ಅಡ್ಡಮತದಾನ: ಬಿಜೆಪಿಯ ಧರ್ಮಸ್ಥಳ ಆಣೆ ಪ್ರಮಾಣವನ್ನು ಖಂಡತುಂಡವಾಗಿ ಖಂಡಿಸಿದ ಸ್ವಪಕ್ಷದ ಶಾಸಕ

ಕರ್ನಾಟಕ ವಿಧಾನ ಪರಿಷತ್​ನ ಅಡ್ಡ ಮತದಾನ, ಬಿಜೆಪಿ-ಜೆಡಿಎಸ್ ಪಾಳಯದಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಫಲಿತಾಂಶ ಹೊರಬಿದ್ದು, ಮೂರು ದಿನ ಕಳೆದರೂ ಯಾರು ಪಕ್ಷ ಹಾಕಿದ ಗೆರೆ ದಾಟಿದ್ದು ಅನ್ನೋ ಚರ್ಚೆ ನಡೀತಿದೆ. ಈ ಕ್ರಾಸ್​ ವೋಟಿಂಗ್​ನ ಗುಟ್ಟು, ಅಧಿಕೃತವಾಗಿ ಹೊರಬೀಳೋದು ಅಸಾಧ್ಯ. ಹೀಗಾಗಿ ಕೇಸರಿ ಪಡೆಯ ನಾಯಕರು, ಧರ್ಮಸ್ಥಳದ ಮಂಜುನಾಥಸ್ವಾಮಿ ಮೊರೆ ಹೋಗಲು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಡ್ಡಮತದಾನ: ಬಿಜೆಪಿಯ ಧರ್ಮಸ್ಥಳ ಆಣೆ ಪ್ರಮಾಣವನ್ನು ಖಂಡತುಂಡವಾಗಿ ಖಂಡಿಸಿದ ಸ್ವಪಕ್ಷದ ಶಾಸಕ
Suresh Kumar And Vijayendra

Updated on: Jun 21, 2026 | 6:05 PM

ಬೆಂಗಳೂರು, (ಜೂನ್ 21): ಮಿತ್ರ ಪಕ್ಷಗಳಾದ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಶಾಸಕರು ವಿಧಾನಪರಿಷತ್ ಚುನಾವಣೆಯಲ್ಲಿ (MLC Elections) ಅಡ್ಡಮತದಾನ (Cross Voting)  ಮಾಡಿದ್ದಾರೆ. ಎರಡೂ ಪಕ್ಷಗಳಿಂದ ಬರೋಬ್ಬರಿ 11 ಮತಗಳು ಕಾಂಗ್ರೆಸ್​​​ಗೆ ಹೋಗಿದ್ದು, ಇದು ಆಯಾ ಪಕ್ಷಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಈ ಅಡ್ಡಮತದಾನವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಅಡ್ಡಮತದಾನ ಮಾಡುವವರ ಪತ್ತೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಅಡ್ಡಮತದಾನ ಮಾಡಿದವರು ಯಾರು ಎನ್ನುವುದು ಸುಳಿವು ಸಿಕ್ಕಿಲ್ಲ. ಹೀಗಾಗಿ ಆಣೆ ಪ್ರಮಾಣದ ಮೊರೆ ಹೋಗಿದೆ. ಹೌದು…ಮುಂದಿನ ವಾರ ಧರ್ಮಸ್ಥಳದಲ್ಲಿ (Dharmasthala) ಶಾಸಕಾಂಗ ಪಕ್ಷದ ಸಭೆಗೆ ನಿರ್ಧರಿಸಿದ್ದು, ಶ್ರೀಕ್ಷೇತ್ರದಲ್ಲಿಯೇ ನಾನು ಅಡ್ಡ ಮತದಾನ ಮಾಡಿಲ್ಲ, ಮಂಜುನಾಥನಾಣೆ ಅನ್ನೋ ಪ್ರಮಾಣ ಎಂದು ಆಣೆ ಮಾಡಿಸಲು ತೀರ್ಮಾನಿಸಲಾಗಿದೆ. ಆದ್ರೆ, ಇದಕ್ಕೆ ಸ್ವಪಪಕ್ಷದ ಶಾಸಕ ಸುರೇಶ್ ಕುಮಾರ್ (Suresh Kumar) ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ನಿರ್ಧಾರ ಕೈಬಿಡಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.

ಮುಖ್ಯಾಂಶಗಳು

  • ವಿಧಾನಪರಿಷತ್​​ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಮತ ಹಾಕಿದ ಬಿಜೆಪಿ ಶಾಸಕರು
  • ಕರ್ನಾಟಕ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ಶಾಸಕರ ಅಡ್ಡಮತದಾನ
  • ಅಡ್ಡಮತದಾನ ಮಾಡಿದವರ ಪತ್ತೆಗೆ ಇನ್ನಿಲ್ಲದ ಕಸರತ್ತು
  • ಸುಳಿವು ಸಿಗದಿದ್ದಕ್ಕೆ ಧರ್ಮಸ್ಥಳ ಮಂಜುನಾಥನ ಮೊರೆ ಹೋದ ಬಿಜೆಪಿ ನಾಯಕರು
  • ರಾಜ್ಯಾಧ್ಯಕ್ಷರ ನಡೆಗೆ ಸ್ವಪಕ್ಷದ ಶಾಸಕ ಸುರೇಶ್ ಕುಮಾರ್ ಆಕ್ಷೇಪ
  • ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯೋದು ಬೇಡ ಎಂದ ಸುರೇಶ್‌ ಕುಮಾರ್‌

