
ಬೆಂಗಳೂರು, ಆಗಸ್ಟ್ 24: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯವೂ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಶಿಫಾರಸ್ಸು ಮಾಡಿದೆ. ನವದೆಹಲಿಯಲ್ಲಿ ನಡೆದ ಸಮಿತಿಯ 141ನೇ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯದ ಜಲಾಶಯಗಳಿಂದ ಅಗತ್ಯ ಪ್ರಮಾಣದ ನೀರು ಬಿಡುಗಡೆಗೆ ಸೂಚಿಸಲಾಗಿದೆ.
CWRC ನಿರ್ದೇಶನದ ಪ್ರಕಾರ, ಆಗಸ್ಟ್ 25ರ ಬೆಳಿಗ್ಗೆ 8 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಅಂತಾರಾಜ್ಯ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವನ್ನು ಕಾಯ್ದುಕೊಳ್ಳಬೇಕಿದೆ. ಆ ಮೂಲಕ ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿದುಬರುವಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಮೂಲಕ ಈ ಹರಿವು ಖಚಿತಪಡಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ನಾಲ್ಕು ಜಲಾಶಯಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕುಸಿದಿರುವ ವಾಸ್ತವ ಸ್ಥಿತಿಯನ್ನು ಸಮಿತಿಯ ಮುಂದಿಟ್ಟ ಕರ್ನಾಟಕ, ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಪ್ರಸ್ತುತ ಒಳಹರಿವಿನಲ್ಲಿ ಶೇ. 49.18ರಷ್ಟು ತೀವ್ರ ಇಳಿಕೆಯಾಗಿದೆ ಎಂದು ಪ್ರತಿಪಾದಿಸಿದೆ. ಅಲ್ಲದೆ, ಜುಲೈ 29ರಿಂದ ಆಗಸ್ಟ್ 23ರ ಅವಧಿಯಲ್ಲಿ ನಿಗದಿತ 1,84,500 ಕ್ಯೂಸೆಕ್‌ಗಿಂತ ಹೆಚ್ಚುವರಿಯಾಗಿ 32,493 ಕ್ಯೂಸೆಕ್ ಸೇರಿದಂತೆ ಒಟ್ಟು 2,16,993 ಕ್ಯೂಸೆಕ್ ನೀರನ್ನು ಈಗಾಗಲೇ ಬಿಳಿಗುಂಡ್ಲು ಮೂಲಕ ಹರಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ವಿಚಾರಣೆ ಮುಂದೂಡಿಕೆ, ಕರ್ನಾಟಕಕ್ಕೆ ತಪ್ಪದ ಸಂಕಷ್ಟ
ಇದೇ ವೇಳೆ, ರಾಜ್ಯದ ಅಣೆಕಟ್ಟುಗಳಿಗೆ ಬರುತ್ತಿದ್ದ ಒಳಹರಿವು ಬರೋಬ್ಬರಿ 77,048 ಕ್ಯೂಸೆಕ್‌ನಿಂದ ಕೇವಲ 9,282 ಕ್ಯೂಸೆಕ್‌ಗೆ ಇಳಿಕೆಯಾಗಿರುವುದರಿಂದ, ನೆರೆ ರಾಜ್ಯಕ್ಕೆ ನಿರಂತರವಾಗಿ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಬಾಕಿ ಉಳಿದಿರುವ 17.49 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವು ಕಾಯ್ದುಕೊಳ್ಳಲು ಕೆಆರ್‌ಎಸ್ ಮತ್ತು ಕಬಿನಿಯಿಂದ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು. ಆಗಸ್ಟ್ 24ರಿಂದ ಸೆಪ್ಟೆಂಬರ್ 7ರವರೆಗೆ 15 ದಿನಗಳಲ್ಲಿ 28.386 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ತಲುಪಬೇಕು. ಇದರಲ್ಲಿ 17.49 ಟಿಎಂಸಿ ಬಾಕಿ ಪ್ರಮಾಣದ ಜೊತೆಗೆ 10.896 ಟಿಎಂಸಿ ಪ್ರೊ-ರಾಟಾ ಪಾಲು ಸೇರಿದೆ. ಸಂಕಷ್ಟದಲ್ಲೂ ತಮಿಳುನಾಡಿಗೆ ತನ್ನ ನ್ಯಾಯಸಮ್ಮತ ಪಾಲು ಸಿಗಬೇಕು. ಸಂಕಷ್ಟದ ಸಂಪೂರ್ಣ ಹೊರೆ ತಮಿಳುನಾಡಿನ ಮೇಲೂ ಬೀಳಬಾರದು ಎಂದು ವಾದಿಸಿದೆ.
ವಾದ ಪ್ರತಿವಾದದ ನಂತರ ಕಾವೇರಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಮತ್ತೆ ನೀರು ಬಿಡುವಂತೆ ಸೂಚನೆ ನೀಡಿದೆ. ಕರ್ನಾಟಕದ ಜಲಾಶಯಗಳ ಪ್ರಸ್ತುತ ನೀರು ಸಂಗ್ರಹ, ಕೆಆರ್‌ಎಸ್-ಕಬಿನಿ ಮೇಲ್ಭಾಗದ CWC ಕೇಂದ್ರಗಳ ಅಂಕಿ-ಅಂಶ ಹಾಗೂ ಮುಂದಿನ 7 ದಿನಗಳ ಒಳಹರಿವು ಮುನ್ಸೂಚನೆಗಳನ್ನು ಪರಿಶೀಲಿಸಿದ ಸಮಿತಿ ಈ ತೀರ್ಮಾನ ಕೈಗೊಂಡಿದೆ.
ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕಕ್ಕೆ ಬಿಗ್ ಶಾಕ್, ತಮಿಳುನಾಡಿಗೆ ನೀರು ಹರಿಸುವ CWMA ಸೂಚನೆ ಪಾಲಿಸಲು ಸುಪ್ರೀಂ ಆದೇಶ
ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ಬಿಳಿಗುಂಡ್ಲುವಿನಲ್ಲಿ 9,000 ಕ್ಯೂಸೆಕ್ ಹರಿವು ಖಚಿತಪಡಿಸಬೇಕು ಎಂದು ಸೂಚಿಸಿರುವ ಸಮಿತಿ, ಆಗಸ್ಟ್ 25, 2026ರ ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಈ 9,000 ಕ್ಯೂಸೆಕ್ ಹರಿವನ್ನು ಕಾಯ್ದುಕೊಳ್ಳಬೇಕು ಎಂದು ಆದೇಶಿಸಿದೆ. ಈ 15 ದಿನಗಳಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು 11.66 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು CWRC ತೀರ್ಮಾನಿಸಿದೆ.
ಇನ್ನು ಕಾವೇರಿ ನದಿ ನೀರಿನ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಸತತ ಸವಾಲುಗಳು ಎದುರಾಗುತ್ತಿದ್ದು, ಆರಂಭದಲ್ಲಿ 3,000 ಕ್ಯೂಸೆಕ್, ಆ ಬಳಿಕ 12,000 ಕ್ಯೂಸೆಕ್ ಮತ್ತು ಇದೀಗ ಮೂರನೇ ಹಂತದಲ್ಲಿ ನಿತ್ಯ 9,000 ಕ್ಯೂಸೆಕ್ ನೀರು ಹರಿಸಲು ಪ್ರಾಧಿಕಾರ ಸೂಚನೆ ನೀಡಿದೆ. ಈ ನಡುವೆ ನಾಳೆ ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕೂಡ ನಡೆಯಲಿದೆ.
ವರದಿ: ನಟರಾಜ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:28 pm, Mon, 24 August 26