ಇತ್ತ ಬಿಆರ್ ಪಾಟೀಲ್ ರಾಜೀನಾಮೆ: ಅತ್ತ ದಿಲ್ಲಿ ವಿಮಾನ ಹತ್ತಲು ಸಚಿವರ ತಂಡ ಪ್ಲ್ಯಾನ್
ಕರ್ನಾಟಕ ಕಾಂಗ್ರೆಸ್ ನಲ್ಲಿ ಎಲ್ಲವೂ ಒಂದು ಹಂತಕ್ಕೆ ಸರಿಯಾಯ್ತು ಎನ್ನುವುದರ ಹೊತ್ತಲ್ಲೇ ಈಗ ಮತ್ತೊಂದು ಗದ್ದಲ ಶುರುವಾದಂತಿದೆ. ಸಿಎಂ ಸಲಹೆಗಾರರಾಗಿದ್ದ ಆಳಂದ ಶಾಸಕ ಬಿ ಆರ್ ಪಾಟೀಲ್ ಇದೀಗ ಏಕಾಏಕಿ ತಮ್ಮ ಸಲಹೆಗಾರ ಹುದ್ದೆಗೆ ರಾಜಿನಾಮೆ ಕೊಡುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಅಲ್ಲದೇ ಕೆಲ ಸಚಿವ ತಂಡ ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದೆ.

ಬೆಂಗಳೂರು, (ಫೆಬ್ರವರಿ 01): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಂಪುಟ ರಚನೆ ವೇಳೆ ಹಿರಿಯರ ಕಡೆಗಣನೆ ಆಗ್ತಾ ಇದೆ ಅಂತ ಬಹಿರಂಗವಾಗಿ ಬಿ.ಆರ್.ಪಾಟೀಲ್ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಅವರ ಅಸಮಾಧಾನ ತಣಿಸಲು ಹೊಸ ಹುದ್ದೆ ಸೃಷ್ಟಿ ಮಾಡಿ, ಆಳಂದ ಶಾಸಕ ಬಿ.ಆರ್, ಪಾಟೀಲ್ಗೆ ಸಿಎಂ ಸಲಹೆಗಾರರ ಹುದ್ದೆ ನೀಡಲಾಗಿತ್ತು. ಆದ್ರೆ, ಇದೀಗ ಇದ್ದಕ್ಕಿದಂತೆ ಬಿ.ಆರ್.ಪಾಟೀಲ್ ರಾಜಿನಾಮೆ ನೀಡಿದ್ದಾರೆ. ಇದರ ಮಧ್ಯ ಅಹಿಂದ ಸಚಿವರು ದೆಹಲಿ ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ನಲ್ಲಿ ಸದ್ದಿಲ್ಲದೇ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ.
ನಿನ್ನೆಯಷ್ಟೇ (ಜನವರಿ 31) ಸ್ವಾಮೀಜಿ ಜೊತೆ ಸಭೆ ನಡೆಸಿ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್ನ ಅಹಿಂದ ಸಚಿವರು ಇದೀಗ ದೆಹಲಿ ತೆರಳಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಹೈಕಮಾಂಡ್ ಭೇಟಿ ಕುರಿತು ಸಚಿವ ರಾಜಣ್ಣ ಖಚಿತ ಪಡಿಸಿದ್ದು, ಮುಂದಿನ ವಾರವೇ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಮತ್ತೊಂದೆಡೆ ದೆಹಲಿ ಕರ್ನಾಟಕ ಭವನ ಉದ್ಘಾಟನೆ ನೆಪದಲ್ಲಿ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ಹೋಗುತ್ತಿದ್ದಾರೆ. ಹೈಕಮಾಂಡ್ ಮುಂದೆ ಯಾವ ವಿಷಯ ಪ್ರಸ್ತಾಪಿಸಬೇಕೆಂದು ಎಸ್ಸಿ,ಎಸ್ಟಿ ಸಚಿವರು ಈಗಾಗಲೇ ಚರ್ಚಿಸಿದ್ದಾರೆ. ಮುಂದೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದ್ರೆ ಕಾಂಗ್ರೆಸ್ಗೆ ಆಗುವ ಡ್ಯಾಮೇಜ್ಗಳ ಬಗ್ಗೆ ಹೈಕಮಾಂಡ್ಗೆ ರಾಜಣ್ಣ ವಿವರಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ: ಸಿಎಂ ರಾಜಕೀಯ ಸಲಹೆಗಾರ ಬಿಆರ್ ಪಾಟೀಲ್ ರಾಜೀನಾಮೆ
ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ನಡುವೆ ಮುಸುಕಿನ ಗುದ್ದಾಟಗಳು ಶುರುವಾಗಿದ್ದವು. ಕೆಲವರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರೆ ಇನ್ನು ಕೆಲವರು ಸೈಲೆಂಟ್ ಆಟವಾಡುತ್ತಿದ್ದರು. ಇದು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ನಾಯಕರುಗಳಿಗೆ ಖಡಕ್ ಎಚ್ಚರಿಕೆ ನೀಡುತ್ತು. ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷ ಸಂಘಟನೆ ಕಡೆ ಗಮನ ಕೊಡಿ, ಯಾವಾಗ ಏನೇನು ಮಾಡಬೇಕು ಎನ್ನುವುದು ನಮಗೆ ಗೊತ್ತಿಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎರಡೂ ಬಣಗಳು ಸೈಲೆಂಟ್ಗೆ ಜಾರಿದ್ದವು. ಆದ್ರೆ, ಇದೀಗ ಸಚಿವ ಕೆಎನ್ ರಾಜಣ್ಣ ದೆಹಲಿ ಪ್ರವಾಸ ಹೇಳಿಕೆ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಈ ಮಧ್ಯೆ ವಿಪಕ್ಷ ನಾಯಕ ಆರ್.ಅಶೋಕ್ ನವೆಂಬರ್ 15 ಅಥವಾ 16ಕ್ಕೆ ಸಿಎಂ ಬದಲಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಒಂದ್ಕಡೆ ಬಿ.ಆರ್.ಪಾಟೀಲ್ ರಾಜೀನಾಮೆ. ಮತ್ತೊಂದ್ಕಡೆ ಅಹಿಂದ ಸಚಿವರ ದೆಹಲಿ ಭೇಟಿ.. ಇನ್ನೊಂದ್ಕಡೆ ಸಿಎಂ ಬದಲಾವಣೆ ಭವಿಷ್ಯ ನುಡಿದ ಅಶೋಕ್. ಒಟ್ಟಾರೆ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಹೇಳುತ್ತಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