ನಕಲಿ ಜಾತಿ ಪ್ರಮಾಣ ಪತ್ರ ಆರೋಪ ತಳ್ಳಿ ಹಾಕಿದ ರೇಣುಕಾಚಾರ್ಯ
ರಾಜಕಾರಣಕ್ಕಾಗಿ ನನ್ನ ವಿರುದ್ಧ ಏನು ಬೇಕಾದರೂ ಆರೋಪಗಳನ್ನು ಮಾಡಲಿ, ನನ್ನ ಮಗಳ ಮೇಲೆ ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು
ಬೆಂಗಳೂರು: ನಾನು ಯಾವುದೇ ರೀತಿಯ ಜಾತಿ ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನನ್ನ ಪುತ್ರಿ ಹೈಸ್ಕೂಲ್ಗೆ ಹೋಗುವಾಗ ಜಾತಿ ಪ್ರಮಾಣ ಪತ್ರ ಕೊಟ್ಟು ₹ 40 ಲಕ್ಷ ಪಡೆದಿದ್ದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ಆರೋಪದ ಬಗ್ಗೆ ಮುಖ್ಯಮಂತ್ರಿ, ಕಾನೂನು ಮತ್ತು ಗೃಹ ಸಚಿವರು ಪರಿಶೀಲನೆ ಮಾಡಲಿ. ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು ನಾನು ಯಾವುದೇ ರೀತಿಯ ಸರ್ಕಾರದ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು. ರಾಜಕಾರಣಕ್ಕಾಗಿ ನನ್ನ ವಿರುದ್ಧ ಏನು ಬೇಕಾದರೂ ಆರೋಪಗಳನ್ನು ಮಾಡಲಿ, ನನ್ನ ಮಗಳ ಮೇಲೆ ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ. ಇಂಥವರಿಗೆ ಸರಿಯಾದ ಉತ್ತರ ಕೊಡುತ್ತೇನೆ. ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಬುಟ್ಟಿಯಲ್ಲಿ ಹಾವು ಇದೆ ಅಂತ ಬುರುಡೆ ಬಿಡಬೇಡಿ ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಮನೆ ಮುಂದೆ ನಸುಕಿನ 3 ಗಂಟೆಯಿಂದ ಕಾಯುತ್ತಿರುವ ಅಧಿಕಾರಿಗಳು
ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಅವರ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರವಾರಕ್ಕೆ ಬಂದಿದ್ದಾರೆ. ನಿರ್ದೇಶನಾಲಯದ ಕಲಬುರಗಿ ವಿಭಾಗದ ಎಸ್ಪಿ ರಶ್ಮಿ ಅವರ ನೇತೃತ್ವದಲ್ಲಿ ಬಂದಿರುವ ಅಧಿಕಾರಿಗಳು ನಸುಕಿನ ಮೂರು ಗಂಟೆಯಿಂದ ತಹಶೀಲ್ದಾರ್ ಮನೆ ಎದುರು ಕಾದು ಕುಳಿತಿದ್ದಾರೆ. ಆದರೆ ಶ್ರೀಧರ್ ಅವರು ಮಾತ್ರ ಮನೆಯಿಂದ ಹೊರಗೂ ಬರುತ್ತಿಲ್ಲ, ಬಾಗಿಲನ್ನೂ ತೆಗೆಯುತ್ತಿಲ್ಲ. 2014ರ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿರುವ ಶ್ರೀಧರ ಪರಿಶಿಷ್ಟ ಪಂಗಡಕ್ಕೆ ಸೇರಿದವರು ತಾವೆಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಯಲಬುರ್ಗಾದಲ್ಲಿ ಫೆಬ್ರುವರಿ 12ರಂದು ಪ್ರಕರಣ ದಾಖಲಾಗಿತ್ತು.
ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ
ಬೆಂಗಳೂರು: ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣ ಪತ್ರದ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ ನಡೆಯಿತು. ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದವು. ರೇಣುಕಾಚಾರ್ಯ ಪುತ್ರಿ SC ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ತಪ್ಪು. ಅದರ ಬಗ್ಗೆ ಮತ್ತೆ ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ. ರೇಣುಕಾಚಾರ್ಯ, ನಾನು ಸೌಲಭ್ಯ ಪಡೆದಿಲ್ಲ ಎಂದು ಹೇಳುವ ಅಗತ್ಯ ಇರಲ್ಲ. ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ಅದು ಅಪರಾಧ ಎಂದು ಸಿದ್ದರಾಮಯ್ಯ ಹೇಳಿದರು.
ಪುತ್ರಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾತನಾಡಿದ್ದ ರೇಣುಕಾಚಾರ್ಯ, ನಾನು ಜಾತ್ಯತೀತ ವ್ಯಕ್ತಿ, ಯಾವುದೇ ಸವಲತ್ತು ಪಡೆದಿಲ್ಲ. ನನ್ನ ಸಹೋದರ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದಾನೆ. ನನ್ನ ಮಗಳಿಗೂ ಜಾತಿ ಪ್ರಮಾಣ ಪತ್ರ ಸೋದರ ಕೊಡಿಸಿದ್ದ. ಜಾತಿ ಪ್ರಮಾಣ ಪತ್ರವನ್ನು ನಾನೇ ವಾಪಸ್ ಮಾಡಿಸಿರುವೆ. ನಾನು ಯಾವುದೇ ಸವಲತ್ತು ಪಡೆದಿದ್ದರೆ ಗಲ್ಲಿಗೆ ಬೇಕಿದ್ರೆ ಏರಿಸಿ ಎಂದು ವಿಧಾನಸಭೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ರೇಣುಕಾಚಾರ್ಯ ಪುತ್ರಿ SC ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಕಾನೂನು ಪ್ರಕಾರ ಏನು ನಡೆಯಬೇಕೋ ಅದು ಆಗಲಿ. ಅದಕ್ಕೆ ಸರ್ಕಾರ ಯಾವುದೇ ರೀತಿಯ ಅಡ್ಡಿಪಡಿಸುವುದಿಲ್ಲ. ಅವರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗಾಗಿ ಈ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡ್ತೇನೆ; ಶಾಸಕ M.P.ರೇಣುಕಾಚಾರ್ಯ
ಇದನ್ನೂ ಓದಿ: ಆರ್ ಅಶೋಕ್ ಮತ್ತು ಅಶ್ವತ್ಥ ನಾರಾಯಣ ನಡುವೆ ಜಗಳ ನಡೆದಿಲ್ಲ ಎಂದರು ಶಾಸಕ ರೇಣುಕಾಚಾರ್ಯ