Cauvery Water Dispute: ದೆಹಲಿಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ
Cauvery Water Dispute: ಕಾವೇರಿ ನದಿ ನೀರು ವಿವಾದ ಸಂಬಂಧ ಇಂದು (ಅಕ್ಟೋಬರ್ 30) ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ. ಮಳೆ ಇಲ್ಲದೇ ಜನ-ಜಾನುವಾರುಗಳು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಇದೆ. ಇದರ ನಡುವೆ ಸಮಿತಿ ಮತ್ತೆ ಯಾವ ನಿರ್ಧಾರ ತೆಗೆದುಕೊಳ್ಳೊತ್ತೋ ಎನ್ನುವ ಆತಂಕ ಎದುರಾಗಿದೆ.
ನವದೆಹಲಿ, (ಅಕ್ಟೋಬರ್ 30): ಕಾವೇರಿ ನದಿ ನೀರು ವಿವಾದ (Cauvery Water Dispute) ಸಂಬಂಧ ಇಂದು (ಅಕ್ಟೋಬರ್ 30) ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ. ಅಕ್ಟೋಬರ್ ಅಂತ್ಯದ ವರಗೆ 3 ಸಾವಿರ ಕ್ಯೂಸೆಕ್ಸ್ ಹರಿಸುವಂತೆ ಮಾಡಿದ್ದ ಆದೇಶ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನವದೆಹಲಿಯಲ್ಲಿ ಸಭೆ ನಡೆಯಲಿದ್ದು, ಮುಂದಿನ ಅವಧಿಗೆ ನೀರು ಹರಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.
ಕೆಲ ದಿನಗಳ ಹಿಂದಷ್ಟೇ ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಸಂಪುಟ ಸಮಿತಿಗೆ ಸೂಚನೆ ನೀಡಿತ್ತು. ಇದರ ನಡುವೆ ಕಂದಾಯ ಸಚಿವ ಕೃಷ್ಣಭೈರೇಗೌಡ ನೇತೃತ್ವದ ರಾಜ್ಯ ಸಂಪುಟ ಸಮಿತಿ ಕೇಂದ್ರ ಕೃಷಿ, ಗೃಹ ಕಾರ್ಯದರ್ಶಿ ಭೇಟಿಯಾಗಿ ಮಾತುಕತೆ ನಡೆಸಿತ್ತು.
ಈ ವರ್ಷ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಮಳೆ ಇಲ್ಲದೇ ಜನ-ಜಾನುವಾರುಗಳು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ಕೆಲವೆಡೆ ಇದೆ. ಡ್ಯಾಂಗಳು ಬತ್ತಿ ಹೋಗಿವೆ. ಇದರ ಮಧ್ಯೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡುತ್ತಾ ಬಂದಿವೆ. ಆದೇಶದಂತೆ ಪ್ರಸ್ತುತ ಕರ್ನಾಟಕ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುತ್ತಿದೆ. ಇದೀಗ ಇದರ ಕಾಲಾವಧಿ ಅಂತ್ಯವಾಗಲಿದೆ. ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ರೈತರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಸದ್ಯ ಈಗ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಿಗದಿಯಾಗಿದ್ದು ಸಮಿತಿ ಮತ್ತೆ ಯಾವ ನಿರ್ಧಾರ ತೆಗೆದುಕೊಳ್ಳೊತ್ತೋ ಎಂಬ ಆತಂಕ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Mon, 30 October 23