ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು!

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಕ್ರಮದ ಸೂಚನೆ ನೀಡಿದೆ. ಸದ್ಯ, ಮೌಖಿಕ ಮಾಹಿತಿ ನೀಡಿರುವ ರಾಜ್ಯ ನಾಯಕರು ಪೂರ್ಣ ಮಾಹಿತಿ ಸಲ್ಲಿಸಲು ಸಮಯ ಕೇಳಿದ್ದಾರೆ. ಇದೇ ವೇಳೆ, ರಾಜ್ಯ ನಾಯಕರಿಗೆ ಹೈಕಮಾಂಡ್ ಅನೇಕ ಪ್ರಶ್ನೆಗಳನ್ನು ಕೇಳಿದೆ. ಅವುಗಳ ಮಾಹಿತಿ ಇಲ್ಲಿದೆ.

ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು!
ಆರ್ ಅಶೋಕ್ ಹಾಗೂ ವಿಜಯೇಂದ್ರ
Image Credit source: tv9
Edited By:

Updated on: Jun 24, 2026 | 7:49 AM

ಬೆಂಗಳೂರು, ಜೂನ್ 24: ಅಡ್ಡ ಮತದಾನದ ಕುರಿತು ವರಿಷ್ಠರಿಗೆ ಮಾಹಿತಿ ನೀಡಲು ನವದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ (BJP) ನಾಯಕರು ಬೆಂಗಳೂರಿಗೆ ವಾಪಸಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಒಬ್ಬರೇ ದೆಹಲಿಯಲ್ಲಿ ಉಳಿದುಕೊಂಡಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಉಪಸ್ಥಿತಿಯಲ್ಲೇ ವರಿಷ್ಠರು ಪರಿಷತ್ ಚುನಾವಣೆ ಘೋಷಣೆಯಾದಾಗಿನಿಂದ ಮತದಾನದವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರಿಂದ ಮಾಹಿತಿ ಕೇಳಿದ್ದಾರೆ. ಅಡ್ಡ ಮತದಾನ ಮಾಡಿರುವವರು ಹಣ ಪಡೆದೇ ವಿಪ್ ಉಲ್ಲಂಘಿಸಿದ್ದಾರೆ ಎಂದು ವರಿಷ್ಠರಿಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿಯೊಂದಿಗೆ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.

ಹೈಕಮಾಂಡ್ ಕೇಳಿದ ಪ್ರಶ್ನೆಗಳೇನು?

  • ಚುನಾವಣೆ ಘೋಷಣೆಯಾದ ಬಳಿಕ ಎಷ್ಟು ಸಭೆ ನಡೆಸಿದ್ದೀರಿ?
  • ಶಾಸಕಾಂಗ ಪಕ್ಷದ ಸಭೆ ಯಾವಾಗ ಮಾಡಿದ್ದೀರಿ?
  • ಮತಗಳ ಹಂಚಿಕೆ ಯಾವ ರೀತಿ ಮಾಡಿದ್ದೀರಿ?
  • ಶಾಸಕರಿಗೆ ವಿಪ್ ಯಾವಾಗ ಕೊಟ್ಟಿದ್ದೀರಿ?
  • ನಿಮ್ಮ ಸಿದ್ಧತೆ ಯಾವ ರೀತಿ ಇತ್ತು?
  • ಸಿ.ಟಿ. ರವಿ ನೇತೃತ್ವದ ಸಮಿತಿ ವರದಿಯಿಂದ ಏನು ಮಾಹಿತಿ ಸಿಗಲಿದೆ?
  • ಶಾಸಕಾಂಗ ಪಕ್ಷದ ಸಭೆಯನ್ನು 2-3 ದಿನ ಮೊದಲೇ ಮಾಡಬಹುದಿತ್ತಲ್ವಾ?
  • ಜೆಡಿಎಸ್ ಜೊತೆ ಎಷ್ಟು ಸಭೆ ಮಾಡಿದ್ದೀರಿ?
  • ಜೆಡಿಎಸ್​ಗೆ ಹಾಕುವ ಮತಗಳ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಕೊಟ್ಟಿದ್ರಾ?
  • ಅನುಮಾನ ಇದ್ದವರ ಜೊತೆ ಮತ್ತೆ ಮಾತುಕತೆ ಮಾಡಿದ್ರಾ?

