ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ ಹಣ ಪಡೆದ ಬಗ್ಗೆ SIT ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ಮೊಹಮ್ಮದ್ ನಲಪಾಡ್ ಹವಾಲಾ ದಂಧೆ ಮೂಲಕ ಬಿಟ್‌ಕಾಯಿನ್ ನಗದೀಕರಿಸಿ ಕಮಿಷನ್ ಪಡೆದಿರುವುದು ಉಲ್ಲೇಖವಾಗಿದೆ. ಮತ್ತೊಂದೆಡೆ, ಇದೇ ಪ್ರಕರಣದಲ್ಲಿ ಎರಡು ಬಾರಿ ಇಡಿ ನೋಟಿಸ್ ಪಡೆದಿರುವ ನಲಪಾಡ್‌ಗೆ ಈಗ 3ನೇ ನೋಟಿಸ್ ನೀಡಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ.

ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ ಹಣ ಪಡೆದ ಬಗ್ಗೆ SIT ಚಾರ್ಜ್​ಶೀಟ್​ನಲ್ಲಿ ಉಲ್ಲೇಖ
ಮೊಹಮ್ಮದ್ ನಲಪಾಡ್
Image Credit source: tv9

Updated on: Jun 09, 2026 | 10:35 AM

ಬೆಂಗಳೂರು, ಜೂನ್ 9: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ (Bitcoin) ಹಗರಣದ ತನಿಖೆ ತೀವ್ರಗೊಂಡಿದ್ದು, ಯುವ ಕಾಂಗ್ರೆಸ್ ಪ್ರಮುಖ ಮೊಹಮ್ಮದ್ ನಲಪಾಡ್ (Mohammed Nalapad) ಅವರಿಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದು, ಇದರಲ್ಲಿ ನಲಪಾಡ್ ಅವರಿಗೆ ಕೋಟ್ಯಂತರ ರೂಪಾಯಿ ಹಣ ಸಂದಾಯವಾಗಿರುವ ಬಗ್ಗೆ ಆಘಾತಕಾರಿ ವಿಚಾರ ಉಲ್ಲೇಖ ಮಾಡಲಾಗಿದೆ. ಹ್ಯಾಕರ್ ಶ್ರೀಕಿ ಜೊತೆಗಿನ ನಲಪಾಡ್ ಹಣಕಾಸು ವ್ಯವಹಾರಗಳು ಈಗ ಅಧಿಕೃತವಾಗಿ ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿವೆ.

ಮುಖ್ಯಾಂಶಗಳು

  • ನಲಪಾಡ್ ವಿರುದ್ಧ ಎಸ್‌ಐಟಿಯಿಂದ ಚಾರ್ಜ್‌ಶೀಟ್ ಸಲ್ಲಿಕೆ.
  • ಹವಾಲಾ ಮೂಲಕ ಬಿಟ್‌ಕಾಯಿನ್ ನಗದೀಕರಣದ ಆರೋಪ.
  • ಇಡಿಯಿಂದ 3ನೇ ನೋಟಿಸ್ ನೀಡಲು ಸಿದ್ಧತೆ.

ಶ್ರೀಕಿಯ ಬಿಟ್‌ಕಾಯಿನ್ ನಗದೀಕರಿಸಿದ್ದ ನಲಪಾಡ್ ಪಟಾಲಂ

ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರಕಾರ, ಮುಖ್ಯ ಆರೋಪಿ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಅಕ್ರಮವಾಗಿ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ಭಾರತೀಯ ರೂಪಾಯಿಗೆ ನಗದೀಕರಣ ಮಾಡಿಕೊಳ್ಳಲು ಮೊಹಮ್ಮದ್ ನಲಪಾಡ್ ಅವರನ್ನು ಸಂಪರ್ಕಿಸಿದ್ದ. ನಲಪಾಡ್ ತನ್ನ ಮುಂಬೈ ಮೂಲದ ಆಪ್ತ ಸ್ನೇಹಿತರು ಹಾಗೂ ರಾಬಿನ್ ಖಂಡೇವಾಲ ಮೂಲಕ ಈ ಬಿಟ್‌ಕಾಯಿನ್‌ಗಳನ್ನು ಹವಾಲಾ ರೂಪದಲ್ಲಿ ನಗದೀಕರಿಸಿಕೊಟ್ಟಿದ್ದ ಎನ್ನಲಾಗಿದೆ. ಈ ದಂಧೆಯಲ್ಲಿ ದೊಡ್ಡ ಮಟ್ಟದ ಕಮಿಷನ್ ಮೊಹಮ್ಮದ್ ನಲಪಾಡ್ ಅವರ ಕೈ ಸೇರಿತ್ತು ಎಂಬ ಬಲವಾದ ಸಾಕ್ಷ್ಯಗಳನ್ನು ಎಸ್‌ಐಟಿ ಪೊಲೀಸರು ಪತ್ತೆಹಚ್ಚಿ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಈ ಹಿಂದೆ ನಲಪಾಡ್ ಅವರ ಖಾತೆಗೆ ನಡೆದಿದ್ದ 10 ಲಕ್ಷ ರೂಪಾಯಿಗಳ ಶಂಕಾಸ್ಪದ ವ್ಯವಹಾರವೇ ಈ ಇಡೀ ಜಾಲವನ್ನು ಬಯಲಿಗೆಳೆಯಲು ಪ್ರಮುಖ ಕಾರಣವಾಗಿತ್ತು.

ಮನೆ ಮೇಲಿನ ದಾಳಿ ಮತ್ತು ಇಡಿ ತನಿಖೆಯ ಚುರುಕು

ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸಗಳ ಮೇಲೆ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದರು. ಈ ಹಗರಣದಲ್ಲಿ ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ನಡೆದಿರುವ ಹಿನ್ನೆಲೆಯಲ್ಲಿ ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಇಕ್ಕಳ, ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಆದೇಶ

ದಾಳಿಯ ಬಳಿಕ ಇಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಎರಡು ಬಾರಿ ಅಧಿಕೃತ ನೋಟಿಸ್ ಜಾರಿ ಮಾಡಿದ್ದರು. ಆದರೆ ನಲಪಾಡ್ ಸಮರ್ಪಕವಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಇದೀಗ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರತಿಗಳನ್ನು ಆಧರಿಸಿ ನಲಪಾಡ್ ಅವರಿಗೆ 3ನೇ ಬಾರಿಗೆ ಇಡಿ ನೋಟಿಸ್ ನೀಡಲು ಅಧಿಕಾರಿಗಳು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನಲಪಾಡ್​ಗೆ ಬಂಧನದ ಭೀತಿಯೂ ಎದುರಾಗಬಹುದು.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us