
ಬೆಂಗಳೂರು, ನವೆಂಬರ್ 19: ಲೇಖಕ ರವಿ ಹಂಜ್ ಅವರ ವಿವಾದಾತ್ಮಕ ಹೇಳಿಕೆಗಳು ಈಗ ಬಸವಾನುಯಾಯಿಗಳ ಆಕ್ರೋಶಕ್ಕೆ ಕಿಡಿ ಹೊತ್ತಿಸಿವೆ. ‘ಬಸವ ಮಂಟಪ’ ಕೃತಿ ಹಾಗೂ ವಸಂದರ್ಶನದ ವಿರುದ್ಧ ಸಚಿವರು, ಮಠಾಧೀಶರು ಮತ್ತು ಬಸವಪರ ಸಂಘಟನೆಗಳು ಸಿಡಿದೆದ್ದಿವೆ. ಈ ಬೆನ್ನಲ್ಲೇ ಇಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿದ್ದು, ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು, ಕೃತಿಯ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಎಫ್‌ಐಆರ್ ದಾಖಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಒಬಿಸಿ ನಿಗಮಗಳಡಿ ಸಾಲದ ಮೇಲಿನ ಬಡ್ಡಿ ಮನ್ನಾ ಸೇರಿದಂತೆ SC, ST ಸಹಾಯಧನ ಹೆಚ್ಚಳಕ್ಕೆ ಸಂಪುಟ ಅಸ್ತು ಎಂದಿದೆ.
‘ರವಿ ಹಂಜ ಅಂತ ಹೇಳಿ ಓರ್ವ ವ್ಯಕ್ತಿ ಬಸವ ಮಂಟಪ ಅಂತ ಪುಸ್ತಕವನ್ನ ಬರೆದಿದ್ದು, ಅದು ಪಬ್ಲಿಷ್ ಆಗಿದೆ. ಬಸವಣ್ಣ ಅವರ ಬಗ್ಗೆ ಲೂಟಿಕೋರ, ಕೊಲೆಗಡುಕ, ಕಳ್ಳ ಎನ್ನುವ ಶಬ್ದ ಉಪಯೋಗ ಮಾಡಿದ್ದಾರೆ. ಈ ಕುರಿತು ಸಚಿವ ಸಂಪುಟ ಸುದೀರ್ಘ ಚರ್ಚೆ ಮಾಡಲಾಗಿದೆ. ‘ಬಸವಣ್ಣ ಅವರ ಸದರಿ ಕೃತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು, ಲೇಖಕರು ಮತ್ತು ಪಬ್ಲಿಷರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದೆ. ಇದು ಬಹಳ ಗಂಭೀರ ವಿಚಾರ. ಇದರ ಇಂಪ್ಯಾಕ್ಟ್ ದೊಡ್ಡ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಕ್ಯಾಬಿನೆಟ್ ಈ ತೀರ್ಮಾನ ತೆಗೆದುಕೊಂಡಿದೆ. ಲೇಖಕ ರವಿ ಹಂಜ್ ವಿರುದ್ಧ FIR ದಾಖಲಿಸಲು ತೀರ್ಮಾನಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 7 ನಿಗಮಗಳಿಂದ 2012-13ರಿಂದ 2020-21ರವರೆಗೆ ವಿತರಿಸಲಾದ ಸಾಲದ ಅಸಲನ್ನು ಪೂರ್ಣವಾಗಿ ಮರುಪಾವತಿಸುವ ಸುಮಾರು 2.83 ಲಕ್ಷ ಫಲಾನುಭವಿಗಳಿಗೆ ಒಟ್ಟು 236.04 ಕೋಟಿ ರೂ ಬಡ್ಡಿ ಮನ್ನಾ ಮಾಡಲು ‘ಒಂದಾವರ್ತಿ ತೀರುವಳಿ’ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಸೌಲಭ್ಯವನ್ನು 6 ತಿಂಗಳೊಳಗೆ ಪಡೆದುಕೊಳ್ಳಬೇಕು.
2027ನೇ ಕ್ಯಾಲೆಂಡರ್ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರೆತಿದೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 2027ನೇ ಸಾಲಿನಲ್ಲಿ ಒಟ್ಟು 18 ಸಾರ್ವತ್ರಿಕ ರಜಾದಿನಗಳನ್ನು ಘೋಷಿಸಲಾಗಿದೆ. ಇದರ ಜೊತೆಗೆ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾದಿನಗಳನ್ನು ಹೊರತುಪಡಿಸಿ ಒಟ್ಟು 19 ಪರಿಮಿತ ರಜಾದಿನಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಬೆಂಗಳೂರು ನಗರದ ಕೆಂಗೇರಿ, ವಳಗೇರಹಳ್ಳಿ ಸರ್ವೆ ನಂ. 20/8ರ 2 ಎಕರೆ 18 ಗುಂಟೆ ಜಾಗದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಲ್ಟಿಪ್ಲೆಕ್ಸ್ ಕಟ್ಟಡದ ಎರಡನೇ ಹಂತದ ಕಾಮಗಾರಿಯನ್ನು 68.50 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ರಾಜ್ಯದ 69 ಸಾವಿರ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1.39 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸಮವಸ್ತ್ರ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿಯವರ ‘ನಮ್ಮ ಮನೆ’ ಯೋಜನೆಯಡಿ ರಾಜ್ಯಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 30×40 ಅಡಿ ಅಳತೆಯ 30 ಸಾವಿರ ನಿವೇಶನಗಳನ್ನು ಒದಗಿಸಲು ಸಂಪುಟ ನಿರ್ಧರಿಸಿದೆ.
ಕರ್ನಾಟಕ ಗೃಹ ಮಂಡಳಿ ವತಿಯಿಂದ ರಾಜ್ಯದಾದ್ಯಂತ ಜಮೀನಿನ ಲಭ್ಯತೆಗೆ ಅನುಗುಣವಾಗಿ 6,600 ಎಕರೆ ಪ್ರದೇಶದಲ್ಲಿ EWS, LIG, MIG ಹಾಗೂ HIG ವರ್ಗಗಳ 93,240 ನಿವೇಶನಗಳನ್ನು ಅಂದಾಜು 11,655 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 pm, Thu, 19 November 26