
ಬೆಂಗಳೂರು, ಮಾರ್ಚ್ 25: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಮಹಾಲೇಖಾಪರಿಶೋಧಕರ (CAG) ವರದಿಯು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅನುಷ್ಠಾನದಲ್ಲಿ ಭಾರಿ ಅಕ್ರಮಗಳು ನಡೆದಿರುವುದನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಈಗಾಗಲೇ ಪೂರ್ಣಗೊಂಡ ಮನೆ ಕಾಮಗಾರಿಗಳಿಗೆ ಮತ್ತೆ ಹಣ ಪಾವತಿ ಮಾಡಿರುವುದು, ಅರ್ಹತೆಯಿಲ್ಲದವರಿಗೆ ಹಣ ನೀಡಿರುವುದು ಹಾಗೂ ಯಾವುದೇ ಕೆಲಸ ಮಾಡದೇ ಕಾರ್ಮಿಕರಿಗೆ ವೇತನ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಕೆಲವು ಸ್ಥಳಗಳಲ್ಲಿ ನಿರ್ಮಾಣ ಕಾರ್ಯವೇ ನಡೆಯದಿದ್ದರೂ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಅಲ್ಲದೆ, ನಿಯಮಿತ ಮಿತಿಗಿಂತ ಹೆಚ್ಚು ಹಣ ನೀಡಿರುವುದೂ ವರದಿಯಲ್ಲಿ ಉಲ್ಲೇಖವಾಗಿದೆ. ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಮಕ್ಕಳ ಆರೈಕೆ ಸೌಲಭ್ಯಗಳ ಕೊರತೆಯಿಂದ ಮಹಿಳೆಯರು ಹಾಗೂ ವೃದ್ಧರು ಕೆಲಸದಲ್ಲಿ ಪಾಲ್ಗೊಳ್ಳಲು ಹಿಂಜರಿದಿರುವುದೂ ವರದಿಯಿಂದ ತಿಳಿದುಬಂದಿದೆ.
ನರೇಗಾ ಅಡಿ ಅಂಗೀಕೃತ ಯೋಜನೆಗಳಲ್ಲಿ ಬಹಳಷ್ಟು ಪ್ರಾರಂಭವಾಗದೇ ಉಳಿದಿದ್ದರೆ, ಕೆಲವು ಯೋಜನೆಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಪೂರ್ಣಗೊಳ್ಳದೇ ಉಳಿದಿವೆ ಎಂದು ವರದಿ ತಿಳಿಸಿದೆ.
50 ಪ್ರಕರಣಗಳಲ್ಲಿ ಕಾರ್ಮಿಕರ ಹಾಜರಾತಿ ಗುರುತು ಹಾಕದೇ, ಸಹಿ ಅಥವಾ ಬೆರಳಚ್ಚು ಪಡೆಯದೇ ಇದ್ದರೂ, ಸುಮಾರು 5.51 ಲಕ್ಷ ರೂ. ವೇತನ ಪಾವತಿಸಿರುವುದು ಪತ್ತೆಯಾಗಿದೆ.
ಇನ್ನೊಂದೆಡೆ, 13 ಗ್ರಾಮ ಪಂಚಾಯಿತಿಗಳಲ್ಲಿ 17 ಕೆಲಸಗಳಲ್ಲಿ ತೊಡಗಿದ್ದ 497 ಕಾರ್ಮಿಕರಿಗೆ, ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ 10.98 ಲಕ್ಷ ರೂ. ವೇತನ ಪಾವತಿಸದೇ ಇರುವುದಾಗಿ ಸಿಎಜಿ ವರದಿ ತಿಳಿಸಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳು ರಚನೆಗೊಳ್ಳದ ಕಾರಣ ಅಸಂಬದ್ಧ ಅಂದಾಜುಗಳು, ಕಾಮಗಾರಿಗಳ ಅಸಮರ್ಪಕ ಅನುಷ್ಠಾನ ಮತ್ತು ಅನಿಯಮಿತ ವೆಚ್ಚಗಳು ಆಗಿರುವುದು ಗಮನಕ್ಕೆ ಬಂದಿದೆ.
ಕೆಲವು ಕಾಮಗಾರಿಗಳಲ್ಲಿ ಅಂದಾಜು ಪರಿಷ್ಕರಣೆ ಮಾಡದೇ ಹೆಚ್ಚುವರಿ ವೆಚ್ಚ ಮಾಡಲಾಗಿದೆ. ಜೊತೆಗೆ, ವೈಯಕ್ತಿಕ ಕಾಮಗಾರಿಗಳಲ್ಲಿ ವಸ್ತು ವೆಚ್ಚವನ್ನು ಲಾಭಾರ್ಥಿಗಳಿಗೆ ನೀಡಬೇಕಾದಲ್ಲಿ ನೇರವಾಗಿ ಮಾರಾಟಗಾರರಿಗೆ ಪಾವತಿಸಿರುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.
ಇದನ್ನೂ ಓದಿ: ನರೇಗಾ ಹೆಸರು ವಿವಾದ, ಸರ್ಕಾರ-ಪ್ರತಿಪಕ್ಷಗಳ ನಡುವೆ ಜಟಾಪಟಿ
ಒಟ್ಟಿನಲ್ಲಿ, ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಬಡಜನರ ಆರ್ಥಿಕ ಭದ್ರತೆ ಗುರಿಯಾಗಿಟ್ಟುಕೊಂಡ ಎಂನರೇಗಾ ಯೋಜನೆಯಲ್ಲಿ ಇಂತಹ ಅಕ್ರಮಗಳು ನಡೆದಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
Published On - 10:21 am, Wed, 25 March 26