Breast Cancer: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್ ಪ್ರಕರಣ, ಸಾವಿನ ಸಂಖ್ಯೆ
Breast Cancer Cases in Karnataka: ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಮತ್ತು ಅದರಿಂದಾಗಿ ಸಂಭವಿಸುವ ಸಾವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ವೃದ್ಧೆಯರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತಿದ್ದ ಪ್ರಕರಣಗಳು ಈಗ ಮಧ್ಯ ವಯಸ್ಸಿನ ಮಹಿಳೆಯರಲ್ಲಿಯೂ ಕಂಎಉಬರುತ್ತಿರುವುದು ಕಳವಳ ಹೆಚ್ಚಿಸಿದೆ.

ಬೆಂಗಳೂರು, ಫೆಬ್ರವರಿ 19: ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ (Breast Cancer) ಪ್ರಕರಣಗಳ ಸಂಖ್ಯೆ ಮತ್ತು ಮರಣ ಪ್ರಮಾಣ ಎರಡರಲ್ಲೂ ಏರಿಕೆ ದಾಖಲಾಗಿರುವುದು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ (NCDIR), ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ (NCRP) ಅಂಕಿಅಂಶಗಳಿಂದ ತಿಳಿದುಬಂದಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆಯ ಅಧಿವೇಶನದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2023 ರಲ್ಲಿ ಅಂದಾಜು 14,484 ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಅದೇ ರೀತಿ, 5,388 ಸ್ತನ ಕ್ಯಾನ್ಸರ್ ಸಂಬಂಧಿತ ಸಾವುಗಳು ರಾಜ್ಯದಲ್ಲಿ ದಾಖಲಾಗಿವೆ. ಇವೆರಡೂ ಕಳೆದ ಐದು ವರ್ಷಗಳಲ್ಲಿ ಅತ್ಯಧಿಕವಾಗಿದೆ.
2019 ರಲ್ಲಿ, ರಾಜ್ಯದಲ್ಲಿ 13,085 ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದವು. ಇದು 2020 ರಲ್ಲಿ 13,427ಕ್ಕೆ ಏರಿಕೆಯಾಗಿದ್ದರೆ, 2021 ರಲ್ಲಿ 13,774 ಮತ್ತು 2022 ರಲ್ಲಿ 14,126 ಕ್ಕೆ ಏರಿಕೆಯಾಗಿವೆ.
ಮಧ್ಯವಯಸ್ಸಿನಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್
ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಪ್ರಕರಣಗಳು ವೃದ್ಧೆಯರಲ್ಲಿ ಸಾಮಾನ್ಯವಾಗಿತ್ತು. ಆದರೆ ಈಗಿನ ಅಂಕಿಅಂಶಗಳು ಯುವ ಜನರಲ್ಲಿ ಪ್ರಕರಣ ಹೆಚ್ಚಾಗಿರುವುದನ್ನು ತೋರಿಸುತ್ತದೆ. ಸರಾಸರಿ ವಯಸ್ಸು ಇನ್ನೂ 50-54 ವರ್ಷಗಳು ಎಂದು ಮೈಸೂರಿನ ಕೆಆರ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸತ್ಯ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಮುಕೇಶ್ ಶಾಂತಿಲಾಲ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ದೇಶದಾದ್ಯಂತ ಸ್ತನ ಕ್ಯಾನ್ಸರ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿವೆ. ‘ಗ್ಲೋಬೋಕನ್ ಡೇಟಾ 2020’ ರ ಪ್ರಕಾರ, ಭಾರತದಲ್ಲಿ ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಸ್ತನ ಕ್ಯಾನ್ಸರ್ ಪ್ರಮಾಣ ಶೇ 13.5 ಮತ್ತು ಸಾವು ಸಂಭಿಸುತ್ತಿರುವುದರ ಪೈಕಿ ಶೇ 10.6 ಆಗಿದೆ ಎಂದು ಅವರು ಹೇಳಿದ್ದಾರೆ.
ಸ್ತನ ಕ್ಯಾನ್ಸರ್ ಪರೀಕ್ಷೆ ಶಿಫಾರಸಿಗೆ ಮಾನದಂಡವೇನು?
ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್ ಶಿಫಾರಸುಗಳು ವಯಸ್ಸು, ಅಪಾಯಕಾರಿ ಅಂಶಗಳು ಮತ್ತು ವಿವಿಧ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳಂತಹ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು. 20 ಮತ್ತು 30 ರ ಮಹಿಳೆಯರಿಗೆ ಸ್ತನ ಪರೀಕ್ಷೆಗಳನ್ನು ಸಾಮಾನ್ಯವಾಗಿ ಪ್ರತಿ ಒಂದರಿಂದ ಮೂರು ವರ್ಷಗಳಿಗೊಮ್ಮೆ ಮತ್ತು 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ವಾರ್ಷಿಕವಾಗಿ ಶಿಫಾರಸು ಮಾಡಲಾಗುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಹೊತ್ತು ನಡೆಯಬೇಕು? ತಜ್ಞರ ಸಲಹೆ ಇಲ್ಲಿದೆ
ಸ್ತನ ಕ್ಯಾನ್ಸರ್ಗೆ ಕಾರಣವೇನು?
ಅಸಮರ್ಪಕ ಆಹಾರ ಪದ್ಧತಿ, ಆಧುನಿಕ ಜೀವನಶೈಲಿ ಮತ್ತು ಕೆಲವು ಸಂದರ್ಭಗಳಲ್ಲಿ ಆನುವಂಶಿಕ ಕಾರಣಗಳಿಂದ ಸ್ತನ ಕ್ಯಾನ್ಸರ್ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. 25 ರಿಂದ 30 ವರ್ಷದವರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಕಾಣಿಸುತ್ತಿವೆ. ಮದ್ಯಪಾನ, ವಿಳಂಬ ಮದುವೆ ಕೂಡ ಈ ಕ್ಯಾನ್ಸರ್ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