ಶಾಸಕರಿಂದ ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿಸಲು ಮುಂದಾದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನಡೆಗೆ ರಾಜಾಜಿನಗರ ಕ್ಷೇತ್ರದ ಎಂಎಲ್​​ಎ ಸುರೇಶ್ ಕುಮಾರ್ ದಿಗ್ಭ್ರಮೆಗೊಂಡಿದ್ದು, ಇದ್ಯಾಕೋ ಸರಿಯಾದ ತೀರ್ಮಾನ ಎಂದೆನಿಸುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​​: ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿ

ಖಂಡತುಂಡವಾಗಿ ಹೇಳಿದ ಸುರೇಶ್ ಕುಮಾರ್

ಈ ಬಗ್ಗೆ ಸುರೇಶ್ ಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನಿಜಕ್ಕೂ ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ದಿಗ್ಭ್ರಮೆ ಉಂಟು ಮಾಡಿದೆ. ಇದ್ಯಾಕೋ ಸರಿಯಾದ ತೀರ್ಮಾನ ಎಂದೆನಿಸುತ್ತಿಲ್ಲ.ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನಸಭೆಯಲ್ಲಿ ಹೇಳಿದಂತೆ ನನ್ನ ಜೀವನದಲ್ಲಿ ನನ್ನ ತಾಯಿಯ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ. ರಾಜಕಾರಣದಲ್ಲಿ ನಡೆದುಬಿಟ್ಟಿರುವ ಕೀಳು ಮಟ್ಟದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.

ಈ ಅಪಚಾರ ಮಾಡಿರುವವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ. ಈಗಾಗಲೇ ಹಲವರು ಧರ್ಮಸ್ಥಳದ ಹಿರಿಮೆಯನ್ನು ಹಾಳು ಮಾಡುವ ಕೆಲಸವನ್ನು ಮಾಡುವುದರಲ್ಲಿ ವಿಕೃತಾನಂದ ಪಡೆದಿದ್ದಾರೆ. ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡ ಮತದಾನ ಮಾಡಿದ ವೀರರು ಆಣೆ – ಪ್ರಮಾಣ ಮಾಡಿ ತಾವು ಉಳಿದುಕೊಳ್ಳಲು ತಮ್ಮ ನೈತಿಕ ದಿವಾಳಿತನ ತೋರಿಸಿದರೆ, ಅದರಿಂದ ಅಪಚಾರದ ಪ್ರಮಾಣ ಹೆಚ್ಚಾಗುತ್ತದಷ್ಟೇ. ದಯವಿಟ್ಟು ಸ್ವಾಮಿ ಮಂಜುನಾಥನ ಶ್ರೇಷ್ಠತೆಯನ್ನು ಈ ರೀತಿ ಒರೆ ಹಚ್ಚುವುದು ಯಾವುದೇ ಕಾರಣಕ್ಕೂ ಬೇಡ ಎಂದು ಖಂಡತುಂಡವಾಗಿ ಹೇಳಿದ್ದಾರೆ.

ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್​ ಮಾತನಾಡಿದ್ದು, ರಾಜ್ಯಾಧ್ಯಕ್ಷರ ಸಲಹೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಕೆಲ ಬಿಜೆಪಿ ಶಾಸಕರು ಪಕ್ಷದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇನ್ನು ಬಿಜೆಪಿಯ ಪರಿಸ್ಥಿತಿ ಅವರ ಬಿಟ್ಟು, ಇವರು ಯಾರು ಎನ್ನುವಂತಾಗಿದೆ. ಅಡ್ಡಮತದಾನ ಮಾಡಿದ್ಯಾರು ಎಂದು ಇರೋ ಬರೋ ಶಾಸಕರನ್ನ ಅನುಮಾನದ ದೃಷ್ಟಿಯಲ್ಲಿಯೇ ನೋಡುವಂತಾಗಿದೆ. ಹೀಗಾಗಿಯೇ ಅಡ್ಡಮತದಾನ ಮಾಡಿದ್ದಾರೆ ಎಂದು ಕೆಲ ಶಾಸಕರ ಹೆಸರುಗಳು ಕೇಳಿಬರ್ತಿವೆ. ಆದ್ರೆ ಈ ಲೀಡರ್ಸ್ ಮಾತ್ರ, ನಾನು ಆಣೆ-ಪ್ರಮಾಣಕ್ಕೆ ಸಿದ್ಧ ಎಂದಿದ್ದಾರೆ.

ಒಟ್ಟಿನಲ್ಲಿ ಅಡ್ಡಮತದಾನ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, ಅಡ್ಡಮತದಾನ ಮಾಡಿದವರ ಪತ್ತೆಗೆ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಅಂತಿಮವಾಗಿ ಏನಾಗುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Sun, 21 June 26

Follow Us