ವರಿಷ್ಠರ ಪ್ರಶ್ನಾವಳಿಗಳಿಗೆ ಉತ್ತರಿಸಿರುವ ರಾಜ್ಯ ನಾಯಕರು, ಶಾಸಕಾಂಗ ಪಕ್ಷದ ಸಭೆ ನಡೆಸಿದ ವಿಚಾರ, ಅಭ್ಯರ್ಥಿಗಳಿಗೆ 30 ಮತಗಳ ನಿಗದಿ ಮತ್ತು ಮೊದಲೇ ವಿಪ್ ಯಾಕೆ ಕೊಟ್ಟಿರಲಿಲ್ಲ ಎಂಬುದನ್ನು ಸಭೆಯಲ್ಲಿ ವಿವರಿಸಿದ್ದಾರೆ.

ರಾಜ್ಯ ನಾಯಕರು ವರಿಷ್ಠರಿಗೆ ಹೇಳಿದ್ದೇನು?

  • ಹಣ ಪಡೆದು ಅಡ್ಡ ಮತದಾನ ಮಾಡಲಾಗಿದೆ.
  • ಇನ್ನಷ್ಟು ಖಚಿತ ಮಾಹಿತಿಯೊಂದಿಗೆ ವರದಿ ಸಲ್ಲಿಸುತ್ತೇವೆ.
  • ನಮಗೆ ಇನ್ನೂ ಸ್ವಲ್ಪ ಸಮಯ ಬೇಕು.
  • ಜೆಡಿಎಸ್​ಗೆ ಪೂರ್ಣ ಮಾಹಿತಿ ನೀಡಲಾಗಿತ್ತು.
  • ಕಾಂಗ್ರೆಸ್​ಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ವಿಪ್ ನೀಡಲಾಗಿತ್ತು.
  • ಪ್ರತಿಯೊಬ್ಬ ಶಾಸಕರ ಜೊತೆ ಮಾತನಾಡಿಯೇ ವಿಪ್ ನೀಡಲಾಗಿತ್ತು.

ಹೈಕಮಾಂಡ್ ನಿರ್ದೇಶನ ಏನು?

  • ಶೀಘ್ರ ಸಿ.ಟಿ. ರವಿ ಸಮಿತಿ ವರದಿ ಕಳುಹಿಸಿ.
  • ಅಗತ್ಯ ಬಿದ್ದರೆ ಮತ್ತೆ ದೆಹಲಿಗೆ ಕರೆಯುತ್ತೇವೆ.
  • ಅಶೋಕ್ ಮತ್ತು ವಿಜಯೇಂದ್ರ ಇನ್ನಷ್ಟು ತಯಾರಿ ಮಾಡಿಕೊಳ್ಳಬಹುದಾಗಿತ್ತು.
  • ನಿಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದರೆ ಕಳುಹಿಸಿ.
  • ನಮ್ಮ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ.
  • ಸೂಕ್ತ ಸಮಯ ‌ನೋಡಿ ಕ್ರಮ ಕೈಗೊಳ್ಳುತ್ತೇವೆ.

ಇದನ್ನೂ ಓದಿ: ಪರಿಷತ್​ ಚುನಾವಣೆಯಲ್ಲಿ ಅಡ್ಡ ಮತದಾನ: ರಾಜ್ಯ ನಾಯಕರಿಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್​​

ಸಭೆಯ ವೇಳೆ, ಅಡ್ಡ ಮತದಾನದಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂಬ ರೀತಿಯಲ್ಲೇ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿರುವ ಹೈಕಮಾಂಡ್, ವಿಪ್ ಉಲ್ಲಂಘಿಸಿದ ಶಾಸಕರ ಪತ್ತೆಯಾದ ಬಳಿಕ ಕ್ರಮ ಕೈಗೊಳ್ಳುವ ಬಗ್ಗೆ ಸೂಚ್ಯವಾಗಿ ತಿಳಿಸಿದೆ. ಆದರೆ ಸಭೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರು ಯಾರು ಎಂದು ನಿರ್ದಿಷ್ಟವಾಗಿ ಯಾವುದೇ ಶಾಸಕರ ಹೆಸರು ಪ್ರಸ್ತಾಪವಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us