ಬೆಂಗಳೂರಿನಲ್ಲೂ ಬಿಹಾರ ಚುನಾವಣೆ ಪ್ರಚಾರ: ಬಿಹಾರಿಗಳನ್ನ ಭೇಟಿ ಮಾಡಿ ಮತಯಾಚಿಸಿದ ಡಿಕೆಶಿ
ಬಿಹಾರ ವಿಧಾನಸಭೆ ಚುನಾವಣೆ ಕಾವು ರಂಗೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತಬೇಟೆ ನಡೆಸಿದ್ದಾರೆ. ಇನ್ನು ಇತ್ತ ಬೆಂಗಳೂರಿನಲ್ಲೂ ಸಹ ಬಿಹಾರ ಚುನಾವಣೆ ಪ್ರಚಾರದ ಬಿರುಸಿನಿಂದ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿರುವ ಬಿಹಾರಿಗಳನ್ನ ಭೇಟಿ ಮಾಡಿ ಮತಬೇಟೆ ನಡೆಸಿದ್ದಾರೆ. ಈ ವೇಳೆ ಬಿಹಾರಿಗಳಿಗೆ ಮಹತ್ವದ ಭರವಸೆ ನೀಡಿದ್ದಾರೆ.

ಬೆಂಗಳೂರು, (ನವೆಂಬರ್ 02): ಇದೇ ನವೆಂಬರ್ 6 ಹಾಗೂ 11ರಂದು ಎರಡು ಹಂತದಲ್ಲಿ ಬಿಹಾರ ವಿಧಾನಸಭೆ ಚುನಾವಣೆ (Bihar Assembly Election 2025) ನಡೆಯಲಿದ್ದು, ಈಗಾಗಲೇ ಗೆಲುವಿಗಾಗಿ ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಿಗಿದ್ದಾರೆ. ಇದರ ನಡುವೆ ಇತ್ತ ಬೆಂಗಳೂರಿನಲ್ಲೂ (Bengaluru) ಸಹ ಬಿಹಾರ ಚುನಾವಣೆ ಪ್ರಚಾರ ಜೋರಾಗಿದೆ. ಹೌದು..ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ನವೆಂಬರ್ 02) ಬೆಂಗಳೂರಿನಲ್ಲಿರುವ ಬಿಹಾರಿಗಳನ್ನು ಭೇಟಿ ಮಾಡಿ ಮತಯಾಚಿಸಿದ್ದಾರೆ. ಹೆಬ್ಬಾಳ ಸಮೀಪದ ಕೆಂಪಾಪುರ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಈ ವೇಳೆ ಡಿಕೆ ಶಿವಕುಮಾರ್ ಅವರು ಬಿಹಾರಿಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ನಡೆದಿದ್ದ ಬಿಹಾರಿಗಳು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಘೋಷಣೆ ಕೂಗಿರುವ ಪ್ರಸಂಗವೂ ಸಹ ನಡೆಯಿತು.
ಈ ವೇಳೆ ಬಿಹಾರಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾವೆಲ್ಲ ಭಾರತೀಯರು. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ರಾಷ್ಟ್ರ ಧ್ವಜ, ಸಂವಿಧಾನದ ರಕ್ಷಣೆಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಬೇರೆ ಪಕ್ಷದವರು ದೆಹಲಿಯಲ್ಲಿ ಇರಬಹುದು. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಯಾವ ಪಕ್ಷ? ಕಾಂಗ್ರೆಸ್ ಪಕ್ಷ ಅಂತ ಇತಿಹಾಸ ಇದೆ. ಗಾಂಧಿ ಕುಟುಂಬದ ತ್ಯಾಗ ಇದು. ಪ್ರಧಾನಿ ಆಗಲು ಸೋನಿಯಾ ಅವರು ಮನೆಬಾಗಿಲಿಗೆ ಬಂದಿತ್ತು. ಆರ್ಥಿಕ ತಜ್ಞರಿಗೆ ಅವಕಾಶ ಕೊಡಿ ಅಂತ ತ್ಯಾಗ ಮಾಡಿದ್ರು. ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಬಿಹಾರಿಗಳಿಗೆ ಸಮುದಾಯ ಭವನ ಭರವಸೆ ನೀಡಿದ ಡಿಕೆಶಿ
