾಲಿ ಇವೆ. ಹೀಗಾಗಿ ರೈತರು ತಾವು ಚಿಕಿತ್ಸೆಗೆ ತಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆಯೇ ಸಿಗುತ್ತಿಲ್ಲ ಇದರ ಜೊತೆಗೆ ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರಿದ್ದರೂ ಅವರು ಆಸ್ಪತ್ರೆಗೆ ಬಾರದೆ ಚಕ್ಕರ್ ಹಾಕುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಜಾನುವಾರುಗಳಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ಪಶು ಇಲಾಖೆ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಬೀದರ್ನಲ್ಲಿರುವ 114 ಆಸ್ಪತ್ರೆಗಳ ಪೈಕಿ ಒಬ್ಬೊಬ್ಬ ವೈದ್ಯರು ತಲಾ ಎರಡು ಎರಡು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಎಮ್ಮೆ, ಆಕಳು, ಕುರಿ, ಮೇಕೆ ಸೇರಿದಂತೆ ಲಕ್ಷಾಂತರ ಜಾನುವಾರುಗಳಿವೆ. ಅವುಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ
ಪಶು ಸಂಗೋಪನಾ ಇಲಾಖೆ ಸಚಿವರ ಕ್ಷೇತ್ರದಲ್ಲೇ ವೈದ್ಯರ ಕೊರತೆ ಹೆಚ್ಚು
ಪಶು ಆಧಾರ ಯೋಜನೆಯ ಲಾಭ ಜಾನುವಾರುಗಳಿಗೆ ತಲುಪದಂತಾಗಿದೆ. ಪಶು ಆಸ್ಪತ್ರೆಗಳ ನಿರ್ವಹಣೆ, ಚಿಕಿತ್ಸೆ ಕಚೇರಿ ಕೆಲಸ ಕಾರ್ಯಗಳನ್ನು ಇರುವ ಸಿಬ್ಬಂದಿಗಳೇ ನೋಡಿಕೊಳ್ಳಬೇಕಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ ಬಹುತೇಕ ಚಿಕಿತ್ಸಾಲಯಗಳಿಗೆ ಬೀಗ ಹಾಕಲಾಗಿದೆ. ಪಶು ಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರಭು ಚೌಹಾನ್ ಅವರ ಕ್ಷೇತ್ರದಲ್ಲಿ ವೈದ್ಯರ ಸಮಸ್ಯೆ ಹೆಚ್ಚಿದೆ. ಪಶು ಇಲಾಖೆಯಲ್ಲಿ ಅಗತ್ಯ ವೈದ್ಯರ ನೇಮಕವಾದರೆ ಇಲಾಖೆ ಕೆಲಸಗಳು ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.
ಡಿ ಗ್ರುಪ್ ಹುದ್ದೆಯನ್ನು ಆದಷ್ಟು ಬೇಗ ತುಂಬಬೇಕು
ಇನ್ನು ಪಶು ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳ ಬಗ್ಗೆ ಬೀದರ್ ಪಶು ಪಾಲನೆ ಹಾಗೂ ಪಶು ಇಲಾಖೆಯ ಉಪ ನಿರ್ದೇಶಕರಾದ ನರಸಪ್ಪ ಅವರು ಮಾಹಿತಿ ನೀಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಪಶು ಆಸ್ಪತ್ರೆಯ ಕಟ್ಟಡಗಳು ಚನ್ನಾಗಿವೆ, ಅದರೆ ಕೆಲವು ಪಶು ವೈದ್ಯರು ಸಮಸ್ಯೆಯಿದೆ. ಜೊತೆಗೆ ಡಿಗ್ರುಪ್ ಹುದ್ದೆಗಳು ಸಾಕಷ್ಟು ಸಮಸ್ಯೆಯಿದ್ದು ರೈತರು ಜಾನುವಾರುಗಳನ್ನ ತೆಗೆದುಕೊಂಡು ಬಂದರೆ ಜಾನುವಾರುಗಳನ್ನ ಹಿಡಿದುಕೊಳ್ಳಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಡಿ ಗ್ರುಪ್ ಹುದ್ದೆಯನ್ನು ಆದಷ್ಟು ಬೇಗ ತುಂಬಬೇಕಾಗಿದೆ. ಇದರ ಜೊತೆಗೆ ವೈದ್ಯರನ್ನೂ ಕೂಡಾ ಸರಕಾರ ನೇಮಕ ಮಾಡಿದರೆ ರೈತರ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ ಎಂದರು.
ಪಶುಸಂಗೋಪನಾ ಇಲಾಖೆಗೆ ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಔಷಧಿ, ಮೇವು, ನೀರಿನ ಸೌಲಭ್ಯಗಳನ್ನ ಕಲ್ಪಿಸಲು ಹಣ ಬಂದರೂ ಕೂಡಾ ಸೂಕ್ತವಾಗಿ ಸಿಬ್ಬಂದಿಯ ಕೊರತೆಯಿಂದ ಬಳಕೆಯಾಗದಿರುವುದು ದುರ್ದೈವದ ಸಂಗತಿಯಾಗಿದೆ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕ ಕಾರಣವಾಗಿದ್ದು ಈಗಲಾದರೂ ಎಚ್ಚೆತ್ತುಕೊಂಡು ರೈತರು ತೆಗೆದುಕೊಂಡು ಬರುವ ಜಾನುವಾರುಗಳಿಗೆ ಉತ್ತಮ್ಮ ಚಿಕಿತ್ಸೆ ಸಿಗವಂತಾಗಲಿ ಅನ್ನುವುದು ನಮ್ಮ ಆಸೆಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:56 am, Mon, 19 August 24