ಕರ್ನಾಟಕ ಬಿಜೆಪಿಯ ಮೂವರು ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್‌..!

| Updated By: ರಮೇಶ್ ಬಿ. ಜವಳಗೇರಾ

Updated on: Mar 25, 2025 | 10:22 PM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಗದ್ದಲ ಜೋರಾಗಿದೆ. ಈ ಹನಿಟ್ರ್ಯಾಪ್​ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಇದರ ಮಧ್ಯೆ ಕರ್ನಾಟಕದ ಮೂವರ ಶಾಸಕರು ಹಾಗೂ ಇಬ್ಬರು ಮಾಜಿ ಶಾಸಕರಿಗೆ ​​ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್​ ನೀಡಿದೆ. ಈ ಮೂಲಕ ಹೈಕಮಾಂಡ್​ ಯತ್ನಾಳ್ ಹಾಗೂ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರುಗಳಿಗೆ ಶಾಕ್ ಕೊಟ್ಟಿದೆ.

ಕರ್ನಾಟಕ ಬಿಜೆಪಿಯ ಮೂವರು ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್‌..!
Bjp Show Cause Notice
Follow us on

ಬೆಂಗಳೂರು, (ಮಾರ್ಚ್​ 25): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ (show-cause notice )ನೀಡಿತ್ತು, ಇದರ ಬೆನ್ನಲ್ಲೇ ಇದೀಗ ಮೂವರು ಶಾಸಕರು ಹಾಗೂ ಇಬ್ಬರು ಮಾಜಿ ಸಚಿವರಿಗೆ ಶೋಕಾಸ್​ ನೋಟಿಸ್ ನೀಡಿದೆ. ಪಕ್ಷದ ಆಂತರಿಕ ವಿಚಾರ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಿದ ಆರೋಪದ ಮೇಲೆ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಹಾಗೂ ಬಿ.ಪಿ.ಹರೀಶ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದರ ಜೊತೆಗೆ ಯಡಿಯೂರಪ್ಪನವರ ಆಪ್ತರಾದ ಮಾಜಿ ಸಚಿವರಾದ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಶೋಕಾಸ್ ನೋಟಿಸ್‌ ಜಾರಿ ಮಾಡಲಾಗಿದೆ.

ಶಾಸಕ ಬಿ.ಪಿ ಹರೀಶ್ ಅವರು ಯತ್ನಾಳ್​ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಎಸ್​​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್​​ ರೆಬೆಲ್ ಶಾಸಕರಾಗಿದ್ದು, ಇವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದಾರೆ. ಅಲ್ಲದೇ ಬಹಿರಂಗವಾಗಿಯೇ ಕಾಂಗ್ರೆಸ್​ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇವರುಗಳಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಶೋಕಾಸ್​ ನೋಟಿಸ್​​ಗೆ ಕೆರಳಿದ ಯತ್ನಾಳ್ ಬಣ: ಮೊದಲ ಪ್ರತಿಕ್ರಿಯೆಯಲ್ಲೇ ಖಡಕ್ ಉತ್ತರ

ಇನ್ನು ರೇಣುಕಾಚಾರ್ಯ ಹಾಗೂ ಸುಬ್ರಹ್ಮಣ್ಯ ನಾಯ್ಡು ಸೇರಿಕೊಂಡು ಯತ್ನಾಳ್​ಗೆ ಟಾಂಗ್ ಕೊಡಲು ಸಭೆ ಮೇಲೆ ಸಭೆ ಮಾಡಿದ್ದರು. ಅಲ್ಲದೇ ಬೃಹತ್ ಸಮಾವೇಶ ಮಾಡುವ ಮೂಲಕ ಪರೋಕ್ಷವಾಗಿ ಯತ್ನಾಳ್​ ಹಾಗೂ ಹೈಕಮಾಂಡ್​ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ನಡುವೆಯೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ
ಕರ್ನಾಟಕ ಬಿಜೆಪಿ ಗೊಂದಲಕ್ಕೆ ಬ್ರೇಕ್ ಹಾಕಲು ಕೂಡಿಬಂತು ಕಾಲ
ನೋಟಿಸ್​​ಗೆ ಕೆರಳಿದ ಯತ್ನಾಳ್ ಬಣ: ಮೊದಲ ಪ್ರತಿಕ್ರಿಯೆಯಲ್ಲೇ ಖಡಕ್ ಉತ್ತರ
ವಿಜಯೇಂದ್ರಗೆ ಶಾಕ್: ಯತ್ನಾಳ್​ ಕಡೆ ತಿರುಗಿದ ತಟಸ್ಥ ನಾಯಕರ ಬಣ, ಗೌಪ್ಯ ಸಭೆ!
ಯತ್ನಾಳ್​ಗೆ ಮತ್ತೊಮ್ಮೆ ಶಾಕ್ ಕೊಟ್ಟ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ!

ಕರ್ನಾಟಕ ಬಿಜೆಪಿಯಲ್ಲಿ ಬಣಬಡಿದಾಟಕ್ಕೆ ಸಂಬಂಧಿಸಿದಂತೆ ಟಿವಿ9ಗೆ ಮಾತನಾಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಆಗುತ್ತೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ತಿಂಗಳಾಂತ್ಯದಲ್ಲಿ ಶಿಸ್ತುಕ್ರಮ ಆಗುತ್ತೆ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಅಲ್ಲದೇ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್​ ಜಾರಿ ಮಾಡುವ ಮೂಲಕ ಬಣಬಡಿದಾಟಕ್ಕೆ ಬ್ರೇಕ್​ ಹಾಕಲು ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