ಬೀದರ್, ಜೂ.05: ಬೀದರ್ ಬ್ರಿಮ್ಸ್(Brims)ನ ಜಿಲ್ಲಾಸ್ಪತ್ರೆ ರೋಗಿಗಳ ಪಾಲಿಗೆ ಹಣ ಸುಲಿಯುವ ಕೇಂದ್ರವಾಗಿ ಮಾರ್ಪಾಡಾಗಿದೆ. 2017 ಅಗಸ್ಟ್ 13 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 115 ಕೋಟಿ ರೂಪಾಯಿ ವೆಚ್ಚದ 715 ಬೆಡ್ನ ಬೃಹತ್ ನೂತನ ಆಸ್ಪತ್ರೆಯ ಕಟ್ಟಡವನ್ನ ಉದ್ಘಾಟನೆ ಮಾಡಿದ್ದರು. ಇದರ ಜೊತೆಗೆ ಈ ಕಟ್ಟಡದಲ್ಲಿ ಸುಮಾರು 5.58 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣ (Medical equipment) ಗಳನ್ನ ಖರೀದಿ ಮಾಡಲಾಗಿದೆ. ಇದರಲ್ಲಿ ಬಯೋಕೆಮಿಸ್ಟ್ ವಿಭಾಗದ ಉಪಕರಣಕ್ಕಾಗಿ 25 ಲಕ್ಷ ರೂ, ಅರವಳಿಕೆ ಉಕರಣಕ್ಕಾಗಿ 31 ಲಕ್ಷ ರೂ, ಓಬಿಜಿ ವಿಭಾಗದ ಉಪಕರಣಕ್ಕಾಗಿ 52 ಲಕ್ಷ ರೂ, ಆರ್ಥೋಪೆಡಿಕ್ ವಿಭಾಗದ ಉಪಕರಣಕ್ಕೆ 98 ಲಕ್ಷ. ಹೀಗೇ ಒಟ್ಟಾರೆ 5 ಕೋಟಿ 58 ಲಕ್ಷ ರೂಪಾಯಿ ಹಣವನ್ನ ಖರ್ಚುಮಾಡಲಾಗಿದೆ. ಆದರೂ ರೋಗಿಗಳಿಗೆ ಮಾತ್ರ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.
ಇನ್ನು ಪೀಠೋಪಕರಣಕ್ಕಾಗಿ 1.86 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರ ಜೊತೆಗೆ 2015 ರ ಅಕ್ಟೋಬರ್ ತಿಂಗಳಿನಲ್ಲಿ ಬೀದರ್ನ ಜಿಲ್ಲಾಸ್ಪತ್ರೆಗೆ ಬಂದು ಬಡ ಜನರಿಗೆ ಅನೂಕೂಲವಾಗಲಿ ಎಂದು 3 ಕೋಟಿ 47 ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಬೀದರ್ ಬಂದು ಸಿಟಿ ಸ್ಕ್ಯಾನ್ ಉದ್ಘಾಟನೆ ಮಾಡಿ ಹೋಗಿದ್ದರು. ಆದರೆ ಇಷ್ಟೋಂ ದು ಹಣ ವೆಚ್ಚಮಾಡಿದ್ದರೂ ಇಲ್ಲಿಗೆ ಯಾವುದೇ ರೀತಿಯ ಸೌಲಭ್ಯ ಮಾತ್ರ ಬರುವ ರೋಗಿಗಳಿಗೆ ಸಿಗುತ್ತಿಲ್ಲ.
ಇದರ ಜೊತೆಗೆ ಬಡ ರೋಗಿಗಳಿಗೆ ಅನೂಕುಲವಾಗಲಿ ಎನ್ನುವ ಉದ್ದೇಶದಿಂದ ಸರಕಾರ ಎಂಡೋಸ್ಕೋಪಿಕ್, 2ಡಿ ಎಕೋ, ಸಿಟಿ ಸ್ಯ್ಕಾನ್, ಅಲ್ಟ್ರಾ ಸೌಂಡ್ ಯಂತ್ರಗಳನ್ನ ಕೋಟ್ಯಾಂತರ ರೂಪಾಯಿ ಹಣವನ್ನ ಖುರ್ಚುಮಾಡಿ ಸ್ಕ್ಯಾನ್ ತಂದಿದ್ದರು. ಇವುಗಳ ಪ್ರಯೋಜನೆಗಳು ಮಾತ್ರ ರೋಗಿಗಳಿಗೆ ಆಗುತ್ತಿಲ್ಲ. ಇಲ್ಲಿನ ಸ್ಕ್ಯಾನ್ ಸೆಂಟರ್ಗಳು ಚಾಲನೆಯಲ್ಲಿದ್ದರೂ ಇಲ್ಲಿನ ಸಿಬ್ಬಂದಿಗಳು ಮಾತ್ರ ಸ್ಕ್ಯಾನ್ ಬಂದ್ ಇವೆ ಎಂದು ರೋಗಿಗಳಿಗೆ ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಇದಕ್ಕೆ ಸಂಬಧಿಸಿದವರು ಯಾರೂ ಕೂಡ ಉತ್ತರಿಸಲು ಮುಂದೆ ಬರುತ್ತಿಲ್ಲವಾದ್ದರಿಂದ ಅನೇಕ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಇನ್ನು ಯಾವುದೇ ಚಿಕ್ಕ ಪುಟ್ಟ ಕಾಯಿಲೆಗೂ ಸ್ಯ್ಕಾನ್ ಮಾಡಿಸಬೇಕಾದರೂ ಕೂಡ ಈ ಆಸ್ಪತ್ರೆಯಲ್ಲಿ ಯಾರು ಸ್ಯ್ಕಾನ್ ಮಾಡುವುದಿಲ್ಲ. ಎಲ್ಲವನ್ನ ಹೊರಗಡೆಗೆ ಸ್ಯ್ಕಾನ್ ಮಾಡಿಸುವಂತೆ ವೈದ್ಯರು ಸಲಹೇ ನೀಡುತ್ತಾರೆ. ಎಲ್ಲಾ ಬಗೆಯ ಸ್ಯ್ಕಾನ್ ಮಾಡುವ ಮಶೀನ್ಗಳು ಇಲ್ಲಿದ್ದರೂ ಅವುಗಳು ಸರಿಯಾಗಿಲ್ಲ ಎನ್ನುವ ಸಬೂಬು ಹೇಳುವುದರಲ್ಲಿಯೇ ಇಲ್ಲಿನ ವೈದ್ಯರು ಕಾಲ ಕಳೆಯುತ್ತಿದ್ದಾರೆ. ವೈದ್ಯರು ಹಾಗೂ ಖಾಸಗಿ ಸ್ಯ್ಕಾನ್ ಸೆಂಟರ್ ಮಾಲೀಕರು ಶಾಮಿಲಾಗಿ ಬಡ ರೋಗಿಗಳಿಂದ ನೂರಾರು ರೂಪಾಯಿ ಹಣವನ್ನು ಕೀಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈ ರೀತಿ ಸರಕಾರಿ ಆಸ್ಪತ್ರೆಯಲ್ಲಿ ಹಗಲೂ ದರೋಡೆ ನಡೆಯುತ್ತಿದ್ದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸುಮ್ಮನಿರುವುದು ಯಾಕೆ ಎಂದು ಇಲ್ಲಿನ ಜನರು ಸರಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಇದರ ಜೊತೆಗೆ ಇಲ್ಲಿನ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆಯೂ ಕೂಡ ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ಕೂಡ ಇಲ್ಲಿನ ರೋಗಿಗಳಿಗೆ ನುಂಗಲಾರದ ತುತ್ತಾಗಿದೆ. ಈ ಆಸ್ಪತ್ರೆಯ ಬಗ್ಗೆ ಇಲ್ಲಿನ ಶಸ್ತ್ರಚಿಕಿತ್ಸೆಕ ಡಾ.ಮಹೇಶ್ ಅವರನ್ನ ಕೇಳಿದರೆ ನಮ್ಮ ಬ್ರೀಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿವೆ. ಬೀದರ್, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ಜನರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಅವರಿಗೆ ಇಲ್ಲಿ ಸರಿಯಾದ ಚಿಕಿತ್ಸೆ ಮಾತ್ರ ಸಿಗುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಮಾತ್ರ ಉತ್ತಮವಾದ ಚಿಕಿತ್ಸೆ ಸಿಗುತ್ತಿದೆಂದು ಹೇಳುತ್ತಿದ್ದಾರೆ.
ಉಚಿತ ಚಿಕಿತ್ಸೆ ಸಿಗುತ್ತದೆ ಎಂಬ ನಂಬಿಕೆಯಿಂದ ಬಡರೋಗಿಗಳು ಸರಕಾರಿ ದವಾಖಾನೆಗಳನ್ನು ಅವಲಂಬಿಸಿರುತ್ತಾರೆ. ಆದರೆ, ಈ ಸರಕಾರಿ ಆಸ್ಪತ್ರೆಯೂ ಕೂಡ ಹಣ ಸುಲಿಯುವ ಕೇಂದ್ರವಾಗಿ ಮಾರ್ಪಾಡಾಗಿವೆ. ಇದರಿಂದ ಚಿಕಿತ್ಸೆ ಪಡೆದುಕೊಳ್ಳದ ಸ್ಥಿತಿಯಲ್ಲಿ ಬಡರೋಗಿಗಳು ಬಂದು ನಿಂತಿದ್ದಾರೆ. ಸರಕಾರ ಸಾರ್ವಜನಿಕ ಸರಕಾರಿ ಆಸ್ಪತ್ರೆಗಳ ಮೇಲೆ ಒಂದು ಕಣ್ಣಿಟ್ಟು, ಇಲ್ಲಿ ನಡೆಯುವ ಭ್ರಷ್ಟಾಚಾರವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ, ಇಲ್ಲಿಗೆ ಬರುವ ಅದೇಷ್ಟೋ ಬಡ ರೋಗಿಗಳಿಗೆ ಇದರಿಂದ ಅನೂಕುಲವಾಗ ಬಹುದು, ಭ್ರಷ್ಠಾಚಾರ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Wed, 5 June 24