ನೀವು ಕೇಂದ್ರ ಸಚಿವರಾಗಿ ಏನು ಪ್ರಯೋಜನ: ಭಗವಂತ ಖೂಬಾಗೆ ರೈತನ ಪ್ರಶ್ನೆ
ಬೆಳೆಗಳಿಗೆ ಡ್ರೋಣ್ ಮೂಲಕ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮುಂದಿನ ಬಜೆಟ್‌ನಲ್ಲಿ ಗ್ರಾಮ ಮಟ್ಟದಲ್ಲೂ ಡ್ರೋಣ್ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಿದೆ ಎಂದು ಸಚಿವರು ನುಡಿದರು.
ಬೀದರ್: ಪ್ರತಾಪನಗರದ ಫಾಳೆ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿರುದ್ಧ ಬೀದರ್ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೃಷಿಯಲ್ಲಿ ನೂತನ ತಾಂತ್ರಿಕ ಪ್ರಗತಿ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ಕೇಂದ್ರ ಸಚಿವ ಭಗವಂತ ಖೂಬಾ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ರೈತರೊಂದಿಗೆ ಮಾತನಾಡಲು ಕೇಂದ್ರ ಸಚಿವರು ಉತ್ಸಾಹ ತೋರದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅವರು, ‘ನೀವು ಕೇಂದ್ರ ಸಚಿವರಾಗಿ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು. ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದೆ. ಬೆಳೆಹಾನಿಯಾಗಿದ್ದರೂ ತಕ್ಕ ಪರಿಹಾರ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಬ್ಬರು ಸಚಿವರಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಚಟುವಟಿಕೆಗೆ ಡ್ರೋಣ್ ಬಳಕೆಗೆ ಅನುಮತಿ ಬೆಳೆಗಳಿಗೆ ಡ್ರೋಣ್ ಮೂಲಕ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮುಂದಿನ ಬಜೆಟ್‌ನಲ್ಲಿ ಗ್ರಾಮ ಮಟ್ಟದಲ್ಲೂ ಡ್ರೋಣ್ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬೇಕು ಎನ್ನುವುದು ಸರ್ಕಾರ ಉದ್ದೇಶವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಡ್ರೋಣ್ಗಳನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ಬಳಸಲು ರೈತರಿಗೆ ಅನುಮತಿ ಇರಲಿಲ್ಲ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಹಾಗೂ ಖರ್ಚು ಕಡಿಮೆ ಮಾಡಲು ಕೀಟನಾಶಕ ಹಾಗೂ ಗೊಬ್ಬರ ಸಿಂಪಡಣೆಗಾಗಿ ಡ್ರೋಣ್ ಬಳಕೆಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಂಡು ರೈತರು ಕೃಷಿ ಮಾಡಬೇಕು. ಆ ಮೂಲಕ ಇನ್ನಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು. ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರವು ಶೇ 30ರ ರಿಯಾಯಿತಿ ದರದಲ್ಲಿ ರೈತರಿಗೆ ಸೌರಶಕ್ತಿ ಪರಿಕರಗಳನ್ನು ವಿತರಿಸಲಿದೆ. ರಾಷ್ಟ್ರದ 10.5 ಕೋಟಿ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿದೆ ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ಅಧಿಕಾರಿ ಡಾ.ಡಿ.ಎಂ.ಚಂದರಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್.ಸತ್ಯಭೂಷಣ ಜೈನ್ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Business Idea: ವರ್ಷವಿಡೀ ಬೇಡಿಕೆ ಇರುವ ಈ ಕೃಷಿ ಉತ್ಪನ್ನದ ಮೂಲಕ 15 ಲಕ್ಷ ರೂಪಾಯಿ ತನಕ ಗಳಿಸಿ ಇದನ್ನೂ ಓದಿ: ಏಳು ಕೃಷಿ ಉತ್ಪನ್ನಗಳ ಫ್ಯೂಚರ್ ಕಾಂಟ್ರ್ಯಾಕ್ಟ್ ವಹಿವಾಟು ಒಂದು ವರ್ಷ ನಿಷೇಧಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ
Published On - 8:28 pm, Sat, 25 December 21