ಅಂಧ ಮಕ್ಕಳ ಸರ್ಕಾರಿ ಶಾಲೆಯಿಂದ ವಿದ್ಯಾರ್ಥಿಗಳು ನಾಪತ್ತೆ.. ಇನ್ನೂ ಸಿಕ್ಕಿಲ್ಲ 23 ಮಕ್ಕಳ ಸುಳಿವು
ಅದು ಅಂಧ ಮಕ್ಕಳ ಸರ್ಕಾರಿ ವಸತಿ ಶಾಲೆ. ಅಲ್ಲಿ ಸಾಕಷ್ಟು ವಿಶೇಷ ಚೇತನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ ಆ ಶಾಲೆಯಲ್ಲಿ ದೊಡ್ಡ ಸಮಸ್ಯೆಯೊಂದು ಕಾಡುತ್ತಿದೆ. ಅಲ್ಲಿ ಸ್ಟಡಿ ಮಾಡ್ತಿರೋ ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ. ಹಾಗಿದ್ರೆ ಆ ವಿದ್ಯಾರ್ಥಿ ಹೋಗೋದ್ದೆಲ್ಲಿಗೆ? ನಾಪತ್ತೆಗೆ ಕಾರಣವೇನು ಅನ್ನೋ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.
ಮೈಸೂರು: ಜಿಲ್ಲೆಯ ತಿಲಕ್‌ನಗರದಲ್ಲಿರೋ ಅಂಧ ಮಕ್ಕಳ ಸರ್ಕಾರಿ ಶಾಲೆ. ಈ ಶಾಲೆ ಪ್ರಪಂಚವನ್ನ ನೋಡಲಾಗದ, ಮಾತುಗಳನ್ನ ಆಡಲಾಗದ, ಕಿವಿಯಿಂದ ಏನನ್ನೂ ಕೇಳಿಸಿಕೊಳ್ಳಲಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ರೂಪಿಸಿದ ಶಾಲೆ. ಸಾಕಷ್ಟು ವಿಶೇಷ ಚೇತನ ಮಕ್ಕಳು ಇಲ್ಲಿಂದಲೇ ಬದುಕುಕಟ್ಟಿಕೊಂಡಿದ್ದಾರೆ. ಆದ್ರೆ ಮತ್ತಷ್ಟು ಮಕ್ಕಳು ಹಾದಿ ತಪ್ಪಿ ಅತಂತ್ರರಾಗುತ್ತಿದ್ದಾರೆ. ಈ ಶಾಲೆಯಿಂದ ಮಕ್ಕಳು ತಪ್ಪಿಸಿಕೊಂಡು ಹೋಗುತ್ತಿದ್ದು, ಕಾಣೆಯಾದ ಮಕ್ಕಳ ಪತ್ತೆಯೇ ಆಗುತ್ತಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಶಾಲೆಯಿಂದ ಬರೋಬ್ಬರಿ 35 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 23 ಮಕ್ಕಳ ಸುಳಿವು ಇನ್ನೂ ಸಿಕ್ಕಿಲ್ಲ.
ಕಿವಿ ಕೇಳದ, ಕಣ್ಣು ಕಾಣದ, ಮಾತಾಡಲು ಬಾರದವರಿಗೆ ಶಿಕ್ಷಣ ನೀಡಲೆಂದೇ ಈ ಶಾಲೆ ಆರಂಭಿಸಲಾಗಿದೆ. ಇಲ್ಲಿ ಬರುವವರು ಬಹುತೇಕ ಬಡತನದಿಂದ ಬಂದವರೇ. ಕೆಲವರಿಗೆ ತಂದೆ, ತಾಯಿಯ ಇರುವುದಿಲ್ಲ. ಹಾಗೇ ಭಿಕ್ಷಾಟನೆ ಮಾಡುತ್ತಿದ್ದವರೂ ಇಲ್ಲಿ ಆಸರೆ ಪಡೆಯುತ್ತಾರೆ. ಹೀಗೆ ಬರುವ ಮಕ್ಕಳಲ್ಲಿ, ಕೆಲವರ ಮನಸ್ಸು ಓಡಿಹೋಗಲು ಸದಾ ಹವಣಿಸುತ್ತದೆ. ಅಂತವರು ಶಾಲೆಯಿಂದ ತಪ್ಪಿಸಿಕೊಂಡು ದೂರದ ಯಾವುದೋ ಊರನ್ನು ಸೇರಿ ಅಲ್ಲಿ ಮತ್ಯಾವುದೋ ಚಟುವಟಿಕೆಗಳಲ್ಲಿ ಸಿಲುಕಿ ಬಿಡುತ್ತಾರಂತೆ. ಅದರಲ್ಲೂ ಮಕ್ಕಳ ಕಲ್ಯಾಣ ಸಮಿತಿ ಕಡೆಯಿಂದ ಬರುವ ಮಕ್ಕಳಿಗೆ ಓದಲು ಇಷ್ಟವಿರುವುದಿಲ್ಲ ಮತ್ತು ಅವರಿಗೆ ಕೆಲವೊಂದು ಹವ್ಯಾಸಗಳು ಇರುತ್ತವೆ. ಅಂಥವರಿಗೆ ಇಲ್ಲಿ ಇರಲು ಇಷ್ಟ ಪಡುವುದಿಲ್ಲ. ಇಂತಹ ಮಕ್ಕಳನ್ನು ನಿಭಾಯಿಸಲು ಹೆಚ್ಚಿನ ಭದ್ರತೆ ಬೇಕಾಗಿದೆ.
ಒಟ್ನಲ್ಲಿ ನಾನಾ ಕಡೆಯಿಂದ ಬರುವ ವಿಶೇಷ ಚೇತನ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದರು ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಹೇಳೋರು ಕೇಳೋರು ಇಲ್ಲದ ಮಕ್ಕಳು ಹೋದ್ರೆ ಹೋಗಲಿ ಅಂತ ಸುಮ್ಮನಾಗುತ್ತಿದ್ದಾರೆ. ಆದ್ರೆ ಹೀಗೆ ನಿಗೂಢವಾಗಿ ನಾಪತ್ತೆಯಾಗೋ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ? ಜೀವನ ಹೇಗೆ ಮಾಡುತ್ತಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಕೊವಿಡ್ ಲಕ್ಷಣಗಳಿಂದ ಹೊರಬಂದರೂ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ? ಈ ವಿಷಯಗಳು ಗಮನದಲ್ಲಿರಲಿ
Published On - 7:20 am, Fri, 18 June 21