ಚಾಮರಾಜನಗರ: ಬಂಡೀಪುರಕ್ಕೆ ತೆರಳಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ
ಬೆಂಗಳೂರಿನ ಜೆ. ನಿಶಾಂತ್, ಅವರ ಪತ್ನಿ ಚಂದನಾ ಮತ್ತು 10 ವರ್ಷದ ಮಗು ಬಂಡೀಪುರದ ಬಳಿ ನಾಪತ್ತೆಯಾಗಿದ್ದಾರೆ. ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ನಿಶಾಂತ್ ಬಿಬಿಎಂಪಿ ನೌಕರ ಎಂದು ನಕಲಿ ಐಡಿಯಿಂದ ರೂಮ್ ಬುಕ್ ಮಾಡಿದ್ದರು. ಪೊಲೀಸರು ತಮಿಳುನಾಡು, ಕೇರಳ ಮತ್ತು ಮೈಸೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಚಾಮರಾಜನಗರ, ಮಾರ್ಚ್ 04: ಗುಂಡ್ಲುಪೇಟೆ (Gundlupete) ತಾಲೂಕಿನ ಬಂಡೀಪುರಕ್ಕೆ (Bandipur) ತೆರಳಿದಿದ್ದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದೆ. ಬಂಡೀಪುರ ಬಳಿಯ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ಕುಟುಂಬ ಭಾನುವಾರ (ಮಾ.02) ರಾತ್ರಿ ವಾಸ್ತವ್ಯ ಹೂಡಿತ್ತು. ಸೋಮವಾರ (ಮಾ.03) ಮಧ್ಯಾಹ್ನದಿಂದ ಕುಟುಂಬ ನಾಪತ್ತೆಯಾಗಿದೆ. ಬೆಂಗಳೂರು ಮೂಲದ ಜೆ.ನಿಶಾಂತ್ (40), ಪತ್ನಿ ಚಂದನಾ ಮತ್ತು 10 ವರ್ಷದ ಗಂಡು ಮಗು ನಾಪತ್ತೆಯಾಗಿದ್ದಾರೆ. ಜೆ.ನಿಶಾಂತ್ ಬ್ಯಾಗ್ ಕಂಟ್ರಿ ಕ್ಲಬ್ ರೆಸಾರ್ಟ್ನಲ್ಲೇ ಇವೆ.
ರೆಸಾರ್ಟ್‌ನಲ್ಲಿ ಲಗೇಜ್ ಬಿಟ್ಟು ಮೂವರು ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಕಾರಿನಲ್ಲಿ ಬಂಡೀಪುರ ಮಂಗಲ ರಸ್ತೆಯವರೆಗೆ ಹೋದವರು, ಅಲ್ಲಿಂದ ನಾಪತ್ತೆಯಾಗಿದ್ದಾರೆ. ಇನ್ನು, ಕುಟುಂಬ ನಾಪತ್ತೆಯಾದ ವಿಚಾರ ತಿಳಿದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಕುಟುಂಬ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ನಿಶಾಂತ್ ಬಿಬಿಎಂಪಿ ನೌಕರ ಎಂದು ಹೇಳಿಕೊಂಡು ನಕಲಿ ಐಡಿ ನೀಡಿ ರೂಮ್ ಬುಕ್ ಮಾಡಿದ್ದನು. ನಾಪತ್ತೆಯಾಗಿರುವ ನಿಶಾಂತ್ ಮೈತುಂಬಾ ಸಾಲ ಮಾಡಿಕೊಂಡಿದ್ದನು. ನಿಶಾಂತ್ ಸದ್ಯ ಯಾವುದೇ ಕೆಲಸ ಕಾರ್ಯ ಮಾಡುತ್ತಿರಲಿಲ್ಲ. ನಿಶಾಂತ್ ಸಾಲಕ್ಕೆ ಹೆದರಿ ಕುಟುಂಬದ ಜತೆ ಬಂಡೀಪುರಕ್ಕೆ ತೆರಳಿದ್ದನು. ಸಾಲಗಾರರು ಅಪಹರಿಸಿರುವ ಶಂಕೆಯಿಂದ ಪೊಲೀಸರಿಂದ ತಲಾಶ್ ನಡೆಸಿದ್ದಾರೆ. ತಮಿಳುನಾಡು, ಕೇರಳ ಹಾಗೂ ಮೈಸೂರು ಸೇರಿದಂತೆ ಹಲವೆಡೆ ಹುಡುಕಾಡುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Tue, 4 March 25