ತಾಕತ್ತಿದ್ದರೆ ನಿಮ್ಮ ವಿರುದ್ಧದ ಮುಡಾ ಹಗರಣದ ಸಿಬಿಐ ತನಿಖೆಗೆ ಸಹಕರಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

ಕರ್ನಾಟಕದಲ್ಲಿ ಇನ್ನೂ ವಕ್ಫ್​ ಆಸ್ತಿ ಕಬಳಿಕೆಯ ವಿವಾದದ ಬಿಸಿ ತಣ್ಣಗಾಗಿಲ್ಲ. ಇಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಫ್​ ಆಸ್ತಿ ಕಬಳಿಕೆ ವಿಷಯದಲ್ಲಿ ಸುಮ್ಮನಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮಗೆ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ. ಈ ವಿಷಯವನ್ನು ಪ್ರಧಾನಿ ಮೋದಿ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ತಾಕತ್ತಿದ್ದರೆ ನಿಮ್ಮ ವಿರುದ್ಧದ ಮುಡಾ ಹಗರಣದ ಸಿಬಿಐ ತನಿಖೆಗೆ ಸಹಕರಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು
ವಿಜಯೇಂದ್ರ
Follow us
ಸುಷ್ಮಾ ಚಕ್ರೆ
|

Updated on: Dec 14, 2024 | 9:20 PM

ಬೆಂಗಳೂರು: ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿ.ವೈ. ವಿಜಯೇಂದ್ರ ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿ ಮೋದಿ ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿ.ವೈ. ವಿಜಯೇಂದ್ರ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿರುವುದು ಕಾಂಗ್ರೆಸ್ಸಿಗರು ಆಕ್ರಮಿಸಿರುವ ವಕ್ಫ್ ಆಸ್ತಿಗಳ ಕುರಿತೇ ಹೊರತು ಬಿಜೆಪಿಯವರನ್ನು ಕುರಿತು ಅಲ್ಲ. ಕಾಂಗ್ರೆಸಿಗರ ವಿರುದ್ಧ ಇರುವ ಆರೋಪಕ್ಕೆ ಯಾರಾದರೂ 150 ಕೋಟಿ ರೂಪಾಯಿಗಳ ಆಮಿಷವನ್ನು ಒಡ್ಡಲು ಸಾಧ್ಯವೇ ಎಂಬ ಕನಿಷ್ಠ ವಿವೇಕವೂ ನಿಮಗಿಲ್ಲವಲ್ಲ? ತಲೆಬುಡವಿಲ್ಲದ ಆರೋಪವನ್ನು ಮಾಡಿ ನೀವು ಹಾಗೂ ನಿಮ್ಮ ಸಂಪುಟದ ಸಚಿವ ಪ್ರಿಯಾಂಕ್ ಖರ್ಗೆ ಸಂಭ್ರಮಿಸುತ್ತಿರುವ ಪರಿ ನಿಮ್ಮ ಬಾಲಿಶತನವನ್ನು ತೋರಿಸುತ್ತಿದೆಯೇ ಹೊರತು ನಿಮ್ಮ ರಾಜಕೀಯ ಜಾಣ್ಮೆಯನ್ನಲ್ಲ. ನಿಮಗೆ ಧೈರ್ಯವಿದ್ದರೆ, ಉಚ್ಛ ನ್ಯಾಯಾಲಯದಲ್ಲಿರುವ ನಿಮ್ಮ ವಿರುದ್ಧದ ಮುಡಾ ಹಗರಣವನ್ನು ಸಿಬಿಐ ತನಿಖೆ ಕೋರಿದ ರಿಟ್ ಅರ್ಜಿಗೆ ಆಕ್ಷೇಪವೆತ್ತದೇ ಸಿಬಿಐ ತನಿಖೆ ನಡೆಯಲು ಅವಕಾಶ ಮಾಡಿಕೊಡಿ ನೋಡೋಣ ಎಂದು ವಿಜಯೇಂದ್ರ ಸವಾಲು ಹಾಕಿದ್ದಾರೆ.

