ಬಳ್ಳಾರಿ ಕೆಕೆಆರ್‌ಟಿಸಿ ವಿಭಾಗದಿಂದ ಮಹಾಕುಂಭಮೇಳಕ್ಕೆ ವಿಶೇಷ ಬಸ್ ಸೌಲಭ್ಯ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರಯಾಣದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗವು ಬಳ್ಳಾರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರಯಾಗರಾಜ್‌ಗೆ ವಿಶೇಷ ಬಸ್ಸುಗಳನ್ನು ಒದಗಿಸಲು ಮುಂದಾಗಿದೆ.

ಬಳ್ಳಾರಿ, ಫೆಬ್ರವರಿ 01: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Mahakumbh) ಈವರೆಗೆ 15 ಕೋಟಿಗೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ಜನರು ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ರೈಲು, ವಿಮಾನಗಳ ಟಿಕೆಟ್‌ಗಳು ಸಿಗದೇ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಭಕ್ತಾದಿಗಳ ಅನುಕೂಲಕ್ಕಾಗಿ ಬಳ್ಳಾರಿಯಿಂದ ವಿಶೇಷ ಬಸ್ಗಳನ್ನು ಒದಗಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇರೆಗೆ ವಿಶೇಷ ಬಸ್ಸುಗಳನ್ನು ಒದಗಿಸಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ…ಬೆಂಗಳೂರು ಟು ಪ್ರಯಾಗ್‌ರಾಜ್ ಫ್ಲೈಟ್ ಟಿಕೆಟ್ ದರ ನೋಡಿದ್ರೆ ತಲೆ ಗಿರ್ ಅನ್ನುತ್ತೆ
ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ಬಸ್ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಮುಂಗಡವಾಗಿ ಕಾಯ್ದಿರಿಸಿ, ಭಕ್ತಾದಿಗಳು ಸದುಪಯೋಗಪಡಿಸಿಕೊಳ್ಳಬೇಕು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಮಹಾ ಕುಂಭಮೇಳಕ್ಕೆ ಹೋಗಬೇಕು ಎನ್ನುವ ಭಕ್ತಾದಿಗಳು ಈ ಕೆಳಗೆ ನೀಡಲಾಗಿರುವ ಅಧಿಕಾರಿಗಳ ನಂಬರ್ನ್ನು ಸಂಪರ್ಕಿಸಬಹುದಾಗಿದೆ.
- ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರ ಮೊ.7760992163
- ಬಳ್ಳಾರಿ-2ನೇ ಘಟಕದ ವ್ಯವಸ್ಥಾಪಕರ ಮೊ.7760992164
- ಸಿರುಗುಪ್ಪ ಘಟಕದ ವ್ಯವಸ್ಥಾಪಕರ ಮೊ.7760992165
- ಕುರುಗೋಡು ಘಟಕ ವ್ಯವಸ್ಥಾಪಕರ ಮೊ.9606483671
- ಸಂಡೂರು ಘಟಕ ವ್ಯವಸ್ಥಾಪಕರ ಮೊ.7760992309
ಇದನ್ನೂ ಓದಿ: ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್‌ರಾಜ್‌ನಲ್ಲಿ ಊಟ, ನೀರಿಲ್ಲದೇ ಪರದಾಟ
ಸದ್ಯ ರಾಜ್ಯದಿಂದ ತೆರಳುವ ಪ್ರಯಾಗ್‌ರಾಜ್‌ಗೆ ಎಲ್ಲ ವಿಮಾನಗಳು ಫುಲ್ ಆಗಿದ್ದು, ಫೆಬ್ರವರಿ 26ರವರೆಗೆ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಪ್ರತಿದಿನ ಪ್ರಯಾಗ್ ರಾಜ್‌ಗೆ 3 ವಿಮಾನಗಳು ತೆರಳುತ್ತವೆ. ಇನ್ನು ರಾಜ್ಯದ ಹಲವಾರು ಜನರು ಪ್ರಯಾಗ್‌ರಾಜ್‌ನಲ್ಲಿ ವಾಪಸ್ ಬರಲು ಬಸ್, ರೈಲು ಅಥವಾ ವಿಮಾನಗಳು ಸಿಗದೇ ಪರದಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.