ಬಂಡೀಪುರದಲ್ಲಿ ಮತ್ತೆ ಹುಲಿ ಬೇಟೆ ಶಂಕೆ: ಬವಾರಿಯಾ ಗ್ಯಾಂಗ್ ಸಕ್ರಿಯದ ಅನುಮಾನ, ಆನೆ ದಂತವೂ ನಾಪತ್ತೆ!
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಬೇಟೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇದರ ಹಿಂದೆ ಮಧ್ಯ ಪ್ರದೇಶದ ಬವಾರಿಯಾ ಗ್ಯಾಂಗ್ನ ಕೈವಾಡವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಮತ್ತೊಂದೆಡೆ, ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು, ದಂತಗಳು ನಾಪತ್ತೆಯಾಗಿವೆ. ಎರಡೂ ಪ್ರಕರಣಗಳ ನಡುವೆ ಸಂಬಂಧವಿದೆಯೇ ಎಂಬ ಅನುಮಾನ ಮೂಡಿದೆ.

ಮುಖ್ಯಾಂಶಗಳು
- ಬಂಡೀಪುರದಲ್ಲಿ ಹುಲಿ ಬೇಟೆ ನಡೆದಿರುವ ಶಂಕೆ
- ಆನೆಯ ಕಳೇಬರ ಪತ್ತೆ, ದಂತಗಳು ನಾಪತ್ತೆ
- ಬವಾರಿಯಾ ಗ್ಯಾಂಗ್ ನಂಟಿನ ಬಗ್ಗೆ ಅನುಮಾನ
ಚಾಮರಾಜನಗರ, ಅಕ್ಟೋಬರ್ 14: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಬೇಟೆಯಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದರ ಹಿಂದೆ ಮಧ್ಯಪ್ರದೇಶದ ಬವಾರಿಯಾ ಗ್ಯಾಂಗ್ನ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ, ಬಂಡೀಪುರದ ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು, ಅದರ ದಂತಗಳು ನಾಪತ್ತೆಯಾಗಿವೆ. ಈ ಎರಡೂ ಪ್ರಕರಣಗಳ ನಡುವೆ ಸಂಬಂಧವಿದೆಯೇ ಎಂಬ ಶಂಕೆ ಮೂಡಿದ್ದು, ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಹುಲಿ ಬೇಟೆಯಲ್ಲಿ ನಂಟು ಹೊಂದಿರುವ ಗ್ಯಾಂಗ್
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬವಾರಿಯಾ ಸಮುದಾಯದ ಕೆಲವರು ಹುಲಿ ಬೇಟೆಯಲ್ಲಿ ಪರಿಣತಿ ಹೊಂದಿದ್ದಾರೆ ಎಂಬ ಆರೋಪಗಳಿವೆ. 2009ರಲ್ಲಿ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಅಣೆಕಟ್ಟಿನ ಸುತ್ತಮುತ್ತ ಉಕ್ಕಿನ ಉರುಳು ಬಳಸಿ ಹುಲಿಯನ್ನು ಬೇಟೆಯಾಡಿದ್ದ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿ ಗ್ಯಾಂಗ್ನ ಸದಸ್ಯರನ್ನು ಬಂಧಿಸಿದ್ದರು.
ಉಕ್ಕಿನ ಉರುಳುಗಳನ್ನು ಬಳಸಿ ಹುಲಿಗಳನ್ನು ಸಿಲುಕಿಸುವುದು, ಬಳಿಕ ಈಟಿ ಸೇರಿದಂತೆ ಮಾರಕಾಸ್ತ್ರಗಳಿಂದ ಕೊಂದು ಅವುಗಳ ಚರ್ಮ, ಹಲ್ಲು ಹಾಗೂ ಉಗುರುಗಳನ್ನು ಸಂಗ್ರಹಿಸುವುದು ಈ ಗ್ಯಾಂಗ್ನ ಕಾರ್ಯವಿಧಾನ ಎನ್ನಲಾಗಿದೆ.
ಮದ್ದೂರು ವಲಯದಲ್ಲಿ ಹುಲಿ ಬೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಹೊಂಗಳ್ಳಿ ಬೀಟ್ನಲ್ಲಿ ಉರುಳಿಗೆ ಸಿಲುಕಿ ಹುಲಿ ಬೇಟೆಯಾಗಿರುವ ಪ್ರಕರಣ ವರದಿಯಾಗಿದೆ. ಈ ಕುರಿತು ಬಂಡೀಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಅವರು ‘ಟಿವಿ9ಗೆ’ ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ಕರಡಿಕಲ್ಲು ಗುಡ್ಡದ ಬಳಿ ಆನೆಯ ಕಳೇಬರ ಪತ್ತೆಯಾಗಿದ್ದು, ದಂತಗಳು ನಾಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹುಲಿ ಬೇಟೆ ಹಾಗೂ ಆನೆಯ ದಂತ ನಾಪತ್ತೆ ಪ್ರಕರಣಗಳ ಹಿಂದೆ ಒಂದೇ ಗ್ಯಾಂಗ್ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಎರಡೂ ಘಟನೆಗಳಿಗೆ ಬವಾರಿಯಾ ಗ್ಯಾಂಗ್ನ ನಂಟಿರುವುದು ಇನ್ನೂ ದೃಢಪಟ್ಟಿಲ್ಲ.
ಅರಣ್ಯ ಗಸ್ತಿನ ಬಗ್ಗೆ ಪ್ರಶ್ನೆ
ಹುಲಿ ಬೇಟೆ ಮತ್ತು ಆನೆಯ ದಂತ ನಾಪತ್ತೆ ಪ್ರಕರಣಗಳು ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗಸ್ತು ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಅರಣ್ಯ ಇಲಾಖೆಯ ಮೇಲ್ವಿಚಾರಣೆ ಹಾಗೂ ವನ್ಯಜೀವಿಗಳ ರಕ್ಷಣಾ ವ್ಯವಸ್ಥೆಯ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಮರಿ ವೀರಪ್ಪನ್ನ ಕರಾಳ ಕಥೆಗಳು: ಬಗೆದಷ್ಟೂ ಬಯಲಾಗ್ತಿದೆ ಗೋವಿಂದನ ಅಪರಾಧ ಚಟುವಟಿಕೆಗಳು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಈ ಘಟನೆಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




