ಬರದ ನಾಡು ಬೀದರ್​ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು

ಕರ್ನಾಟಕ ಶ್ರೀಗಂಧದ ನಾಡು. ಕರ್ನಾಟಕದಲ್ಲಿ ಶ್ರೀಗಂಧ ಸಮೃದ್ಧವಾಗಿ ದೊರೆಯುತ್ತದೆ. ಬೀದರ್ ಜಿಲ್ಲೆಯಲ್ಲಿಯೂ ಸಹ ಶ್ರೀಗಂಧ ಮರಗಳು ಹೇರಳವಾಗಿ ಬೆಳೆದು ನಿಂತಿದೆ. 200 ಹೆಕ್ಟರ್ ಪ್ರದೇಶದಲ್ಲಿ ಲಕ್ಷಾಂತರ ಶ್ರೀಗಂಧದ ಮರಗಳು ಬೆಳೆದು ನಿಂತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀಗಂಧ ಮರಗಳ ರಕ್ಷಣೆಗಾಗಿ ಹಗಲು-ರಾತ್ರಿ ಗಸ್ತು ತಿರುಗುತ್ತಿದ್ದಾರೆ.

ಬರದ ನಾಡು ಬೀದರ್​ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು
ಶ್ರೀಗಂಧ ಮರಗಳು
Updated By: ವಿವೇಕ ಬಿರಾದಾರ

Updated on: May 18, 2025 | 3:42 PM

ಬೀದರ್, ಮೇ 18: ಕರ್ನಾಟಕ ಶ್ರೀಗಂಧಕ್ಕೆ (Sandalwood) ಹೆಸರುವಾಸಿಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧವನ್ನು ಕರ್ನಾಟಕದಲ್ಲಿ (Karnataka) ಬೆಳೆಯಲಾಗುತ್ತದೆ. ಬೀದರ್ (Bidar) ತಾಲೂಕಿನ ಹೊನ್ನೀಕೇರಿ ಗುಡ್ಡದಲ್ಲಿ ಲಕ್ಷಾಂತರ ಶ್ರೀಗಂಧದ ಮರಗಳು ಬೆಳೆದು ನಿಂತಿದ್ದು, ಎಲ್ಲಿ ನೋಡಿದರೂ ಶ್ರೀಗಂಧ ಕಾಣ ಸಿಗುತ್ತದೆ. ಇಲ್ಲಿ ಸುಮಾರು 1776 ಎಕರೆ ಪ್ರದೇಶದಲ್ಲಿ ಲಕ್ಷಾಂತರ ಶ್ರೀಗಂಧದ ಮರಗಳು ಬೆಳೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿ ನಿತ್ಯ ಗಸ್ತು ತಿರುಗುವುದರ ಮೂಲಕ ಮರಗಳ ಪಾಲನೆ, ಪೋಷಣೆ ಜೊತೆಗೆ ರಕ್ಷಣೆ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯುವುದಕ್ಕಾಗಿ ಮತ್ತು ಅದರ ಪೋಷಣೆಗಾಗಿ ಅರಣ್ಯ ಇಲಾಖೆ ಸಿರಿಗಂಧ ಎಂಬ ಉಪಕ್ರಮವನ್ನು ಆರಂಭಿಸಿದೆ. ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶ್ರೀಗಂಧವಿರುವ ಅರಣ್ಯ ಪ್ರದೇಶದ ಸುತ್ತಲೂ ತಂತಿ ಬೇಲಿ ಹಾಕಿ, ಸಿಬ್ಬಂದಿಗಳನ್ನು ನೇಮಿಸಿದೆ. ಇನ್ನು ಶ್ರೀಗಂಧ ಕಳ್ಳರನ್ನು ಹಿಡಿಯಲು ಮೂರು ಮುಧೋಳ ನಾಯಿಗಳನ್ನು ಅರಣ್ಯ ಇಲಾಖೆ ಸಾಕಿದೆ.

ಹೊನ್ನೀಕೇರಿಯ ಕಾಯ್ದಿಟ್ಟ ಅರಣ್ಯದಲ್ಲಿ ಶ್ರೀಗಂಧ ಬೆಳೆದ ಪ್ರದೇಶದ ಸುತ್ತ ಸುಮಾರು 19 ಕಿಮೀವರೆಗೆ ತಂತಿ ಬೇಲಿ ಹಾಕಲಾಗಿದೆ. ಹಗಲು-ರಾತ್ರಿ ಎನ್ನದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ. ಈ ಮೂಲಕ ಶ್ರೀಗಂಧ ರಕ್ಷಣೆಗೆ ಅರಣ್ಯ ಇಲಾಖೆ ಪಣತೊಟ್ಟಿದೆ.

