ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ ಭೇಟಿಯನ್ನು ಹಾಲು ಜೇನಿನ ಸಂಗಮ ಎಂದು ವರ್ಣಿಸಿದ ಬಿ ವೈ ವಿಜಯೇಂದ್ರ

ಸದಾ ಸಕರಾತ್ಮಕ ಚಿಂತನೆ, ಯೋಜನೆ, ಜನ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮಹಾ ಜೋಡಿ. ಈ ಮಹಾ ಜೋಡಿಯ ನಗುವಿನಲೆಯ ಮೋಡಿ ಎಂದು ಬಿ.ವೈ. ವಿಜಯೇಂದ್ರ ಟ್ವೀಟ್​ ಮಾಡಿದ್ದಾರೆ.

ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ ಭೇಟಿಯನ್ನು ಹಾಲು ಜೇನಿನ ಸಂಗಮ ಎಂದು ವರ್ಣಿಸಿದ ಬಿ ವೈ ವಿಜಯೇಂದ್ರ
ಬಿ.ಎಸ್. ಯಡಿಯೂರಪ್ಪ, ನರೇಂದ್ರ ಮೋದಿ
TV9kannada Web Team

| Edited By: ganapathi bhat

Jul 16, 2021 | 10:58 PM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜುಲೈ 16) ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯನ್ನು ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಟ್ವೀಟ್ ಮಾಡುವ ಮೂಲಕ ಬಣ್ಣಿಸಿದ್ದಾರೆ. ಟ್ವಿಟರ್​ನಲ್ಲಿ ಯಡಿಯೂರಪ್ಪ ಹಾಗೂ ಮೋದಿ ನಗುವಿನ ಪೋಸ್​​​ಗೆ ಬಿ.ವೈ. ವಿಜಯೇಂದ್ರ ವರ್ಣನೆ ಮಾಡಿದ್ದಾರೆ.

ಸದಾ ಸಕರಾತ್ಮಕ ಚಿಂತನೆ, ಯೋಜನೆ, ಜನ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮಹಾ ಜೋಡಿ. ಈ ಮಹಾ ಜೋಡಿಯ ನಗುವಿನಲೆಯ ಮೋಡಿ ಎಂದು ಬಿ.ವೈ. ವಿಜಯೇಂದ್ರ ಟ್ವೀಟ್​ ಮಾಡಿದ್ದಾರೆ. ಇಂದು ಕರ್ನಾಟಕದ ಪಾಲಿಗೆ ಹಾಲು- ಜೇನಿನ ಸಂಗಮದ ಸವಿಯುಣಿಸಿದ ಕ್ಷಣಗಳೆನಿಸಿವೆ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಭೇಟಿ ಮಾಡಿದ್ದಾರೆ. ಕರ್ನಾಟಕ ಭವನದಿಂದ ತೆರಳಿದ ಯಡಿಯೂರಪ್ಪ ದೆಹಲಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಭೇಟಿಯಾಗಿ ನಿವಾಸದಿಂದ ಹೊರಬಂದ ಯಡಿಯೂರಪ್ಪ ಕರ್ನಾಟಕ ಭವನಕ್ಕೆ ಹಿಂದಿರುಗಿದ್ದಾರೆ. ಮೋದಿ ಜತೆ  ಯಡಿಯೂರಪ್ಪ 10 ನಿಮಿಷ ಚರ್ಚೆ ನಡೆಸಿದ್ದಾರೆ. ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ಕೇಳಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೇಕೆದಾಟು ಯೋಜನೆ ಕುರಿತು ಚರ್ಚಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯೂ ಇಲ್ಲ. ಆದರೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ ಎಂದು ತಿಳಿದಿಲ್ಲ. ಮೇಕೆದಾಟು ಯೋಜನೆ ಜಾರಿಗೆ ನಮಗೆ ಅವಕಾಶ ಇದೆ. ನಾವು ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ. ಮೇಕೆದಾಟು ಯೋಜನೆ ಆರಂಭಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಆರು ತಿಂಗಳ ಬಳಿಕ ದೆಹಲಿಗೆ ಬರುತ್ತಿದ್ದೇನೆ. ರಾಜ್ಯದ ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಂಪುಟದ ಹೊಸ ಸಚಿವರನ್ನು ಭೇಟಿ ಮಾಡುತ್ತೇನೆ. ಜತೆಗೆ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್​ರನ್ನು ಭೇಟಿ ಮಾಡುತ್ತೇನೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಬಳಿ ಕರ್ನಾಟಕದ ಹಲವು ಯೋಜನೆಗಳಿಗೆ ಕೇಂದ್ರದ ನೆರವು ಕೋರಿದ ಯಡಿಯೂರಪ್ಪ

Mekedatu Project: ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ; ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅಚಲ ನುಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada