ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್; ಬೆಳಗಾವಿ ನಾಯಕರಿಗೂ ಶುರುವಾಯ್ತು ಢವಢವ!
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಪರ್ಕಕ್ಕೂ ಯಡಿಯೂರಪ್ಪ ಬಂದಿದ್ದರು. ಮೊನ್ನೆ ಗೋಕಾಕ್ ಮತ್ತು ಅರಭಾವಿಯಲ್ಲಿ ಪ್ರಚಾರ ನಡೆಸಿದ್ದ ಸಿಎಂ, ಬಾಲಚಂದ್ರ ಜಾರಕಿಹೊಳಿ, ಸಂಸದ ಈರಣ್ಣ ಕಡಾಡಿ ಸೇರಿದಂತೆ ನೂರಕ್ಕೂ ಅಧಿಕ ಮುಖಂಡರ ಸಂಪರ್ಕಕ್ಕೆ ಬಂದಿದ್ದರು.
ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಈ ನಡುವೆ ಇತರ ನಾಯಕರಿಗೂ ಆತಂಕ ಎದುರಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆಯಷ್ಟೇ ಬೆಳಗಾವಿ ನಗರದಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಶ್ರೀಮಂತ್ ಪಾಟೀಲ್, ಮುರಗೇಶ್ ನಿರಾಣಿ, ಶಾಸಕ ಅಭಯ್ ಪಾಟೀಲ್, ಅನಿಲ ಬೆನಕೆ ಕೂಡ ಯಡಿಯೂರಪ್ಪ ಜತೆ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ, ನಿನ್ನೆ ಬೆಳಗ್ಗೆ ಎರಡು ಮಠಗಳಿಗೆ ಯಡಿಯೂರಪ್ಪ ಭೇಟಿ ನೀಡಿದ್ದರು.
ಬೆಳಗಾವಿಯಲ್ಲಿ ನಾಳೆ (ಏಪ್ರಿಲ್ 16) ಲೋಕಸಭಾ ಉಪಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದೆ. ಬೆಳಗಾವಿ ಅಭ್ಯರ್ಥಿ ಮಂಗಳಾ ಅಂಗಡಿ ಕೂಡ ಸಿಎಂ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಬೆಳಗಾವಿಯ ನಾಗನೂರ ರುದ್ರಾಕ್ಷಿಮಠ, ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಯಡಿಯೂರಪ್ಪ ಭೇಟಿ ನೀಡಿದ್ದರು. ಹುಕ್ಕೇರಿ ಹಿರೇಮಠದಲ್ಲಿ ಧನ್ವಂತರಿ ಹೋಮದಲ್ಲಿ ಸಿಎಂ ಭಾಗಿಯಾಗಿದ್ದರು. ಎರಡು ಮಠದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಸ್ವಾಮೀಜಿಗಳ ಪ್ರಾಥಮಿಕ ಸಂಪರ್ಕಕ್ಕೆ ಯಡಿಯೂರಪ್ಪ ಬಂದಿದ್ದರು.
ಅಷ್ಟೇ ಅಲ್ಲದೆ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಪರ್ಕಕ್ಕೂ ಯಡಿಯೂರಪ್ಪ ಬಂದಿದ್ದರು. ಮೊನ್ನೆ ಗೋಕಾಕ್ ಮತ್ತು ಅರಭಾವಿಯಲ್ಲಿ ಪ್ರಚಾರ ನಡೆಸಿದ್ದ ಸಿಎಂ, ಬಾಲಚಂದ್ರ ಜಾರಕಿಹೊಳಿ, ಸಂಸದ ಈರಣ್ಣ ಕಡಾಡಿ ಸೇರಿದಂತೆ ನೂರಕ್ಕೂ ಅಧಿಕ ಮುಖಂಡರ ಸಂಪರ್ಕಕ್ಕೆ ಬಂದಿದ್ದರು.
ಸೆಲ್ಫ್ ಕ್ವಾರಂಟೈನ್ಗೆ ಒಳಪಡಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ನಾಯರು, ಅಧಿಕಾರಿಗಳು? ತೀವ್ರ ಜ್ವರದ ನಡುವೆಯೂ ಪ್ರಚಾರ ಮಾಡಿದ್ದ ಸಿಎಂ ಯಡಿಯೂರಪ್ಪಗೆ ಈಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಭಾಗಿಯಾದ ಪ್ರಚಾರ ಸಭೆ ಮತ್ತು ರೋಡ್ ಶೋ ಗಳಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ. ತಾವೇ ಹೊರಡಿಸಿದ್ದ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದ ಸಿಎಂ ಯಡಿಯೂರಪ್ಪ ಹಾಗೂ ರಾಜಕೀಯ ನಾಯಕರು ಈಗ ಸಮಸ್ಯೆಗೆ ಸಿಲುಕಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ದೃಢವಾಗಿರುವುದು ಬೆಳಗಾವಿ ಲೋಕಸಭಾ ಬೈಎಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡುಬಂದಿದೆ. ಚುನಾವಣೆ ನಡೆಸಬೇಕಿದ್ದ ಅಧಿಕಾರಿಗಳು ಕ್ವಾರಂಟೈನ್ ಆಗಬೇಕಾಗುವ ಸಾಧ್ಯತೆ ಇದೆ. ಬೆಳಗಾವಿ ಪೊಲೀಸ್ ಆಯುಕ್ತ, ಐಜಿಪಿ, ಎಸ್‌ಪಿ, ಗುಪ್ತಚರ ಇಲಾಖೆ ಎಸ್‌ಪಿ, ಇಬ್ಬರು ಡಿಸಿಪಿಗಳು, ಎಸಿಪಿ, ಸಿಪಿಐ, ಬೆಂಗಾವಲು ವಾಹನ ಸಿಬ್ಬಂದಿ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದರು. ಕೆಲ ಅಧಿಕಾರಿಗಳು ಮುಖ್ಯಮಂತ್ರಿ ಜೊತೆ ಬೆಳಗಾವಿಯ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು. ಸಿಎಂ ಸಂಪರ್ಕದಲ್ಲಿದ್ದ ಅಧಿಕಾರಿಗಳು ಕ್ವಾರಂಟೈನ್ ಆಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಉಪಸಭಾಪತಿ ಆನಂದ ಮಾಮನಿಗೆ ಕೊರೊನಾ ದೃಢ ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಉಪಸಭಾಪತಿ ಆನಂದ್ ಮಾಮನಿಗೆ ಕೊರೊನಾ ಸೋಂಕು ದೃಢವಾಗಿದೆ. ಅವರು ವೈದ್ಯರ ಸಲಹೆ ಮೇರೆಗೆ ಸವದತ್ತಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಮಾಮನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಡ್ರೈವರ್, ಗನ್ ಮ್ಯಾನ್ ಹಾಗೂ ಕುಟುಂಬಸ್ಥರಿಗೆ ಕೊರೊನಾ ನೆಗೆಟಿವ್ ಬಂದಿದೆ.
(BS Yediyurappa tests positive for Covid 19 Corona Virus Belagavi BJP leaders in fear)
ಇದನ್ನೂ ಓದಿ: ಕೊರೊನಾದಿಂದ ಸಿಎಂ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಗೆ ದಾಖಲು; ಒಂದು ವಾರದಿಂದ ಅವರ ಆರೋಗ್ಯ ಹೇಗಿತ್ತು?
Published On - 3:09 pm, Fri, 16 April 21