ಸಿಬಿಐ, ಇಡಿ ತನಿಖೆಗಳಿಗೆ ಬೆಚ್ಚಿಬಿದ್ದಿರುವ ನೀವು ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಘಟಾನುಘಟಿ ಹಿರಿಯ ವಕೀಲರನ್ನು ದೆಹಲಿಯಿಂದ ಕರೆಸಿಕೊಂಡು ಕಾನೂನು ರಕ್ಷಣೆ ಪಡೆಯಲು ವ್ಯರ್ಥ ಪ್ರಯತ್ನ ನಡೆಸಿದಿರಿ. ಉಚ್ಛ ನ್ಯಾಯಾಲಯದ ತೀರ್ಪಿನಿಂದ ಮುಖಭಂಗಕ್ಕೀಡಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಯಾವ ನೈತಿಕತೆ ಇದೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹರಣ ಸೇರಿದಂತೆ ಹತ್ತು ಹಲವು ಭ್ರಷ್ಟಾಚಾರದ ಆರೋಪಗಳು ನಿಮ್ಮ ಹಾಗೂ ನಿಮ್ಮ ಸರ್ಕಾರದ ಕೊರಳಿಗೆ ಸುರಳಿಯಾಗಿ ಸುತ್ತಿಕೊಂಡಿದೆ, ಹೇಗಾದರೂ ಮಾಡಿ ಈ ಹಗರಣದಿಂದ ಬಚಾವಾಗಲೇಬೇಕೆಂದು ನಿಮ್ಮ ಕೈ ಕೆಳಗಿನ ಅಧಿಕಾರಿಗಳು ನಡೆಸುವ ಲೋಕಾಯುಕ್ತದ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದುಕೊಳ್ಳಲು ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸದಂತೆ ತಡೆಯಲು ಈ ಕ್ಷಣಕ್ಕೂ ದೆಹಲಿಯ ಸಂವಿಧಾನ ತಜ್ಞ ವಕೀಲರನ್ನೇ ಕರೆಸಿ ಕನ್ನಡಿಗರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡಿ ವಾದ ಮಾಡಿಸಿಕೊಳ್ಳುತ್ತಿದ್ದೀರಿ. ನಿಮಗೆ ಮೆತ್ತಿಕೊಂಡಿರುವ ಕಪ್ಪುಮಸಿ ಅಳಿಸುವ ಯಾವ ರಾಸಾಯನಿಕವೂ ನಿಮಗೆ ದೊರಕುತ್ತಿಲ್ಲ. ಇದರಿಂದ ನೀವು ಹತಾಶರಾಗಿ ತಲೆಬುಡವಿಲ್ಲದ ಕಪೋಲಕಲ್ಪಿತ ವಿಷಯ ಹಿಡಿದುಕೊಂಡು ಬ್ರಹ್ಮಾಸ್ತ್ರವೆಂದು ಭ್ರಮಿಸಿ ಪ್ರಯೋಗಿಸಲು ಹೊರಟಿದ್ದೀರಿ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡ್ತಾರೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಲ್ಲದ ಕಿಡಿ

ಇದರಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತೂ ಇನ್ನೇನನ್ನೂ ಸಾಧಿಸಲಾಗದು. ನಿಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಾಕ್ಷಿಗಳು ದಿನನಿತ್ಯವೂ ಸರಣಿ ರೂಪದಲ್ಲಿ ಮೇಲೆದ್ದು ನಿಮ್ಮ ಮುಖಕ್ಕೆ ರಾಚುತ್ತಲೇ ಇವೆ, ಇಷ್ಟಾಗಿಯೂ ಭಂಡತನದಿಂದ ವರ್ತಿಸುತ್ತಿರುವ ನೀವು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ ಏಕೈಕ ಮುಖ್ಯಮಂತ್ರಿ ಎಂಬುದು ಇತಿಹಾಸದಲ್ಲಿ ಈಗಾಗಲೇ ದಾಖಲಾಗಿಹೋಗಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ನಿಮ್ಮ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರು ಹಾಗೂ ಹಿಂದೂ ಧಾರ್ಮಿಕ ಸ್ಥಳಗಳನ್ನು ಕಬಳಿಸಲು ಹೊರಟಿರುವ ಪ್ರಕರಣ, ಪಂಚಮಸಾಲಿ ಮೀಸಲಾತಿಯ ಹೋರಾಟಗಾರರ ಮೇಲೆ ಅಮಾನುಷವಾಗಿ ನಡೆದ ಪೊಲೀಸ್ ದಬ್ಬಾಳಿಕೆಯ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಘಟನೆಯನ್ನು, ಬಾಣಂತಿಯರ ಸರಣಿ ಸಾವಿನ ಪ್ರಕರಣ, ದಿನವೂ ಸರಣಿ ರೂಪದಲ್ಲಿ ಹೊರಬರುತ್ತಿರುವ ಮುಡಾದ ಹಗರಣ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚರ್ಚೆಯನ್ನು ದಿಕ್ಕುತಪ್ಪಿಸಲು ಹಾಗೂ ರಾಜ್ಯದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕ್ಷುಲ್ಲಕ ಕಪೋಲಕಲ್ಪಿತ ವಿಷಯವನ್ನು ರಂಧ್ರ ಪೂರಿತ ದೋಣಿಯಂತೆ ತೇಲಿಬಿಟ್ಟಿರುವುದು ನಿಮ್ಮ ರಾಜಕೀಯ ಪ್ರಬುದ್ಧತೆಗೆ ತುಕ್ಕು ಹಿಡಿದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ವಿಜಯೇಂದ್ರ ಎಕ್ಸ್​ನಲ್ಲಿ ಸಿದ್ದರಾಮಯ್ಯನವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?:

