ನಿಮ್ಮ ಪ್ರಶ್ನೆಗೆ ಉತ್ತರಿಸಲು ನನಗೆ ತಾಳ್ಮೆಯಿಲ್ಲ: ಗಣತಿದಾರರ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಗರಂ
ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಸಮೀಕ್ಷೆ ಶುರುವಾಗಿದೆ. ಹೀಗಾಗಿ ಗಣತಿದಾರರು ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಸಮೀಕ್ಷೆ ನಡೆಸಿದರು. ಈ ವೇಳೆ ಇಷ್ಟೊಂದು ಪ್ರಶ್ನೆಗಳನ್ನು ಏಕೆ ಕೇಳ್ತೀರಾ, ನಿಮ್ಮ ಪ್ರಶ್ನೆಗೆ ಉತ್ತರಿಸಲು ನನಗೆ ತಾಳ್ಮೆ ಇಲ್ಲ ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 04: ಬೆಂಗಳೂರಿನಲ್ಲಿ ಇಂದಿನಿಂದ ಜಾತಿ ಸಮೀಕ್ಷೆ (caste census) ಶುರುವಾಗಿದೆ. ನನ್ನ ಮನೆಯಲ್ಲೂ ಸಮೀಕ್ಷೆ ಮಾಡಿದ್ದಾರೆ, ಮಾಹಿತಿ ಕೊಟ್ಟಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಜೊತೆಗೆ ಗಣತಿದಾರರ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿ ದಿನ ಎಷ್ಟು ಮನೆಗಳ ಸಮೀಕ್ಷೆ ಮಾಡುತ್ತೀರಿ? ನನ್ನ ಮನೆಯಲ್ಲೇ 1 ಗಂಟೆ ಕೂತಿದ್ದೀರಿ. ನಿಮ್ಮ ಪ್ರಶ್ನೆಗೆ ಉತ್ತರಿಸಲು ನನಗೆ ತಾಳ್ಮೆಯಿಲ್ಲ ಎಂದು ಗರಂ ಆದರು.
ಟೂ ಮಚ್ ಕ್ವಶನ್ಸ್ ಎಂದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಸದಾಶಿವನಗರಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಗಣತಿದಾರರು ಸಮೀಕ್ಷೆ ನಡೆಸಿದರು. ಕೈಪಿಯಲ್ಲಿರುವ ಒಂದೊಂದೇ ಪ್ರಶ್ನೆಗಳನ್ನ ಅಧಿಕಾರಿ ಕೇಳಿದರು. ಧರ್ಮ, ಜಾತಿ ಸೇರಿದಂತೆ ಪ್ರಮುಖ ಪ್ರಶ್ನೆಗಳನ್ನ ಕೇಳಲಾಗಿದೆ. ಅದರಂತೆಯೆ ಡಿಕೆ ಶಿವಕುಮಾರ್ ಸಮಾಧಾನವಾಗಿ ಉತ್ತರಿಸಿದ್ದಾರೆ. ಅವರು ಉತ್ತರಿಸಿದಂತೆಲ್ಲ ಪ್ರಶ್ನೆಗಳು ಮುಂದುವರೆಯುತ್ತಲೇ ಇದ್ದು, ಆಗ ಡಿಸಿಎಂ ಇಷ್ಟೊಂದು ಪ್ರಶ್ನೆಗಳನ್ನು ಏಕೆ ಕೇಳುತ್ತೀರಾ, ಜನರಿಗೆ ಸಮಯ ಮತ್ತು ತಾಳ್ಮೆ ಇರಲ್ಲ. ಮನೆ ಬಗ್ಗೆ ಮಾಹಿತಿ ಕೇಳಿದ ಬಳಿಕ ಜನಸಂಖ್ಯೆ ಬಗ್ಗೆ ಕೇಳಬೇಕು, ಮೊದಲು ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಕೇಳಬೇಕಲ್ವಾ ಎಂದು ಹೇಳಿದ್ದಾರೆ.