ಇದನ್ನೂ ಓದಿ
ಬಿಸಿಲು ನಾಡು ಬೀದರ್​ನಲ್ಲಿ ಗೋಡಂಬಿ ಬಳೆದ ರೈತ: ಅಪಾರ ಆದಾಯ
ಬೀದರ್​ ಜಿಲ್ಲೆಯಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ!
ಬೀದರ್: ಪ್ರಾಣಿ-ಪಕ್ಷಿಗಳ ದಾಹ ಇಂಗಿಸುತ್ತಿರುವ ಸ್ನೇಹಿತರ ಬಳಗ
ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಬಾವಿಗಳ ನಿರ್ಲಕ್ಷ್ಯ, ಜನರ ಆಕ್ರೋಶ

ಇನ್ನು, ಆಸಕ್ತ ರೈತರಿಗೂ ಕೂಡಾ ಶ್ರೀಗಂಧ ಬೆಳೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಎಲ್ಲ ತಾಲೂಕಿನಲ್ಲಿಯೂ ಅಂದಾಜು ಸುಮಾರು 50 ಸಾವಿರದವರೆಗೂ ಶ್ರೀಗಂಧದ ಗಿಡಗಳನ್ನು ರೈತರು ನಾಟಿ ಮಾಡಿದ್ದಾರೆ. ಈಗ ಶ್ರೀಗಂಧದ ಮರಗಳು ಬೆಳೆದು ನಿಂತಿವೆ.

ಬೀದರ್ ತಾಲೂಕಿ ಚಿಟ್ಟಾ ಗ್ರಾಮದ ಮಹ್ಮದ್ ಜಾಫರ್ ಎಂಬುವರು ತಮ್ಮ 7 ಎಕರೆ ಜಮೀನಿನಲ್ಲಿ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. 10 ವರ್ಷದ ನಂತರ ಶ್ರೀಗಂಧದಿಂದ 10 ರಿಂದ 15 ಕೋಟಿ ರೂಪಾಯಿ ಆದಾಯ ಗಳಿಸುವ ಲೆಕ್ಕಾಚಾರದಲ್ಲಿ ರೈತ ಮಹ್ಮದ್​ ಜಾಫರ್ ಇದ್ದಾರೆ. ಮಹ್ಮದ್ ಜಾಫರ್ ಅವರು ತಮ್ಮ ಹೊಲದಲ್ಲಿ ಒಂದೂವರೆ ಸಾವಿರ ಶ್ರೀಗಂಧದ ಗಿಡಗಳು, ಎರಡುವರೆ ಸಾವಿರ ಮಾವು ಮತ್ತು ಹೆಬ್ಬೇವು, ಐದುನೂರು ಬಾಳೆ ಮತ್ತು ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ.

ಇದರ ನಡುವೆ ನಮಗೆಬೇಕಾದ ಎಲ್ಲಾ ಬೆಳೆಗಳನ್ನ ಬೆಳೆದುಕೊಳ್ಳುತ್ತೇವೆ. ಹೀಗಾಗಿ ಶ್ರೀಗಂಧ ನಾಟಿ ಮಾಡಿದರೆ ರೈತರು ಲಾಭ ಗಳಿಸಬಹುದು ಎಂದು ರೈತ ಮಹ್ಮದ್ ಜಾಫರ್ ಹೇಳಿದ್ದಾರೆ.

ಈ ಹಿಂದೆ ಶ್ರೀಗಂಧದ ಮರಗಳನ್ನು ಯಾವುದೇ ಪ್ರದೇಶದಲ್ಲಿ ಬೆಳೆದರೂ ಅದು ಸರ್ಕಾರದ ಸ್ವತ್ತಾಗಿರುತ್ತಿತ್ತು. ಆದರೆ, ಕರ್ನಾಟಕ ಅರಣ್ಯ ಕಾಯಿದೆ 2001 ಸೆಕ್ಷನ್ 83ರ ಪ್ರಕಾರ ಯಾರ ಜಮೀನಿನಲ್ಲಿ ಶ್ರೀಗಂಧದ ಮರವಿರುತ್ತೋ, ಅದು ಜಮೀನಿನ ಮಾಲೀಕನ ಸ್ವತ್ತು ಎಂದು ತಿದ್ದುಪಡಿ ಮಾಡಲಾಗಿದೆ.

ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಶ್ರೀಗಂಧ ಬೆಳೆಯಬಹುದು. ಜೊತೆಗೆ ಶ್ರೀಗಂಧ ಬೆಳೆಯಲು ಇಚ್ಚಿಸುವ ರೈತರಿಗೆ ಅರಣ್ಯ ಇಲಾಖೆಯಿಂದ ಸಹಕಾರ ಸಿಗುತ್ತದೆ. ಇದರಿಂದ ರೈತರು ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಶ್ರೀಗಂಧ ಬೆಳೆಯಬಹುದು. ನೀಲಗಿರಿ ಮರಗಳ ಹಾವಳಿ ತಪ್ಪಿಸಿ ಶ್ರೀಗಂಧ ಮರ ಬೆಳೆಸುವುದಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.

ಇದನ್ನೂ ಓದಿ: ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್​ನ ರೈತ

ಅರಣ್ಯ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿದರೇ ಎಂತಹ ಪ್ರದೇಶದಲ್ಲಿಯೂ ಗಿಡಗಳನ್ನು ನೆಟ್ಟು ಸಮೃದ್ಧವಾಗಿ ಬೆಳೆಸಬಹುದೆಂದು ಬೀದರ್​ನ ಅರಣ್ಯ ಇಲಾಖೆಯ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ಬೀದರ್​ನಲ್ಲಿ ಇರುವ ಲಕ್ಷಾಂತರ ಶ್ರೀಗಂಧದ ಗಿಡಗಳ ಪಾಲನೆ, ಪೋಷಣೆ ಮತ್ತು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