ಬಳ್ಳಾರಿ, ಅಕ್ಟೋಬರ್ 04: ಕರ್ನಾಟಕದಲ್ಲಿ ಮುಡಾ ಹಗರಣ ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಇತ್ತ ಬಳ್ಳಾರಿಯಲ್ಲೂ ಬುಡಾ ಹಗರಣ ಸದ್ದು ಮಾಡಲು ಶುರು ಮಾಡಿದೆ. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಪ್ತ ಹಾಗೂ ಬುಡಾ ಅಧ್ಯಕ್ಷ ತನ್ನ ಅಧಿಕಾರ ದುರುಪಯೋಗ ಮಾಡಿ ಕೋಟಿ ಕೋಟಿ ರೂ. ಕೊಳ್ಳೆ ಹೊಡೆದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಸ್ವಪಕ್ಷೀಯ ಶಾಸಕರಿಂದ ಸರ್ಕಾರಕ್ಕೆ ದೂರು ನೀಡಲಾಗಿದೆ. ಆ ಕುರಿತ ಒಂದು ವರದಿ ಇಲ್ಲಿದೆ.
ಹೌದು. ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಳ್ಳಾರಿಯಲ್ಲಿ ಬುಡಾ ಹಗರಣ ಸದ್ದು ಮಾಡಲು ಶುರುವಾಗಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುವ ಪ್ರತಿ ಸಭೆಯಲ್ಲೂ ಬುಡಾ ಅಧ್ಯಕ್ಷ ಆಂಜನೇಯಲು ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಸಭೆಯ ನಡಾವಳಿಗಳನ್ನ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲೇಔಟ್ ನಿರ್ಮಾಣ, ಅನುಮತಿ ಮತ್ತು ಹಂಚಿಕೆ ಸಂಬಂಧಿಸಿದಂತೆ ಮಾಚ್ 7 ಮತ್ತು ಜುಲೈ 8 ರಂದು ನಡೆದ ಸಭೆಯ ನಡಾವಳಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಹೀಗಾಗಿ ಸ್ವಪಕ್ಷಿಯ ಬಳ್ಳಾರಿ ಶಾಸಕ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆಎನ್ ಗಣೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬುಡಾದಲ್ಲಿ ಲೇಔಟ್ ನಿರ್ಮಾಣ ಮತ್ತು ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ. ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ತನಿಖೆ ಆಗಬೇಕು ಅಂತಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ: ಹೊಸ ಬಾಂಬ್ ಸಿಡಿಸಿದ ರೆಡ್ಡಿ
ಇನ್ನು ಬುಡಾ ಅಧ್ಯಕ್ಷ ಜೆಎಸ್ ಆಂಜನೇಯಲು ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಕೂಡ ಹೌದು. ಇತ ಫೆಬ್ರವರಿ 28ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷರಾಗಿ ನೇಮಕವಾಗಿರುತ್ತಾರೆ. ಅಂದರೆ ಅಧಿಕಾರ ಸ್ವೀಕರಿಸಿ ಕೇವಲ ಏಳು ತಿಂಗಳು ಮಾತ್ರ ಕಳೆದಿದೆ. ಅಷ್ಟರಲ್ಲೇ ಇಷ್ಟು ದೊಡ್ಡ ಆರೋಪ ಸ್ವಪಕ್ಷಿಯ ಶಾಸಕರಿಂದಲೇ ಕೇಳಿ ಬಂದಿದೆ.
ಇನ್ನು ಬುಡಾ ಅಧ್ಯಕ್ಷರ ಅಕ್ರಮ ಹಾಗೂ ಅಧಿಕಾರ ದುರುಪಯೋಗದ ಬಗ್ಗೆ ತನಿಖೆ ಆಗಬೇಕು ಅಂತಾ ಸರ್ಕಾರಕ್ಕೆ ಇಬ್ಬರು ಶಾಸಕರು ಪತ್ರ ಬರೆದಿದ್ದಾರೆ. ಅದರಂತೆ ಎಚ್ಚೆತ್ತ ಸರ್ಕಾರ ಬುಡಾ ಅಕ್ರಮದ ತನಿಖೆಗೆ ಆದೇಶ ಮಾಡಿದೆ. ಜೊತೆಗೆ ಆರು ಜನ ಅಧಿಕಾರಿಗಳ ತಂಡ ರಚನೆ ಮಾಡಿದೆ. ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಅಪರ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಇಂದು ಬಳ್ಳಾರಿ ಬುಡಾ ಕಚೇರಿಗೆ ಬಂದು ತಂಡ ತನಿಖೆ ಪ್ರಾರಂಭಿಸಿದೆ. ಕಂಪ್ಲಿ ಶಾಸಕ ಹಾಗೂ ಬಳ್ಳಾರಿ ನಗರ ಶಾಸಕರ ಪತ್ರಗಳ ಉಲ್ಲೇಖದಡಿ ತನಿಖೆ ಶುರುವಾಗಿದೆ. ಅಧಿಕಾರಿಗಳ ತನಿಖೆಗೆ ಸಹಕರಿಸುವುದಾಗಿ ಆಯುಕ್ತ ಕೆ. ಮಾಯಣ್ಣಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಡಿಕೆಗೆ ಗಂಗೇನಹಳ್ಳಿ ಜತೆ ಶ್ರೀಸಾಯಿ ಮಿನರಲ್ಸ್ ಕೇಸ್ ಉರುಳು: ಏನಿದು ಪ್ರಕರಣ?
ಒಟ್ಟಿನಲ್ಲಿ ರಾಜ್ಯ ಮುಡಾ ಬಳ್ಳಾರಿಯಲ್ಲಿ ಬುಡಾ ಹಗರಣ ಸದ್ದು ಮಾಡುತ್ತಿವೆ. ಬುಡದಲ್ಲಿ ಅಕ್ರಮ ನಡೆದಿದೆಯಾ ಎಂಬ ಬಗ್ಗೆ ಸರ್ಕಾರ ತನಿಖೆಗೆ ಆಗ್ರಹ ಮಾಡಿದ್ದು ಆರು ಜನರ ಅಧಿಕಾರಿಗಳ ತಂಡ ತನಿಖೆ ಶುರು ಮಾಡಿದ್ದಾರೆ. ತನಿಖೆ ಬಳಿಕವೇ ಸ್ಪಷ್ಟ ಮಾಹಿತಿ ಹೊರ ಬರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.