ಶೋಕಾಸ್ ನೋಟಿಸ್ಗೆ ಕೆರಳಿದ ಯತ್ನಾಳ್ ಬಣ: ಮೊದಲ ಪ್ರತಿಕ್ರಿಯೆಯಲ್ಲೇ ಖಡಕ್ ಉತ್ತರ
ಕರ್ನಾಟಕ ಬಿಜೆಪಿ ಬಣ ಬಡಿದಾಟ ತಾರಕಕ್ಕೇರಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ಗುದ್ದಾಟದಲ್ಲಿ ಬಿಜೆಪಿ ಹೈಕಮಾಂಡ್ ಪ್ರವೇಶ ಮಾಡಿದ್ದು, ಬಿಜೆಪಿ ಕೇಂದ್ರ ಶಿಸ್ತು ಸಮಿತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ವಿಜಯೇಂದ್ರ ಕೈ ಮೇಲಾಗಿದ್ದು, ಇದರಿಂದ ಯತ್ನಾಳ್ ಬಣದ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, (ಫೆಬ್ರವರಿ 10): ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದೀರಿ, ಆದರೆ ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಬಿಜೆಪಿ (BJP) ಶಿಸ್ತುಸಮಿತಿ ಎರಡನೇ ಬಾರಿಗೆ ಶೋಕಾಸ್ ನೋಟಿಸ್ ನೀಡಿದೆ. ಈ ಮೂಲಕ ಮತ್ತೊಂದು ನೋಟಿಸ್ ಕೊಡಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ ಎಂದು ಬಸನಗೌಡ ಯತ್ನಾಳ್ ಬಣವನ್ನು ಕೆರಳಿಸಿದೆ. ಇನ್ನು ಈ ನೋಟಿಸ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಮೇಲೆ ಕೆಲ ವ್ಯಕ್ತಿಗಳ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಶೋಕಾಸ್ ನೋಟಿಸ್ ಸಂಬಂಧ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿರುವುದಿಲ್ಲ. ನೋಟಿಸ್ ಬಂದಮೇಲೆ ಕೆಲ ವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕ ಭಾಗದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ವೈಫಲ್ಯಗಳನ್ನು ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದಿಲ್ಲಿಯಲ್ಲಿ ರಾಜಕೀಯ ಆಟವಾಡುತ್ತಿರುವ ಯತ್ನಾಳ್‌ಗೆ ಮತ್ತೊಮ್ಮೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ
ಇನ್ನು ಈ ಬಗ್ಗೆ ಯತ್ನಾಳ್ ಬಣದ ಶಾಸಕ ಬಿಪಿ ಹರೀಶ್ ಮಾತನಾಡಿ, ನೋಟಿಸ್ ಮೂಲಕ ಶಾಸಕ ಯತ್ನಾಳ್‌ರನ್ನು ಬೆದರಿಸಲು ಸಾಧ್ಯವಿಲ್ಲ. ವಿಜಯೇಂದ್ರ ಕಡೇ ಪ್ರಯತ್ನ ಎಂದು ನೋಟಿಸ್ ಕೊಡಿಸಿರಬಹುದು. ನಾವು ಹೈಕಮಾಂಡ್ ವಿರುದ್ಧ ಹೋಗಲ್ಲ ಎಂದು ಹೇಳಿದ್ದೇವೆ. ಹೈಕಮಾಂಡ್ ವಿರುದ್ಧ ಹೋಗುವ ಪ್ರಶ್ನೆ ಇಲ್ಲ. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ತಡೆ ಸಿಕ್ಕಿದೆ. ಮುಂದೆ ಇಂತಹ ಅನೇಕ ಜಿಲ್ಲಾಧ್ಯಕ್ಷರ ಬದಲಾವಣೆ ಆಗಬಹುದು ಎಂದರು.
ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳರಿಗೆ ನೋಟೀಸು ಬಂದಿದೆ ಎಂದು ಮಾಧ್ಯಮಗಳು ವಿಜೃಂಭಿಸುತ್ತಿದೆ.
ನನಗೆ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು…
— Basanagouda R Patil (Yatnal) (@BasanagoudaBJP) February 10, 2025
ನೊಟೀಸ್ ಕೊಟ್ಟಿರುವ ಬಗ್ಗೆ ಗೊತ್ತಾಯಿತು. ಬಳಿಕ ಯತ್ನಾಳ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಅವರು ಹೈದ್ರಾಬಾದ್ ಗೆ ತೆರಳುತ್ತಿರುವ ಹಿನ್ನಲೆ ಭೇಟಿ ಸಾಧ್ಯವಾಗಲಿಲ್ಲ. ನೊಟೀಸ್ ಗೆ ಅವರು ಉತ್ತರ ಕೊಡಲಿದ್ದಾರೆ. ನೊಟೀಸ್ ಮೂಲಕ ಯತ್ನಾಳ್ ಅವರನ್ನು ಬೆದರಿಸಲು ಸಾಧ್ಯವಿಲ್ಲ. ವಿಜಯೇಂದ್ರ ಅವರು ಕಡೆ ಪ್ರಯತ್ನ ಅಂತಾ ನೋಟಿಸ್ ಕೊಡಿಸಿರಬಹುದು. ನಾವು ಹೈಕಮಾಂಡ್ ವಿರುದ್ಧ ಹೋಗಲ್ಲ ಅಂತಾ ಹೇಳಿದ್ದೇವೆ. ಹೈಕಮಾಂಡ್ ಹೇಳಿದರೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಾಗಿ ಹೇಳಿದ್ದಾರೆ ಎಂದರು.