ತಿರುಪತಿ ಪಾಸ್ ಕೊಡಿಸಲು ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೇ ಬ್ಲ್ಯಾಕ್​ಮೇಲ್! ವ್ಯಕ್ತಿಯ ಬಂಧನ

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಹೆಸರು ದುರ್ಬಳಕೆ ಮಾಡಿ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚಿಸಿದ್ದ ಯಲಹಂಕ ಮೂಲದ ಮಾರುತಿ ಎಂಬಾತನನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪವೂ ಈತನ ಮೇಲಿದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ತಿರುಪತಿ ಪಾಸ್ ಕೊಡಿಸಲು ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೇ ಬ್ಲ್ಯಾಕ್​ಮೇಲ್! ವ್ಯಕ್ತಿಯ ಬಂಧನ
ತಿರುಪದಿ ದೇಗುಲ & ಬಂಧಿತ ಆರೋಪಿ ಮಾರುತಿ
ಮಹೇಶ್ ಇ, ಭೂಮನಹಳ್ಳಿ Edited By:

Updated on: Dec 17, 2024 | 9:45 AM

ತುಮಕೂರು, ಡಿಸೆಂಬರ್ 17: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚನೆ ಎಸಗಿದ್ದಲ್ಲದೆ, ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳನ್ನೇ ಬ್ಲ್ಯಾಕ್​ಮೇಲ್ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ತುಮಕೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ಯಲಹಂಕ ಮೂಲದ ಮಾರುತಿ (30) ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ.

ಬಂಧಿತ ಮಾರುತಿ ವೃತ್ತಿಯಲ್ಲಿ ಸಿವಿಎಲ್ ಕಂಟ್ರಾಕ್ಟರ್ ಆಗಿದ್ದಾನೆ ಎನ್ನಲಾಗಿದೆ. ಈತ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ. ತನ್ನ ಲ್ಯಾಪ್​ಟಾಪ್​​ನಲ್ಲಿ ಗೃಹ ಸಚಿವ ಪರಮೇಶ್ವರ್ ಹೆಸರಿನ ನಕಲಿ ಲೇಟರ್ ಹೆಡ್ ಕೂಡ ಇಟ್ಟುಕೊಂಡಿದ್ದ.

ತಿರುಪತಿ ಭಕ್ತರಿಗೆ ಪಂಗನಾಮ

ಪರಮೇಶ್ವರ್ ಹೆಸರಿನ ನಕಲಿ ಲೇಟರ್ ಹೆಡ್ ಇಟ್ಟುಕೊಂಡಿದ್ದ ಆರೋಪಿ ತಿರುಪತಿಗೆ ಹೋಗುವ ಭಕ್ತರನ್ನ ಸಂಪರ್ಕಿಸಿ, ವಿಐಪಿ ದರ್ಶನದ ಪಾಸ್ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಜತೆಗೆ, ಅವರಿಂದ 6 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ವರಗೆ ಹಣ ಪಡೆದು ನಕಲಿ ಲೇಟರ್ ಹೆಡ್ ಕೊಟ್ಟು ಕಳುಹಿಸುತ್ತಿದ್ದ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಚೆರಿಗೂ ಕರೆ ಮಾಡಿದ್ದ!

ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಕಚೇರಿಗೆ ಕರೆ ಮಾಡಿದ್ದ ಮಾರುತಿ, ‘ನಾನು ಕರ್ನಾಟಕ ಗೃಹ ಸಚಿವ ಪರಮೇಶ್ವರ್’ ಎಂದು ಮಾತನಾಡಿದ್ದ. ತನಗೆ ಬೇಕಾದ ಕುಟುಂಬವೊಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದೆ. ಅವರಿಗೆ ದರ್ಶನಕ್ಕೆ ಬೇಕಾದ ಅನುವು ಮಾಡಿಕೊಡಿ. ಇಲ್ಲದಿದ್ದರೆ ನಿಮ್ಮನ್ನು ಅಮಾನತು ಮಾಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಅಲ್ಲದೇ, ನಕಲಿ ಲೆಟರ್ ಹೆಡ್ ಒಂದನ್ನು ಆಂಧ್ರ ಸಿಎಂ ಕಚೇರಿಯ ನಂಬರ್​ಗೆ ವಾಟ್ಸ್​​ಆ್ಯಪ್ ಮೂಲಕ ಕಳುಹಿಸಿದ್ದ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕರ್ನಾಟಕ ಗೃಹ ಸಚಿವರದ್ದು ಎನ್ನಲಾದ ಲೆಟರ್ ಹೆಡ್ ಬಗ್ಗೆ ಆಂಧ್ರ ಸಿಎಂ ಕಚೇರಿ ಸಿಬ್ಬಂದಿ ಪುನರ್ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಗೃಹ ಸಚಿವ ಪರಮೇಶ್ವರ್ ಕಚೇರಿಗೆ ಕರೆ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ, ಮಾರುತಿ ನೀಡಿರುವುದು ನಕಲಿ ಲೆಟರ್ ಎಂಬುದು ಗೊತ್ತಾಗಿದೆ. ಕೂಡಲೇ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳು ಗೃಹ ಇಲಾಖೆ ಗಮನಕ್ಕೆ ತಂದಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಪರಮೇಶ್ವರ್, ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣಗೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ತುಮಕೂರು ನಗರ ಠಾಣೆಗೆ ನಾಗಣ್ಣ ದೂರು ನೀಡಿದ್ದಾರೆ. ನಾಗಣ್ಣ ದೂರು ಆಧರಿಸಿ ಪ್ರಕರಣ ದಾಖಲಿಸಿದ ಪೊಲೀಸರು, ಬೆಂಗಳೂರಿನ ಯಲಹಂಕ ನ್ಯೂಟೌನ್ ಬಳಿಯಿದ್ದ ಆರೋಪಿ ಮಾರುತಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಇಳಯರಾಜನಿಗೆ ದೇಗುಲ ಪ್ರವೇಶ ನಿರಾಕರಣೆ ನಿಜವೇ? ಸ್ಪಷ್ಟನೆ ನೀಡಿದ ಸಂಗೀತ ಮಾಂತ್ರಿಕ

ಆರೋಪಿಯು ಹಲವರಿಗೆ ಇದೇ ರೀತಿ ವಂಚಿಸಿರುವ ಶಂಕೆ ವ್ಯಕ್ತವಾಗಿದ್ದು, ತುಮಕೂರು ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 am, Tue, 17 December 24

Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Follow Us