ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಕಾಡಾನೆ ಕಳೇಬರ ಪತ್ತೆ; ಕಾಡಾನೆಗಳ ಕಾದಾಟದಿಂದ ಸಾವಾಗಿರುವ ಶಂಕೆ

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಖಾಸಗಿ ಜಮೀನಿನಲ್ಲಿ ಸುಮಾರು 35 ವರ್ಷ ವಯಸ್ಸಿನ ಗರ್ಭಿಣಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಪಶುವೈದ್ಯರ ಮರಣೋತ್ತರ ಪರೀಕ್ಷೆ ವೇಳೆ ಆನೆಯ ಹೊಟ್ಟೆಯಲ್ಲಿ ಮರಿ ಇರುವುದು ದೃಢಪಟ್ಟಿದೆ. ಕಾಡಾನೆಗಳ ಕಾದಾಟದಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಹುಲಿ ಬೇಟೆ ಹಾಗೂ ದಂತ ನಾಪತ್ತೆ ಪ್ರಕರಣಗಳ ಬೆನ್ನಲ್ಲೇ ಈ ಘಟನೆ ನಡೆದಿರುವುದು ಕಳವಳ ಮೂಡಿಸಿದೆ.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಕಾಡಾನೆ ಕಳೇಬರ ಪತ್ತೆ; ಕಾಡಾನೆಗಳ ಕಾದಾಟದಿಂದ ಸಾವಾಗಿರುವ ಶಂಕೆ
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Nov 03, 2026 | 10:13 AM

ಮುಖ್ಯಾಂಶಗಳು

  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗರ್ಭಿಣಿ ಕಾಡಾನೆ ಕಳೇಬರ ಪತ್ತೆಯಾಗಿದೆ.
  • ಗೋಪಾಲಸ್ವಾಮಿ ಬೆಟ್ಟದ ಬಳಿಯ ಖಾಸಗಿ ಜಮೀನಿನಲ್ಲಿ ಹೆಣ್ಣಾನೆ ಶವ ಪತ್ತೆ.
  • ಕಾಡಾನೆಗಳ ನಡುವಿನ ಭೀಕರ ಕಾದಾಟದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತ.

ಚಾಮರಾಜನಗರ, ನವೆಂಬರ್ 03:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಾವು ಮತ್ತು ಬೇಟೆ ಪ್ರಕರಣಗಳು ಆತಂಕ ಮೂಡಿಸಿವೆ. ಕೆಲ ದಿನಗಳ ಹಿಂದಷ್ಟೇ ಹುಲಿ ಬೇಟೆ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಕರಡಿಕಲ್ಲು ಗುಡ್ಡದ ಬಳಿ ದಂತಗಳೇ ನಾಪತ್ತೆಯಾಗಿದ್ದ ಆನೆಯ ಕಳೇಬರ ಪತ್ತೆಯಾಗಿತ್ತು. ಇದೀಗ ಚಾಮರಾಜನಗರದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಆನೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.  ಸುಮಾರು 35 ವರ್ಷದ ಗರ್ಭಿಣಿ ಕಾಡಾನೆ ಮೃತಪಟ್ಟಿರುವುದು ವನ್ಯಜೀವಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.

ಖಾಸಗಿ ಜಮೀನಿನಲ್ಲಿ ಗರ್ಭಿಣಿ ಆನೆಯ ಕಳೇಬರ ಪತ್ತೆ!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಈ ಘಟನೆ ನಡೆದಿದೆ. ಅರಣ್ಯದ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 35 ವರ್ಷ ವಯಸ್ಸಿನ ಹೆಣ್ಣಾನೆ ಮೃತಪಟ್ಟಿರುವುದು ಗೊತ್ತಾಗಿದೆ. ಪಶುವೈದ್ಯ ಡಾ. ಮಿರ್ಜಾ ವಾಸಿಂ ಅವರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಮರಿ ಇರುವುದು ಪತ್ತೆಯಾಗಿದೆ. ಮರಿಯ ವಯಸ್ಸಿನ ಬಗ್ಗೆ ಪ್ರಾಥಮಿಕ ಮಾಹಿತಿಯಲ್ಲಿ ವ್ಯತ್ಯಾಸವಿದ್ದು, ಅಧಿಕೃತ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

ಕಾಡಾನೆಗಳ ಕಾದಾಟದಿಂದ ಸಾವು ಶಂಕೆ!

ಪ್ರಾಥಮಿಕ ಪರಿಶೀಲನೆ ವೇಳೆ ಎರಡು ಕಾಡಾನೆಗಳ ನಡುವಿನ ಕಾದಾಟದಿಂದ ಗರ್ಭಿಣಿ ಆನೆ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಹುಲಿ ಬೇಟೆ, ದಂತ ನಾಪತ್ತೆ ಪ್ರಕರಣದಿಂದ ಆತಂಕ

ಇನ್ನು ಕೆಲ ದಿನಗಳ ಹಿಂದಷ್ಟೇ ಬಂಡೀಪುರದ ಮದ್ದೂರು ವಲಯದ ಹೊಂಗಳ್ಳಿ ಬೀಟ್‌ನಲ್ಲಿ ಉರುಳಿಗೆ ಸಿಲುಕಿ ಹುಲಿ ಬೇಟೆಯಾದ ಪ್ರಕರಣ ವರದಿಯಾಗಿತ್ತು. ಇದರ ಹಿಂದೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬವಾರಿಯಾ ಗ್ಯಾಂಗ್‌ನ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. 2009ರಲ್ಲಿ ಕೊಳ್ಳೇಗಾಲದ ಗುಂಡಾಲ್ ಅಣೆಕಟ್ಟು ಸಮೀಪ ಉಕ್ಕಿನ ಉರುಳು ಬಳಸಿ ಹುಲಿ ಬೇಟೆಯಾಡಿದ್ದ ಪ್ರಕರಣದಲ್ಲೂ ಈ ಗ್ಯಾಂಗ್‌ನ ಸದಸ್ಯರು ಬಂಧನಕ್ಕೊಳಗಾಗಿದ್ದರು.

ಇದನ್ನೂ ಓದಿ ಬಂಡೀಪುರದಲ್ಲಿ ಮತ್ತೆ ಹುಲಿ ಬೇಟೆ ಶಂಕೆ: ಬವಾರಿಯಾ ಗ್ಯಾಂಗ್ ಸಕ್ರಿಯದ ಅನುಮಾನ, ಆನೆ ದಂತವೂ ನಾಪತ್ತೆ!

ಇದರ ಬೆನ್ನಲ್ಲೇ ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು, ದಂತಗಳು ನಾಪತ್ತೆಯಾಗಿದ್ದವು. ಈ ಪ್ರಕರಣಗಳ ಹಿಂದೆ ಒಂದೇ ಗ್ಯಾಂಗ್‌ನ ಕೈವಾಡವಿದೆಯೇ ಎಂಬ ಅನುಮಾನವೂ ಮೂಡಿತ್ತು. ಆದರೆ ಯಾವುದೇ ಪ್ರಕರಣದಲ್ಲೂ ಬವಾರಿಯಾ ಗ್ಯಾಂಗ್‌ನ ನಂಟು ದೃಢಪಟ್ಟಿಲ್ಲ. ಸತತ ಘಟನೆಗಳು ಬಂಡೀಪುರದ ಅರಣ್ಯ ಗಸ್ತು ಮತ್ತು ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 am, Tue, 3 November 26

ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More
Loading...
Unable to load recommendations.
Follow Us