
ಸಂಗಾರೆಡ್ಡಿ (ತೆಲಂಗಾಣ), ಆಗಸ್ಟ್ 12: ವೇಗವಾಗಿ ಬಂದ ಟ್ಯಾಂಕರ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಮಂಡಲದ ಸತ್ವಾರ್ ಗ್ರಾಮದ ಸಮೀಪ ನಡೆದಿದೆ. ಆಟೋ ರಿಕ್ಷಾ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ಆಟೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಮೃತರು ಹಾಗೂ ಗಾಯಾಳುಗಳು ಕರ್ನಾಟಕದ ಬೀದರ್ ಜಿಲ್ಲೆಯ ರಾಜಗೀರಾ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ದೇವಿದಾಸ (35), ನಿಕಿತಾ (42), ರೇಖಾ (45), ರೇಷ್ಮಾ (38), ಶ್ರೀದೇವಿ (40) ಮತ್ತು ಜಗದೇವಿ (43) ಎಂದು ಗುರುತಿಸಲಾಗಿದೆ. ನಿರ್ಮಲಾ, ತುಳಜಮ್ಮ, ಶಿಲ್ಪಾ , ಶೋಭಾ, ಚಂದ್ರಕಲಾ ಮತ್ತು ರಾಧಿಕಾ ಎಂಬವರು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮಾಣಿಕ ಪ್ರಭು ದೇವಸ್ಥಾನಕ್ಕೆ ಮೂಗು ಮುಚ್ಚಿಕೊಂಡು ಬರ್ತಿದ್ದ ಭಕ್ತರು: ಫ್ಯಾಕ್ಟರಿ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ಅಪಘಾತದಲ್ಲಿ ಗಂಭೀರ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಚಿವ ಈಶ್ವರ್ ಖಂಡ್ರೆ ವಿಚಾರಿಸಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಬ್ರಿಮ್ಸ್‌ನ ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕದಲ್ಲಿ ಮೂವರು ಹಾಗೂ ಬೇರೆ ವಾರ್ಡ್‌ನಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜಗೀರಾ ರಾಜಗೀರಾ ಗ್ರಾಮದ 6 ಜನ ಮೃತಪಟ್ಟಿರುವುದು ಅತ್ಯಂರ ದುಖಃಕರ ಸಂಗತಿ. ಸಿಎಂ ನಿಧಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುತ್ತೆ. ಮೃತರ ಕುಟುಂಬದ ಜೊತೆ ಹಾಗೂ ಗಾಯಾಳುಗಳ ಜೊತೆ ನಮ್ಮ ಸರ್ಕಾರ ಇರುತ್ತೆ ಎಂಬ ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Wed, 12 August 26