ನಿಮಗೆಲ್ಲ ಕನ್ನಡ ಬರುತ್ತೆ ಅಲ್ವಾ ಎಂದು ಡಿಕೆಶಿ ಪ್ರಶ್ನೆಗೆ ಯೆಸ್ ಬರುತ್ತೆ ಎಂದು ಬಿಹಾರಿಗಳು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಹೋ ಬೇಗ ಕಲಿತಿದ್ದೀರಿ . ನಿನ್ನೆ ತಾನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಿದ್ದೇವೆ. ನಿಮ್ಮನ್ನ ಭೇಟಿ ಮಾಡುವ ದೊಡ್ಡ ಅವಕಾಶ ಸಿಕ್ಕಿದೆ. ಸಮುದಾಯ ಭವನ ಇದ್ಯಾ ಅಂತ ಕೇಳಿದೆ ಇಲ್ಲ ಅಂದ್ರು. ನನಗೆ ಮುಜುಗರ ಆಗುತ್ತೆ. ನೀವೆಲ್ಲರು ಒಂದು ವಾರ, 10 ದಿನ ಬಿಟ್ಟು ನನ್ನ ಭೇಟಿ ಮಾಡಿ. ನಿಮಗೆಲ್ಲ ಒಂದು ಸಮುದಾಯ ಭವನ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಪರವಾಗಿ ನಿಂತುಕೊಳ್ಳಿ
ಟೀಕೆ ಮಾಡಿದವರು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆ ಕೊಡುತ್ತಿದ್ದಾರೆ. ಐದು ಗ್ಯಾರೆಂಟಿ ಕೊಟ್ಟು ರಾಜ್ಯಕ್ಕೆ ಮಾದರಿಯಾಗಿದ್ದೇವೆ. ಇಲ್ಲಿ ವಾಸ ಅಲ್ಲಿ ವೋಟ್ ಇದೆ. ಅಲ್ಲಿ ವಾಸ ಇಲ್ಲಿ ವೋಟ್ ಇದೆ ಕೆಲವರದ್ದು. ನಿಮಗೆ ಮೂರು ದಿನ ರಜೆ ಕೊಡಬೇಕು ಎಂದು ನಾನು ತಿಳಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ವ್ಯರ್ಥ ಆಗಬಾರದು. ನಿತೀಶ್ ಕುಮಾರ್ ಅವರದ್ದು ಕೊನೆ ಅಧ್ಯಾಯ. ಮಹಾಘಟಬಂಧನ್ ಗೆ ನಾವೆಲ್ಲ ಸಹಾಯ ಮಾಡಬೇಕು. ನಿಮ್ಮ ಕೈ ಮುಗಿದು ಕೇಳಿಕೊಳ್ಳಲು ಬಂದಿದ್ದೇನೆ. ನನಗೆ ದೊಡ್ಡ ಸ್ಥಾನ ಬೇಕು ಅಂತ ಹೇಳಿದ್ದೀರಿ, ಅದು ಮುಖ್ಯ ಅಲ್ಲ. ಬಿಹಾರದಲ್ಲಿ ಸರ್ಕಾರ ತನ್ನಿ, ಅದೇ ನೀವು ಮಾಡುವ ಉಪಕಾರ. ಬೆಂಗಳೂರು ಅಂತಾರಾಷ್ಟ್ರೀಯ ನಗರ. 1.40 ಲಕ್ಷ ಬಿಹಾರದ ಜನರಿದ್ದಾರೆ. ಇಷ್ಟು ದೊಡ್ಡ ಸಂಖ್ಯೆ ಜನ ಬ್ಯಾಟರಾಯನಪುರದಲ್ಲಿದ್ದಾರೆ. ವೋಟ್ ಇರುವವರು ನಮ್ಮ ಪರ ನಿಂತುಕೊಳ್ಳಿ ಎಂದು ಮನವಿ ಮಾಡಿದರು.
ಮಹಾಘಟಬಂಧನ್ ಪಕ್ಷಕ್ಕೆ ಮತ ಹಾಕಿ
ಅಸ್ಸಾಂಗೆ ಹೋಗಿದ್ದೆ, ಹೊರಗಡೆ ರಾಜ್ಯದವರು ಬಂದು ಬದುಕುತ್ತಿದ್ದಾರೆ. ನೀವೆಲ್ಲ ಶ್ರಮಿಕರು. ನೀವಿಲ್ಲದಿದ್ದರೆ ಬೃಹತ್ ಕಟ್ಟಡ ಕಟ್ಟೋಕೆ ಆಗುತ್ತಿರಲಿಲ್ಲ. ಮಹಾಘಟಬಂಧನ್ ಪಕ್ಷಕ್ಕೆ ಮತ ಹಾಕಿ, ಗೆಲ್ಲಿಸಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಿ. ನಿಮ್ಮ ಸಹಾಯ ಬೇಕು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಇಲ್ಲಿದೆ. ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ, ನಿಮ್ಮ ಜೊತೆ ನಾವಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮನ್ನ ಮತ್ತೆ ಭೇಟಿ ಮಾಡುತ್ತೇನೆ. ಮೂಲ ಊರನ್ನ ಮರೆಯಬೇಡಿ ಎಂದರು.
Published On - 7:42 pm, Sun, 2 November 25




