AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಅಭ್ಯರ್ಥಿಗೆ ಸೊನ್ನೆ ಮತ, ಭದ್ರಕೋಟೆ ಮಂಗಳೂರಿನಲ್ಲೇ ಕೇಸರಿ ಪಡೆಗೆ ಇದೆಂಥಾ ಸ್ಥಿತಿ!

ಕರಾವಳಿ ಮತ್ತು ಮಲೆನಾಡು ಪ್ರದೇಶಗಳು ಹಿಂದುತ್ವ ಮತ್ತು ಬಿಜೆಪಿಯ ಭದ್ರಕೋಟೆ ಎಂಬುದನ್ನು ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಕಳೆದ ಹಲವು ವರ್ಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಜಯಗಳಿಸದೇ ಸೋತು ಸುಣ್ಣವಾಗುತ್ತಿದೆ. ಹೀಗಿರುವಾಗ ಇದೇ ಕರಾವಳಿಯಲ್ಲಿ ಚುನಾವಣೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಒಂದೇ ಒಂದು ಮತ ಪಡೆಯಲಾಗದೇ ಹೀನಾಯವಾಗಿ ಸೋಲುಕಂಡಿದ್ದಾರೆ. ಅರೇ ಇದೇನಿದು ಅಚ್ಚರಿ ಅಂತೀರಾ? ಅಚ್ಚರಿ ಎನ್ನಿಸಿದರೂ ಸತ್ಯ.

ಬಿಜೆಪಿ ಅಭ್ಯರ್ಥಿಗೆ ಸೊನ್ನೆ ಮತ, ಭದ್ರಕೋಟೆ ಮಂಗಳೂರಿನಲ್ಲೇ ಕೇಸರಿ ಪಡೆಗೆ ಇದೆಂಥಾ ಸ್ಥಿತಿ!
BJP
ರಮೇಶ್ ಬಿ. ಜವಳಗೇರಾ
|

Updated on: Aug 24, 2025 | 12:30 PM

Share

ಮಂಗಳೂರು, (ಆಗಸ್ಟ್ 24): ಕರಾವಳಿ ಕರ್ನಾಟಕವನ್ನು (Karavali Karnataka) ಸಾಮಾನ್ಯವಾಗಿ ಬಿಜೆಪಿ (BJP) ಭದ್ರಕೋಟೆಯಂದೇ ಹೇಳಲಾಗುತ್ತದೆ. ಕೆಲವು ವರ್ಷಗಳಿಂದ ಸಣ್ಣ ಪುಟ್ಟ ಚುನಾವಣೆಗಳಿಂದ ಹಿಡಿದು ವಿಧಾನಸಭೆ (Assembly Elections), ಲೋಕಸಭೆ ಚುನಾವಣೆಗಳಲ್ಲಿ (Loksabha Elections) ಹಿಂದುತ್ವದ (Hindutwa) ಅಜೆಂಡಾದ ಮೇಲೆ ಬಿಜೆಪಿ ಗೆದ್ದುಕೊಂಡು ಬರುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಅಂದರೆ 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಗೆದ್ದಿರಲಿಲ್ಲ. ಆ ಮಟ್ಟಿಗೆ ಮಂಗಳೂರಿನಲ್ಲಿ ಕೇಸರಿ ಪಡೆ ಗಟ್ಟಿಮುಟ್ಟಾಗಿದೆ. ಆದ್ರೆ, ಸ್ಥಳೀಯ ಚುನಾವಣೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತ ಪಡೆಯಲು ಸಾಧ್ಯವಾಗದಿರುವ ಘಟನೆ ನಡೆದಿದೆ. ಹೌದು…ಮೊನ್ನೆ ನಡೆದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮಾ ಎನ್ನುವರು ಒಂದೂ ವೋಟ್ ಪಡೆಯದೇ ಅಪರೂಪದ ಮತ್ತು ಅವಮಾನಕರ ಸೋಲು ಕಂಡಿದೆ.

ಬಿಜೆಪಿಗೆ ಒಂದೇ ಒಂದು ಮತ ಇಲ್ಲ

ಹೌದು…ಕಡಬ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 1ರಲ್ಲಿ ಬಿಜೆಪಿಯಿಂದ ಪ್ರೇಮಾ ಎನ್ನುವರು ಸ್ಪರ್ಧೆ ಮಾಡಿದ್ದರು. ಇನ್ನು ಕಾಂಗ್ರೆಸ್​​ ನಿಂದ ಮುಸ್ಲಿಂ ಸಮುದಾಯದ ತಮನ್ನಾ ಜನೀಬ್ ಸ್ಪರ್ಧಿಸಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೋರ್ವ ಮುಸ್ಲಿಂ ಮಹಿಳೆ ಜೈನಾಬಿ ಕಣಕ್ಕಳಿದಿದ್ದರು. ಆದ್ರೆ, ವಾರ್ಡ್​​ ನ ಒಟ್ಟು 418 ಮತಗಳ ಪೈಕಿ ಬಿಜೆಪಿಯ ಪ್ರೇಮಾಗೆ ಒಂದೇ ಒಂದು ವೋಟ್ ಬಿದ್ದಿಲ್ಲ. ಇದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್​​ ನ ತಮನ್ನಾ 201 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ತಮನ್ನಾ ತಮ್ಮ ಸಮೀಪ ಸ್ಪರ್ಧಿ ಸ್ವತಂತ್ರ ಅಭ್ಯರ್ಥಿ ಜೈನಾಬಿ ಅವರನ್ನು 62 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಣದಲ್ಲಿದ್ದ ಎಸ್​ ಡಿಪಿಐ ಅಭ್ಯರ್ಥಿ 74 ಮತ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಎ(ಮಹಿಳೆ) ಮೀಸಲಾಗಿರುವ ಊ ವಾರ್ಡ್​ ನಲ್ಲಿ ಒಟ್ಟು ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ವಾರ್ಡ್ ಸಂಖ್ಯೆ 1ರ ಮತದಾರರಲ್ಲದ ಬಿಜೆಪಿಯ ಪ್ರೇಮಾ ಅವರಿಗೆ ಒಂದೇ ಒಂದು ಮತ ಪಡೆಯಲು ಸಾಧ್ಯವಾಗಿಲ್ಲ. ಅಚ್ಚರಿ ಅಂದ್ರೆ, ಮುಸ್ಲಿಂ ಅಭ್ಯರ್ಥಿಗಳ ನಡುವೆ ಮತಗಳು ಹಂಚಿ ಬಿಜೆಪಿಯ ಪ್ರೇಮಾಗೆ ಪ್ಲಸ್ ಆಗಬೇಕಿತ್ತು. ಆದ್ರೆ, ಲೆಕ್ಕಾಚಾರ ಬುಡಮೇಲಾಗಿದ್ದು, ಬಿಜೆಪಿ ಹಿನ್ನಡೆಯಾಗಿದೆ.

