ವಿಜಯನಗರ: ನಾನು ಯಾವುದೇ ಜಾತಿ ನಿಂದನೆಯಾಗಲಿ ಅಥವಾ ಜೀವ ಬೆದರಿಕೆಯಾಗಲಿ ಹಾಕಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದರು. ಜಾಗದ ವಿಚಾರವಾಗಿ ಮಡಿವಾಳ ಸಮಾಜ ಮತ್ತು ಪೋಲಪ್ಪ ಅವರ ನಡುವೆ ವಿವಾದ ಇತ್ತು. ಈ ಸಂಬಂಧ ಪೋಲಪ್ಪ ಅವರಿಗೆ ಕರೆ ಮಾಡಿ ಸಮಾಜದವರನ್ನ ಕರೆದುಕೊಂಡು ಸ್ಥಳ ಪರಿಶೀಲನೆಗೆ ಹೋಗಿದ್ದೆ, ಈ ವೇಳೆ ನಾನು ಯಾವುದೇ ನಿಂದನೆ ಮಾಡಿಲ್ಲ, ಅವರೇ ನಮ್ಮ ವಿರುದ್ಧ ಮಾತನಾಡಿದರು ಎಂದು ಹೇಳಿದರು.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಆನಂದ್ ಸಿಂಗ್, ಜಾಗದ ವಿಚಾರದಲ್ಲಿ ಮಡಿವಾಳ ಸಮಾಜ ಹಾಗೂ ಪೋಲಪ್ಪ ಕುಟುಂಬದ ಮಧ್ಯೆ ಕಾನೂನು ಹೋರಾಟ ನಡೆಯುತ್ತಿದ್ದು, ಮಡಿವಾಳ ಸಮಾಜದ ಎಲ್ಲ ಹಿರಿಯರು ಬಂದು ನನ್ನನ್ನು ಭೇಟಿ ಆಗಿದ್ದರು. ಮಡಿವಾಳ ಸಮಾಜ ನಮ್ಮ ಜಾಗ ಅಂತಿದ್ದಾರೆ. ಪೋಲಪ್ಪ ಅವರು ನಮ್ಮದು ಅಂತಿದ್ದಾರೆ. ಈ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಕರೆದು ಸಂಧಾನ ಮಾಡಿದ್ದೆ ಎಂದರು.
ನಿನ್ನೆ ನಾನೇ ಪೋಲಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದೆ, ನಂತರ ಮಡಿವಾಳ ಸಮಾಜದವರೊಂದಿಗೆ ದಾಖಲೆ ಹಾಗೂ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಈ ವೇಳೆ ನಗರಸಭೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನಾನು ಯಾವುದೇ ಬೆದರಿಕೆಯಾಗಲಿ, ಜಾತಿ ನಿಂದನೆಯಾಗಲಿ ಮಾಡಿಲ್ಲ. ಮಾತುಕತೆ ವೇಳೆ ನಮ್ಮ ವಿರುದ್ಧವಾಗಿ ಮಾತನಾಡಿ ದೌರ್ಜನ್ಯ ಮಾಡಬಾರದು ಎಂದು ಅವರೇ ಮಾತನಾಡಿದ್ದರು. ಅದು ಪೋಲಪ್ಪ ಪಿತಾರ್ಜಿತ ಆಸ್ತಿ ಅಲ್ಲ. ಪೋಲಪ್ಪನ ಪತ್ನಿಯ ಕುಟುಂಬಕ್ಕೆ ಸೇರಿದ ಆಸ್ತಿ ಆಗಿದೆ ಎಂದು ಹೇಳಿದ್ದೆ ಎಂದರು.
ಸಮಾಜದ ಜನರು ಹೆಚ್ಚಿದ್ದ ಹಿನ್ನೆಲೆ ಎಲ್ಲರೂ ಮಾತನಾಡುವ ವೇಳೆ ನಾನೇ ನಗರಸಭೆ ಅಧಿಕಾರಿಗಳಿಗೆ ದಾಖಲೆಗಳನ್ನ ಪರಿಶೀಲನೆ ನಡೆಸಲು ಹೇಳಿದ್ದೆ. ಸಂಜೆ ನಂತರ ಪೋಲಪ್ಪ ಕುಟುಂಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದುಬಂದಿದೆ. ಪೋಲಪ್ಪ ಯಾವ ಜಾತಿ ಅಂತಾ ಸಹ ನನಗೆ ಗೊತ್ತಿಲ್ಲ. ನಾನು ಜಾತಿ ನಿಂದನೆ ಮಾಡಿಲ್ಲ. ಕಾನೂನಿಗಿಂತ ನಾನು ದೊಡ್ಡವನಲ್ಲ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರೆ ದಾಖಲೆಗಳನ್ನ ಕೊಡಲಿ, ನಾನು ಜಾತಿ ನಿಂದನೆ ಮಾಡಿದ್ದು ನಿಜ ಆಗಿದ್ದರೆ ಕ್ರಮ ಕೈಗೊಳ್ಳಲಿ ಎಂದರು.
ಸಚಿವನಾದರೂ ಪೊಲೀಸರು ತನಿಖೆ ನಡೆಸಲಿ, ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲನೆ ನಡೆಸಲಿ. ನಾನು ಅವರನ್ನ, ಅವರ ಮಕ್ಕಳನ್ನ ಸುಡುವ ಮಾತುಗಳನ್ನ ಹೇಳಿಲ್ಲ. ಇತಂಹ ಅವಕಾಶಗಳನ್ನ ಅವರು ಬಳಸಿಕೊಳ್ಳಲು ಮುಂದಾಗಿದ್ದಾರೆ. ನಾನು ಈ ಪ್ರಕರಣವನ್ನ ಬೆಳಸಲು ಇಷ್ಟಪಡಲ್ಲ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