‘ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದು ಮಾತ್ರವಲ್ಲ, ಇದಕ್ಕಾಗಿ 150 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ’’ ಎಂದು ಸಾಕ್ಷಾತ್ ಅನ್ವರ್ ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ‘’ನಾ ಖಾವೂಂಗಾ, ನಾ ಖಾನೆ ದೂಂಗಾ’’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ನರೇಂದ್ರ ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ? ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

ಇದನ್ನೂ ಓದಿ: ಯಾವ ಬಣಕ್ಕೂ ನಾನು ಸೇರಿದವನಲ್ಲ, ವಕ್ಫ್​ ವಿರುದ್ಧ ಹೋರಾಟವೊಂದೇ ಬಿಜೆಪಿಯ ಗುರಿ: ಬೊಮ್ಮಾಯಿ

ವಕ್ಪ್ ಆಸ್ತಿ ವಿಚಾರದಲ್ಲಿ ವಿಜಯೇಂದ್ರ ವಹಿಸುತ್ತಿರುವ ಆಸಕ್ತಿಯನ್ನ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಪ್ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಷಾಮೀಲಾಗಿರುವಂತೆ ಕಾಣುತ್ತಿದೆ. ಅವರ ಜೊತೆ ಬಿಜೆಪಿಯ ಮಹಾಮಹಿಮರೆಲ್ಲರೂ ಶಾಮೀಲಾಗಿರುವ ಸಂಶಯ ಇದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟೀಸ್ ನೀಡಿರುವುದನ್ನು ಈಗಾಗಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಮಾಣಿಪ್ಪಾಡಿ ಅವರ ಬಾಯಿಮುಚ್ಚಿಸುವ ಷಡ್ಯಂತ್ರದಲ್ಲಿ ಯಾರೆಲ್ಲ ಷಾಮೀಲಾಗಿದ್ದಾರೆ? ವಕ್ಪ್ ಆಸ್ತಿ ಲೂಟಿಯಲ್ಲಿ ಬೇರೆ ಯಾರೆಲ್ಲ ಪಾಲುದಾರರಿದ್ದಾರೆ? ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದರು.

ಒಂದೆಡೆ ಇಂತಹ ಗಂಭೀರ ಆರೋಪ ಹೊತ್ತುಕೊಂಡಿರುವ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ, ಇನ್ನೊಂದೆಡೆ ಪಕ್ಷದ ಹೈಕಮಾಂಡ್ ಗೆ 2 ಸಾವಿರ ಕೋಟಿ ರೂಪಾಯಿ ಸಂದಾಯ ಮಾಡಿ ವಿಜಯೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ನೋಡಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಎಂದು ಆರೋಪಿಸಬೇಕಾಗುತ್ತದೆ. ಪ್ರಧಾನಿ ಮೋದಿಯವರೇ, ಕೋವಿಡ್ ಸಲಕರಣೆಗಳ ಖರೀದಿ ಭ್ರಷ್ಟಾಚಾರದಿಂದ ಹಿಡಿದು ವಕ್ಪ್ ಆಸ್ತಿ ಕಬಳಿಕೆಯಲ್ಲಿನ ಲೂಟಿ ವರೆಗೆ ರಾಜ್ಯ ಬಿಜೆಪಿಯ ಕಪಾಟಿನಿಂದ ಒಂದೊಂದೇ ಅಸ್ತಿ ಪಂಜರಗಳು ಉರುಳಿಬೀಳುತ್ತಲೇ ಇದೆ. ಈ ಹಗರಣಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ನಾಯಕರು ನಮ್ಮ ಪಕ್ಷ ಮತ್ತು ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮಾಡಿದ್ದ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
ಭಾರತವನ್ನು ವಿಶ್ವವು ಪ್ರಜಾಪ್ರಭುತ್ವದ ತಾಯಿಯೆಂದು ಆದರಿಸುತ್ತದೆ: ಪ್ರಧಾನಿ
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