ಬಿಜೆಪಿಯ ಪ್ರೇಮಾಗೆ ಎರಡೂ ಕಡೆ ಸೋಲು

ಇನ್ನು ಇದೇ ಪ್ರೇಮಾ ಅವರು 1ನೇ ವಾರ್ಡ್ ಮಾತ್ರವಲ್ಲದೇ ತಾವು ವಾಸಿಸುವ 6ನೇ ವಾರ್ಡ್ ನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಕಂಡಿದ್ದಾರೆ. ಕಾಂಗ್ರೆಸ್​ ನ ನೀಲಾವತಿ ಶಿವರಾಮ್ ವಿರುದ್ಧ ಪ್ರೇಮಾ 177 ಮತಗಳಿಂದ ಪರಾಭವಗೊಂಡಿದ್ದಾರೆ. ನೀಲಾವತಿ 314 ಮತಗಳನ್ನು ಗೆದ್ದು ಬೀಗಿದ್ದಾರೆ. ಇದರೊಂದಿಗೆ ಬಿಜೆಪಿಯಿಂದ ಎರಡ ವಾರ್ಡ್​​ ಗಳಿಂದ ಕಣಕ್ಕಿಳಿದಿದ್ದ ಪ್ರೇಮಾ ಎರಡಲೂ ಸೋಲನುಭವಿಸಿದ್ದಾರೆ.

ಈ ಹೀನಾಯ ಸೋಲಿನ ಬಗ್ಗೆ ಬಿಜೆಪಿ ಮುಖಂಡರು ಪ್ರತಿಕ್ರಿಯಿಸಿದ್ದು, ಈ ಪ್ರದೇಶವು ಮುಸ್ಲಿಂ ಬಹುಸಂಖ್ಯಾತರನ್ನು ಒಳಗೊಂಡಿರುವುದರಿಂದ ಸಾಮಾನ್ಯವಾಗಿ ಅಲ್ಲಿ ಬಿಜೆಪಿಗೆ ಕಡಿಮೆ ಬೆಂಬಲವಿದೆ ಎಂದು ಸಮಜಾಯಿಷಿ ನೀಡಿದರು. ವಾರ್ಡ್​ ಮುಸ್ಲಿಂ ಭದ್ರಕೋಟೆಯಾಗಿರಬಹುದು.   ಆದ್ರೆ, ಅಲ್ಲಿ ಒಬ್ಬೇ ಒಬ್ಬ ಬಿಜೆಪಿಯವರ ಮನೆ ಇಲ್ವಾ? ಒಬ್ಬ ಕಾರ್ಯಕರ್ತ ಇರಲಿಲ್ವಾ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಕಡಬ ಪಂಚಾಯ್ತಿ ಕೈ ತೆಕ್ಕೆಗೆ

ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಒಟ್ಟು 13 ಸ್ಥಾನಗಳ ಪೈಕಿ ಕಾಂಗ್ರೆಸ್ 8 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಇನ್ನು ಬಿಜೆಪಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.ಈ ಫಲಿತಾಂಶ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಭರವಸೆ ಮೂಡಿಸಿದೆ.

ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್​​ ಗೆ ದಿಕ್ಸೂಚಿ

ಕಡಬ ಪಟ್ಟಣ ಪಂಚಾಯತ್ನಲ್ಲಿ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ 8 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಮತದಾರರು ಗ್ಯಾಂರಂಟಿ ಯೋಜನೆಗಳಿಗೆ ಮತ್ತು ಕಾಂಗ್ರೆಸಿನ ಜನಪರ ಯೋಜನೆಗಳಿಗೆ ಬೆಂಬಲಿಸಿದ್ದಾರೆ. ಈ ಚುನಾವಣೆಯು ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಒಂದು ದಿಕ್ಸೂಚಿಯಾಗಿದ್ದು, ಈ ಚುನಾವಣೆ ಮೂಲಕ ಕಾರ್ಯಕರ್ತರು ಉತ್ಸಾಹದಿಂದ ಮುಂದಿನ ಚುನಾವಣೆ ಎದುರಿಸಲು ಒಂದು ಶಕ್ತಿಯನ್ನು ಪಡೆದಿದ್ದಾರೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.