
ಬೆಂಗಳೂರು, ಜುಲೈ 02: ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಕೇಂದ್ರ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಬಂದಿದೆ. ಹೀಗಾಗಿ ಇಸ್ರೋ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದುಷ್ಕರ್ಮಿಗಳು ಇಂದು ಬೆಳಗಿನ ಜಾವ 4 ಗಂಟೆಗೆ ಈ ಬೆದರಿಕೆ ಇ-ಮೇಲ್ ಕಳುಹಿಸಿದ್ದು, ಮಧ್ಯಾಹ್ನ ಇಸ್ರೋ ಅಧಿಕಾರಿಗಳು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸದ್ಯ ಸಿಬ್ಬಂದಿಯನ್ನ ಹೊರಗೆ ಕಳಿಸಿ ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ನಡೆದಿದೆ.
ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ನಿನ್ನೆ ರಾತ್ರಿ 1:48ಕ್ಕೆ ಅಟಾಮಿಕ್ ಮೇಲ್ ಮೂಲಕ “Pavala Malli” ಎಂಬ ಹೆಸರಿನಲ್ಲಿ ಆಘಾತಕಾರಿ ಮೇಲ್ ಬಂದಿದೆ. “The Girl Who Cried Wolf” ಎಂದು ಉಲ್ಲೇಖಿಸಿರುವ ಕಿಡಿಗೇಡಿಗಳು, ಇಂದು ಮಧ್ಯಾಹ್ನ 1 ರಿಂದ 3 ಗಂಟೆಯೊಳಗೆ ಕೋರ್ಟ್‌ನಲ್ಲಿ 13 ವಿಷಾನಿಲ ಹಾಗೂ RDX ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ
ಮಧ್ಯಾಹ್ನ 12 ಗಂಟೆಯೊಳಗೆ ನ್ಯಾಯಾಧೀಶರು ಹಾಗೂ ಜನರನ್ನು ಸ್ಥಳಾಂತರಿಸಲು ಸೂಚಿಸಲಾಗಿತ್ತು. ಮೇಲ್‌ನಲ್ಲಿ ಡ್ರಗ್ ಮಾಫಿಯಾ ಆರೋಪಿ ಜಾಫರ್ ಸಾದಿಕ್, ಶಂಕರ್ ಜಿವಾಲ್ ಹೆಸರು ಹಾಗೂ ತಮಿಳು ಚಿತ್ರ ‘ಕರಾಟೆ ಬಾಬು’ ಹಣಕಾಸಿನ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಧಾವಿಸಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಬಾಗಲಕೋಟೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ತಪಾಸಣೆ ಮಾಡಿದರು.
ಇನ್ನು ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಒಂದೇ ವಾರದಲ್ಲಿ ಬರೋಬ್ಬರಿ 5ನೇ ಬಾರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಈ ಹಿಂದೆ ಅಜ್ಮಲ್ ಕಸಬ್, ದುರ್ಗಾ ವಿದ್ಯಾ ಹೆಸರಿನಲ್ಲಿ ಬಂದಿದ್ದ ಮೇಲ್, ಇಂದು ‘ಕನಿಮೊಳಿ’ ಹೆಸರಿನಲ್ಲಿ ಬಂದಿದೆ. ತಮಿಳುನಾಡಿನ ರಾಜಕೀಯ ವಿಚಾರ ಹಾಗೂ “ಡಿಎಂಕೆ ನಿಷ್ಠಾವಂತ ಕಾರ್ಯಕರ್ತನಾಗಿದ್ದಕ್ಕೆ ಕಿರುಕುಳ ನೀಡಲಾಗುತ್ತಿದೆ” ಎಂದು ಉಲ್ಲೇಖಿಸಲಾಗಿದೆ. ಸ್ಥಳಕ್ಕೆ ಚಾಮರಾಜನಗರ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಯಾದಗಿರಿ ಜಿಲ್ಲಾ ನ್ಯಾಯಾಲಯದ ಜೊತೆಗೆ ಶಹಾಪುರ ತಾಲೂಕು ನ್ಯಾಯಾಲಯಕ್ಕೂ ಅನಾಮಧೇಯ ವಿಳಾಸದಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಮಧ್ಯಾಹ್ನ 1 ರಿಂದ 3 ಗಂಟೆಯ ಒಳಗೆ ನ್ಯಾಯಾಲಯದ ಕಟ್ಟಡ ಉಡಾಯಿಸುವುದಾಗಿ ಸಂದೇಶ ಬಂದ ಹಿನ್ನೆಲೆ ಕೋರ್ಟ್ ಕಲಾಪವನ್ನು ತಕ್ಷಣ ಸ್ಥಗಿತಗೊಳಿಸಲಾಯಿತು. ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರನ್ನು ಕಚೇರಿಯಿಂದ ಹೊರಗೆ ಕಳುಹಿಸಿ, ಬಾಂಬ್ ಮತ್ತು ಡಾಗ್ ಸ್ಕ್ವಾಡ್ ಪ್ರತಿ ಕೋಣೆಯನ್ನು ತಪಾಸಣೆ ಮಾಡಿದರು. ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:55 pm, Thu, 2 July 26