ಗಣತಿದಾರನ ಮೇಲೆ ಡಿಕೆ ಶಿವಕುಮಾರ್ ಗರಂ
ಇನ್ನು ಸಮೀಕ್ಷೆ ವೇಳೆ ಪ್ರಶ್ನೆ ಕೇಳುವಾಗ ಡೌಟ್ ಬಂದಿದ್ರಿಂದ ಪಕ್ಕದಲ್ಲಿದ್ದ ಅಧಿಕಾರಿಯನ್ನ ಕೇಳುತ್ತಿರುವಾಗ, ಗಣತಿದಾರನ ಮೇಲೆ ಡಿಕೆ ಶಿವಕುಮಾರ್ ಗರಂ ಆದರು. ನೀನೇ ಪ್ರಶ್ನೆ ಕೇಳು, ನೀನೇನ್ ಅವರ ಪಿಎನಾ ಎಂದಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ಮೂಲಕ ಆರ್ಎಸ್ಎಸ್ ಸದಸ್ಯರ ಟಾರ್ಗೆಟ್: ಸಚಿವ ಪ್ರಲ್ಹಾದ್ ಜೋಶಿ ಬಾಂಬ್
ಸದ್ಯ ಗಣತಿದಾರರು ಕೇಳುತ್ತಿರುವ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಆಕ್ಷೇಪ ಎತ್ತಿದ್ದಾರೆ. ಕುರಿ, ಕೋಳಿ ಸಾಕಿಕೊಂಡ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಎಷ್ಟಕ್ಕೆ ಬೇಕೋ, ಅಷ್ಟಕ್ಕೆ ಮಾತ್ರ ಉತ್ತರ ಕೊಡಿ ಅಂತಾ ಜನರಿಗೆ ಮನವಿ ಕೂಡ ಮಾಡಿದ್ದಾರೆ.
ತಾಳ್ಮೆಯಿಂದ ಮಾಹಿತಿ ಒದಗಿಸಿದರೆ ಮುಂದಿನ ಪೀಳಿಗೆಗೆ ನ್ಯಾಯ ಕೊಟ್ಟಂತೆ ಆಗುತ್ತದೆ. ಸಮೀಕ್ಷೆಯಲ್ಲಿ ಸರಳೀಕರಣ ಮಾಡಬೇಕಿತ್ತು. ಇಂದು ನಾನು ಸಮೀಕ್ಷೆ ಪ್ರತಿ ನೋಡಿದ್ದು, ಬಹಳ ಜಾಸ್ತಿ ಪ್ರಶ್ನೆ ಇದೆ. ಹಾಗಾಗಿ ಅವರಿಗೆ ಕಡಿಮೆ ಕೇಳಿ ಎಂದಿದ್ದೇನೆ. ಯಾರಿಗೂ ತಾಳ್ಮೆ ಇರಲ್ಲ. ಹಳ್ಳಿಯಲ್ಲಿ ಇರುತ್ತೆ ಆದರೆ ನಗರದವರಿಗೆ ಇರಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಜಾತಿ ಸಮೀಕ್ಷೆ: ಕರ್ನಾಟಕದಲ್ಲಿ ಶೇ 63ರಷ್ಟು ಪೂರ್ಣ
ನನಗೆ ಕೇಳುತ್ತಾರೆ ಕೋಳಿ ಸಾಕಿದ್ದೀರಾ ಎಂದು, ಊರಲ್ಲಿದೆ ಅದು ಬೇರೆ ವಿಷಯ. ಸಾರ್ವಜನಿಕರು ಎಲ್ಲರೂ ಮಾಹಿತಿ ಕೊಡಿ. ಆನ್ ಲೈನ್ನಲ್ಲಿಯೂ ಮಾಹಿತಿ ಕೊಡಲು ಅವಕಾಶವಿದೆ. ಕೋರ್ಟ್ ಈಗಾಗಲೇ ಹೇಳಿದೆ, ಬಲವಂತ ಮಾಡಬೇಡಿ ಅಂತ. ಸೂಕ್ಷ್ಮತೆಯಿಂದ ಬೆಂಗಳೂರಲ್ಲಿ ಸಮೀಕ್ಷೆ ಮಾಡಿ ಎಂದು ಹೇಳಿದ್ದೇನೆ ಎಂದರು.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
